ವರವಾದೀತೆ ಬರ ಪರಿಹಾರ?

ಬಸವರಾಜ ಇದ್ಲಿ ಹುಬ್ಬಳ್ಳಿ: ಚುನಾವಣೆ ನೀತಿ ಸಂಹಿತೆ ಸೇರಿ ನಾನಾ ಕಾರಣಗಳಿಗೆ ಈಗಾಗಲೇ ವಿಳಂಬವಾಗಿರುವ ಕಳೆದ ವರ್ಷದ ಮುಂಗಾರು ಹಂಗಾಮಿನ ಬರ ಪರಿಹಾರ ಶೀಘ್ರ ರೈತರ ಕೈ ಸೇರಲಿದೆ. 2018ರ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಹಾಗೂ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಹೋಬಳಿ ಮಾತ್ರ ಬರಗಾಲ ಪೀಡಿತ ಎಂದು ವರದಿ ನೀಡಲಾಗಿದೆ.

ಈ ಎರಡು ತಾಲೂಕುಗಳಲ್ಲಿ ಬೆಳೆಯಲಾಗಿದ್ದ ತೋಟಗಾರಿಕೆ ಬೆಳೆಗಳಾದ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ನೆಲ ಕಚ್ಚಿದ್ದವು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಯ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿವೆ.

ಎರಡು ತಾಲೂಕಿನಲ್ಲಿ ಸುಮಾರು 22 ಸಾವಿರ ರೈತರು ಈ ಎರಡು ಬೆಳೆಗಳನ್ನು ಬೆಳೆದಿದ್ದರು. ಮಳೆ ಕೊರತೆಯಿಂದಾಗಿ ಕೋಟ್ಯಂತರ ರೂ. ಮೌಲ್ಯದ ಬೆಳೆ ನಷ್ಟವಾದ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಅಂದಾಜು 20 ಕೋಟಿ ರೂ. ಮಂಜೂರು ಮಾಡಿದ್ದು, ಪ್ರತಿ ಹೆಕ್ಟೇರ್​ಗೆ 6800 ರೂ.ನಂತೆ ರೈತರಿಗೆ ಪರಿಹಾರ ನೀಡಲಾಗುತ್ತದೆ. ಎರಡೂ ತಾಲೂಕುಗಳ ಪೈಕಿ ಈಗಾಗಲೇ 8500 ರೈತರಿಗೆ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ರೈತರ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಮೇ ಅಂತ್ಯದ ವೇಳೆಗೆ ಹಣ ಸಂದಾಯ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ತಾರು ಅಡ್ಡಿ: ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟವಾಗಿದ್ದರೂ ಕನಿಷ್ಠ ಪಕ್ಷ ಹಿಂಗಾರು ಬಿತ್ತನೆ ಅಥವಾ ನಷ್ಟವಾದ ಕೆಲ ತಿಂಗಳ ಅವಧಿಯಲ್ಲಿ ಪರಿಹಾರ ಹಣ ರೈತರಿಗೆ ಸಿಗಬೇಕಿತ್ತು. ಆದರೆ, ಈ ವರ್ಷದ ಮುಂಗಾರು ಇನ್ನೇನು ಆರಂಭವಾಗುವ ಹೊತ್ತು ಬಂದಿದೆ. ಆದರೂ ಬರ ಪರಿಹಾರ ಹಣ ಬಂದಿಲ್ಲ. ಜೂನ್ ಮೊದಲ ವಾರ ಈ ವರ್ಷದ ಮುಂಗಾರು ಹಂಗಾಮು ಆರಂಭವಾಗುವ ಸಾಧ್ಯತೆ ಇದ್ದು, ಪರಿಹಾರ ಹಣ ಸಿಕ್ಕರೆ ರೈತರು ಖುಷಿಯಿಂದ ಹೊಲದತ್ತ ಹೆಜ್ಜೆ ಹಾಕಬಹುದಾಗಿದೆ.

ಕಳೆದ ಸಾಲಿನ ಮುಂಗಾರು ಹಂಗಾಮಿನ ತೋಟಗಾರಿಕೆ ಹಾಗೂ ಇತರ ಬೆಳೆಗಳ ಬರ ಪರಿಹಾರದ ಸುಮಾರು 56 ಕೋಟಿ ರೂ. ಧಾರವಾಡ ಜಿಲ್ಲೆ ರೈತರಿಗೆ ಸೇರಬೇಕಾಗಿದೆ. ಅದರ ದಾಖಲೀಕರಣ ಪ್ರಕ್ರಿಯೆ ನಡೆದಿದ್ದು, ಈ ತಿಂಗಳ ಅಂತ್ಯಕ್ಕೆ ರೈತರ ಖಾತೆಗೆ ಹಣ ಸೇರಬಹುದು ಎನ್ನುತ್ತಾರೆ ಧಾರವಾಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ.

ಹಿಂಗಾರಿನಲ್ಲಿ ಇಡೀ ಜಿಲ್ಲೆಯಲ್ಲಿ ಬರಗಾಲ :ಕಳೆದ ವರ್ಷ ಹಿಂಗಾರಿನಲ್ಲಿ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳೂ ಬರ ಪಟ್ಟಿಯಲ್ಲಿ ಸೇರಿವೆ. ಹಿಂಗಾರಿಗೆ ಮಳೆ ಸರಿಯಾಗಿ ಆಗಲೇ ಇಲ್ಲ. ಬಿತ್ತಿದ ಬೀಜ, ಗೊಬ್ಬರದ ಹಣವೂ ಕೈಗೆ ಸಿಗಲಿಲ್ಲ. ಹಾಗಾಗಿ ಧಾರವಾಡ ಜಿಲ್ಲೆ ಅದರಲ್ಲೂ ಎರಡೂ ಹಂಗಾಮಿಗೆ ಬರ ಪಟ್ಟಿಯಲ್ಲಿರುವ ಹುಬ್ಬಳ್ಳಿ- ನವಲಗುಂದ ತಾಲೂಕಿನ ರೈತರು ಹೆಚ್ಚಿನ ನೋವು ಅನುಭವಿಸಿದ್ದಾರೆ.

ಈಗಷ್ಟೇ ಮುಂಗಾರು ಬರ ಪರಿಹಾರ ಬರುವ ನಿರೀಕ್ಷೆ ಮೂಡಿಸಿದೆ. ಕೇಂದ್ರ ಸರ್ಕಾರ ಕಳೆದ ವರ್ಷದ ಮುಂಗಾರಿನ ಬರ ಪರಿಹಾರವಾಗಿ ರಾಜ್ಯಕ್ಕೆ 946 ಕೋಟಿ ರೂ. ಕೊಡಬೇಕಾಗಿದೆ. ಆದರೆ, ಬರೀ 430 ಕೋಟಿ ಬಿಡುಗಡೆ ಮಾಡಿದೆ. ಉಳಿದ ಹಣ ಬಹುತೇಕ ಹೊಸ ಸರ್ಕಾರ ರಚನೆ ನಂತರವೇ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದ್ದು, 22 ಸಾವಿರ ರೈತರ ಪೈಕಿ ಈಗ 8 ಸಾವಿರಕ್ಕೂ ಹೆಚ್ಚು ರೈತರಿಗೆ ಮೊದಲ ಕಂತಿನ ಹಣ ಬ್ಯಾಂಕ್​ಗಳಿಂದ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ. ಉಳಿದ ರೈತರಿಗೂ ಶೀಘ್ರ ಪರಿಹಾರ ಲಭ್ಯವಾಗಲಿದೆ.

ರಾಮಚಂದ್ರ ಮಡಿವಾಳರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ, ಧಾರವಾಡ

Leave a Reply

Your email address will not be published. Required fields are marked *