ವರವಾಗಬೇಕಿದ್ದ ವರುಣ ಶಾಪವಾದಾಗ…

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಸುರಿದ ನಿರಂತರ ಮಳೆಗೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾನಿಗೀಡಾಗಿದ್ದು, ರೈತರ ಪಾಲಿಗೆ ವರವಾಗಬೇಕಿದ್ದ ಮಳೆರಾಯ ಶಾಪವಾಗಿ ಪರಿಣಮಿಸಿದ್ದಾನೆ.

ಈರುಳ್ಳಿ, ಮೆಣಸಿನಕಾಯಿ, ಬಳ್ಳೊಳ್ಳಿ, ದಾಳಿಂಬೆ, ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳು ತೇವಾಂಶ ಹೆಚ್ಚಳವಾಗಿ ಗಿಡ ಸಮೇತ ಕೊಳೆತಿವೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತಾಲೂಕಿನ ಗೋವನಾಳ ಗ್ರಾಮದ ಲಲಿತವ್ವ ಸಂಕ್ಲಿಪೂರ ಎಂಬ ಮಹಿಳೆ ತನ್ನ 2 ಎಕರೆ ಜಮೀನಿನಲ್ಲಿ 30 ಸಾವಿರ ರೂ.ಗಳಿಗೂ ಹೆಚ್ಚು ಖರ್ಚು ಮಾಡಿ ಬೆಳೆದಿದ್ದ ಡೊಣ್ಣ ಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿದೆ. 2 ತಿಂಗಳಿಂದ ಕಷ್ಟ ಪಟ್ಟು ಬೆಳೆಸಿದ್ದ ಮೆಣಸಿನಕಾಯಿ ಫಸಲು ಕೈ ಸೇರುವ ಮುನ್ನ ನೀರು ನಿಂತು ಗಿಡಗಳೆಲ್ಲ ಕೊಳೆತಿವೆ. ಇದೇ ಗ್ರಾಮದ ನಿಂಬಣ್ಣ ಅಗಡಿ, ಬಸನಗೌಡ ಮರಿಲಿಂಗನಗೌಡ್ರ, ನಿಂಗನಗೌಡ್ರ ಕೊರಡೂರ, ವಸಂತಗೌಡ ಕರೇಗೌಡ್ರ, ನಿಂಗನಗೌಡ ಮಣಕಟ್ಟಿನ, ಶೇಖರಗೌಡ ಕರಿಗೌಡರ ಅವರಿಗೆ ಸೇರಿದ ಜಮೀನುಗಳಲ್ಲಿನ ಮೆಣಸಿನಕಾಯಿ ಬೆಳೆ ಹಾಳಾಗಿದ್ದು ಅವರೆಲ್ಲರನ್ನೂ ಚಿಂತೆಗೀಡು ಮಾಡಿದೆ.

423 ಎಕರೆ ತೋಟಗಾರಿಕೆ ಬೆಳೆ ನಾಶ
ತಾಲೂಕಿನಲ್ಲಿ ಒಟ್ಟು 6075 ಹೆಕ್ಟೇರ್ ತೋಟಗಾರಿಕೆ ಬೆಳೆಗಳ ಕ್ಷೇತ್ರವಿದೆ. ಅತಿವೃಷ್ಟಿಯಿಂದ ತೋಟಗಾರಿಕೆ ಬೆಳೆಗಳು ಹಾನಿಯಾದ ಬಗ್ಗೆ ತೋಟಗಾರಿಕೆ ಇಲಾಖೆ ಮಾಹಿತಿಯಂತೆ ಈರುಳ್ಳಿ 338 ಎಕರೆ, ಮೆಣಸಿನಕಾಯಿ 28 ಎಕರೆ, ಟೊಮ್ಯಾಟೊ 13 ಎಕರೆ, ಬದನೆಕಾಯಿ 9 ಎಕರೆ, ಬೆಂಡಿಕಾಯಿ 9 ಎಕರೆ, ಸುಗಂಧಿ-2 ಎಕರೆ, ಬಳ್ಳೊಳ್ಳಿ 15 ಎಕರೆ, ಬಾಳೆ 9 ಎಕರೆ, ದಾಳಿಂಬೆ 30 ಎಕರೆ ಸೇರಿ ಒಟ್ಟು 423 ಎಕರೆ ಬೆಳೆ ಹಾಳಾಗಿದೆ.

ಜಮೀನಿನಲ್ಲಿ ಬೆಳೆದಿದ್ದ ಡೊಣ್ಣ ಮೆಣಸಿನಕಾಯಿ ಗಿಡಗಳೆಲ್ಲ ನೀರಲ್ಲಿ ನಿಂತು ಕೊಳೆಬಾಧೆಗೆ ತುತ್ತಾಗಿವೆ. ಪೀಕು ಕಳೆದುಕೊಂಡು ಬದುಕು ಸಾಗಿಸುವುದೇ ದುಸ್ತರವಾಗಿದೆ. ಸರ್ಕಾರ ಕೂಡಲೇ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ನೀಡಿ ಪುಣ್ಯ ಕಟ್ಟಿಕೊಳ್ಳಬೇಕು.
| ಲಲಿತವ್ವ ಸಂಕ್ಲಿಪೂರ ರೈತ ಮಹಿಳೆ

ಅತಿವೃಷ್ಟಿಯಿಂದ ತಾಲೂಕಿನಲ್ಲಿ ನೂರಾರು ಎಕರೆ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ತಂಡವು ಬೆಳೆ ಹಾನಿ ಪದ್ರೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಯ ಆಧಾರದ ಮೇಲೆ ಹಾನಿಗೀಡಾದ ಬೆಳೆಗಳಿಗೆ ಪರಿಹಾರ ಕೊಡುವ ಕಾರ್ಯ ಮಾಡಲಾಗುವುದು.
| ಸುರೇಶ ಕುಂಬಾರ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ