ವನ್ನಳ್ಳಿ ಕಡಲತೀರದಲ್ಲಿ ಸ್ವಚ್ಛತಾ ಶ್ರಮದಾನ

ಕುಮಟಾ: ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟ್ ನೇತೃತ್ವದಲ್ಲಿ ಪುರಸಭೆ ವತಿಯಿಂದ ವನ್ನಳ್ಳಿ ಕಡಲತೀರದ ಸ್ವಚ್ಛತಾ ಶ್ರಮದಾನ ಭಾನುವಾರ ಕೈಗೊಳ್ಳಲಾಯಿತು.

ವನ್ನಳ್ಳಿ ಬೀಚ್ ಎಂದೇ ಹೆಸರಾಗಿದ್ದು, ಇಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕಾರ್ಯಗಳ ಜತೆಗೆ ಪುರಸಭೆಯಿಂದ ಆಟಿಕೆ ಸಾಮಾನುಗಳನ್ನು ಅಳವಡಿಸಿದ್ದರಿಂದ ಸಾರ್ವಜನಿಕರನ್ನು ಹೆಚ್ಚು ಆಕರ್ಷಿಸತೊಡಗಿತ್ತು. ಇದರ ಅಡ್ಡ ಪರಿಣಾಮವೆಂಬಂತೆ ಇಲ್ಲಿನ ಸ್ವಚ್ಛತೆಯ ನಿರ್ವಹಣೆಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೊದಲ ಪ್ರಯತ್ನ

ಪುರಸಭೆಯ ಪರಿಸರ ಇಂಜಿನಿಯರ್ ನಾಗೇಂದ್ರ ಗಾಂವಕರ ಸಂಪೂರ್ಣ ಸ್ವಚ್ಛತಾ ಶ್ರಮದಾನವನ್ನು ಸಂಯೋಜಿಸಿ ನಿರ್ವಹಿಸಿದರು. ಮುಖ್ಯಾಧಿಕಾರಿ ಸುರೇಶ ಎಂ.ಕೆ., ಉಪವಿಭಾಗಾಧಿಕಾರಿ ಕಾರ್ಯಾಲಯದ ಡಿ.ವಿ. ಗುನಗಾ, ಪುರಸಭೆಯ ವ್ಯಾಯಾಮ ಶಾಲೆ, ವನ್ನಳ್ಳಿ ಶಾಲೆ, ಶಶಿಹಿತ್ತಲ ಐಡಿಯಲ್ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪರಿಸರ ಜಾಗೃತಿ ಸಂಘದ ಅಧ್ಯಕ್ಷ ಎನ್.ಬಿ. ನಾಯ್ಕ ಹಾಗೂ ಸದಸ್ಯರು, ಇತರರು ಭಾಗವಹಿಸಿದ್ದರು.

ಬಾಟಲಿ ಸಾಮ್ರಾಜ್ಯ

ಸಂಜೆಯಾಗುತ್ತಿದ್ದಂತೆ ವನ್ನಳ್ಳಿ ಕಡಲತೀರ ಬಯಲು ಬಾರ್​ನಂತಾಗುತ್ತಿತ್ತು. ವಾಹನಗಳಲ್ಲಿ ಗುಂಪಾಗಿ ಬಂದು ಕುಡಿದು, ತಿಂದು ಕಸದ ರಾಶಿ ಸೃಷ್ಟಿಸುವ ಹಾಗೂ ಬಾಟಲಿಗಳನ್ನು ಒಡೆದು ಹಾಕುವ ಅಪಾಯಕಾರಿ ಪ್ರವೃತ್ತಿ ನಡೆದಿದೆ. ಸ್ವಚ್ಛತಾ ಕಾರ್ಯದ ವೇಳೆ ಸಾವಿರಾರು ಮದ್ಯದ ಬಾಟಲಿಗಳು ಕಂಡು ಬಂದಿದ್ದು, ಇದಕ್ಕೆ ಕಡಿವಾಣ ಹಾಕುವ ಪ್ರಯತ್ನ ಮೊದಲ ಬಾರಿಗೆ ಪುರಸಭೆಯಿಂದ ನಡೆಯುತ್ತಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ದಂಡ ವಿಧಿಸುವ ಎಚ್ಚರಿಕೆ

ಇನ್ನು ಮುಂದೆ ಇಲ್ಲಿ ಕಸ ಹಾಕುವವರಿಗೆ, ಸ್ವಚ್ಛತೆಯನ್ನು ಹಾಳು ಮಾಡುವವರಿಗೆ 500 ರೂ.ದಿಂದ 5000 ರೂ. ವರೆಗೆ ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ಬಯಲು ಮಲ ವಿಸರ್ಜನೆ ಮಾಡದಂತೆ ಸೂಚಿಸಲಾಯಿತು.

ಕಸದಿಂದ ಆದಾಯ

ಪರಿಸರ ಇಂಜಿನಿಯರ್ ನಾಗೇಂದ್ರ ಗಾಂವಕರ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಮನೆಮನೆ ಕಸ ಸಂಗ್ರಹಣೆ ಕಾರ್ಯ ಜಾರಿಯಲ್ಲಿದ್ದರೂ ಒಂದು ವರ್ಷದಿಂದ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದ 200 ಜನರಿಗೆ ದಂಡ ವಿಧಿಸಿ, 50 ಸಾವಿರ ರೂ. ವಸೂಲಿ ಮಾಡಲಾಗಿದೆ. 300 ಜನರಿಗೆ ನೋಟಿಸ್ ನೀಡಲಾಗಿದೆ. ಕಳೆದ 14 ತಿಂಗಳಲ್ಲಿ ಪ್ರತಿ ತಿಂಗಳು ಸಂಗ್ರಹವಾದ ಒಣ ಕಸವನ್ನು ಹರಾಜು ಮಾಡಲಾಗಿದ್ದು, 75 ಸಾವಿರ ರೂ. ಆದಾಯ ಗಳಿಸಲಾಗಿದೆ. ಹಸಿ ಕಸದಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಮೂಲಕ 15 ಸಾವಿರ ರೂ. ಗಳಿಸಲಾಗಿದೆ ಎಂದು ತಿಳಿಸಿದರು.

ಪರಿಸರ ಕಾಳಜಿ ಎಲ್ಲರ ಆದ್ಯ ಕರ್ತವ್ಯ. ಸ್ವಚ್ಛತೆಯನ್ನು ಹಾಳುಗೆಡುವ ಜನರು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.

 ಪ್ರೀತಿ ಗೆಲ್ಹೋಟ್, ಉಪವಿಭಾಗಾಧಿಕಾರಿ