ವದಂತಿ ಹಬ್ಬಿಸಿದರೆ ಜೋಕೆ

ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯನ್ನು ಕಿಡಿಗೇಡಿಗಳು ಮತ್ತೆ ಹಬ್ಬಿಸುತ್ತಿದ್ದಾರೆ. ನಕಲಿ ಫೋಟೋ ಮತ್ತು ಧ್ವನಿ ಮುದ್ರಿಕೆಗಳನ್ನು ಸೃಷ್ಟಿಸಿ ‘ಚಾಪೆ, ಛತ್ರಿ ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ಸೋಗಿನಲ್ಲಿ ಬರುವ ಜನರು ಮಕ್ಕಳನ್ನು ಅಪಹರಿಸುತ್ತಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬಿತ್ತರಿಸುವ ಮೂಲಕ ಜನರಲ್ಲಿ ಭೀತಿ ಮೂಡಿಸುತ್ತಿದ್ದಾರೆ. ಇದು ಪೊಲೀಸರಿಗೆ ತಲೆನೋವು ತಂದಿದೆ.

ಇಂಥದ್ದೇ ವದಂತಿಯಿಂದ ಕಳೆದ ವರ್ಷ ದೇಶದೆಲ್ಲೆಡೆ ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದರು. ಇದೀಗ ಮತ್ತೆ ವಾಟ್ಸ್​ಆಪ್, ಫೇಸ್​ಬುಕ್​ಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಆರಂಭಿಕ ಹಂತದಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಕ್ಕಳ ಕಳ್ಳರ ವದಂತಿಯನ್ನು ತಡೆಗಟ್ಟಲು ನಿಟ್ಟಿನಲ್ಲಿ ಚುರುಕುಗೊಂಡಿದೆ.

ಜನಸಂಪರ್ಕದಲ್ಲಿರಲು ಪೊಲೀಸರಿಗೆ ಸೂಚನೆ: ಸ್ಥಳೀಯ ಪೊಲೀಸರು ನಿತ್ಯ ಒಂದು ಹಳ್ಳಿಗೆ ಭೇಟಿ ಕೊಟ್ಟು ಸಾರ್ವಜನಿಕ ಸಭೆ ಕೈಗೊಂಡು ಊಹಾಪೋಹಗಳಿಗೆ ಕಿವಿಗೊಡದಂತೆ ಅರಿವು ಮೂಡಿಸಬೇಕು. ಅಲ್ಲದೇ, ಆಯಾ ಪೊಲೀಸ್ ಠಾಣೆಗಳ ಇಬ್ಬರು ಪೇದೆಗಳು ಹಗಲು ಮತ್ತು ರಾತ್ರಿ ಹೊತ್ತು ಗಸ್ತು ತಿರುಗುವ ಮೂಲಕ ಜನಸಂಪರ್ಕದಲ್ಲಿರಬೇಕು. ಗಸ್ತು ತಿರುಗುವ ಸಿಬ್ಬಂದಿ ಪ್ರಚೋದನಾಕಾರಿ ಹೇಳಿಕೆ, ಸುಳ್ಳು ವದಂತಿಗಳನ್ನು ಹಬ್ಬಿಸುವವರ ಕುರಿತು ಗುಪ್ತ ವರದಿ ಸಂಗ್ರಹಿಸಬೇಕು. ಈ ಕುರಿತು ಪ್ರತಿನಿತ್ಯ ಸ್ಥಳೀಯ ಠಾಣಾಧಿಕಾರಿಗಳಿಂದ ವರದಿ ಪಡೆಯುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳ ನಿಗಾ: ವಾಟ್ಸ್ ಆಪ್, ಫೇಸ್​ಬುಕ್, ಟ್ವಿಟ್ಟರ್, ಇನ್​ಸ್ಟಾಗ್ರಾಂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು

ಸಂದೇಶಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ಅವುಗಳನ್ನು ಪತ್ತೆ ಹಚ್ಚಿ ಕೂಡಲೇ ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇಲಾಖೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದು ಜನಸಂಪರ್ಕ ಸಾಧಿಸಲು ಒತ್ತು ನೀಡುತ್ತಿದ್ದಾರೆ. ಅಲ್ಲದೇ, ಫಾರ್ವರ್ಡ್ ಸಂದೇಶಗಳಿಗೆ ಹೆಚ್ಚಿನ ಮಹತ್ವಕೊಡದಂತೆ ಜಾಗೃತಿ ಮೂಡಿಸಲು ಟೆಲಿಕಾಲರ್ ಬಳಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ಹಲ್ಲೆ ಮಾಡಿದರೆ ಜೈಲು

ಅನುಮಾನಿತರು ಕಂಡು ಬಂದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ. ಅವರಿಗೆ ಗೊತ್ತಿರುವ ಭಾಷೆಯಲ್ಲಿ ಮಾತನಾಡಿಸಿ. ಕೆಲವು ಸಲ ಮಾನಸಿಕ ಅಸ್ವಸ್ಥರು ಇರಬಹುದು. ಅವರ ಮೇಲೆ ಹಲ್ಲೆ ನಡೆಸಿದರೆ ಜೈಲು ಸೇರಬೇಕಾಗುತ್ತದೆ.

2018ರಲ್ಲಿ ನಡೆದ ಪ್ರಕರಣಗಳು

ಜೂ. 3ರಂದು ಹುಬ್ಬಳ್ಳಿಯ ಬ್ಯಾಹಟ್ಟಿಯಲ್ಲಿ ಆಂಧ್ರಪ್ರದೇಶ ಮೂಲದ ರಾಜು ಎಂಬಾತನ ಮೇಲೆ ಹಲ್ಲೆ. = ಜೂ.11ರಂದು ಕಲಬುರಗಿ ರೈಲು ನಿಲ್ದಾಣದಲ್ಲಿ ಎರಡು ದಿನದ ಕೂಸಿನೊಂದಿಗೆ ಓಡಾಡುತ್ತಿದ್ದ ಮಹಿಳೆ ಮೇಲೆ ಅನುಮಾನ ಜೂನ್​ನಲ್ಲಿ ಚಾಮರಾಜಪೇಟೆಯಲ್ಲಿ ರಾಜಸ್ಥಾನ ಮೂಲದ ಕಾಲರಾಮ್ ಬಚ್ಚರಾಮ್ ಎಂಬಾತನ ಹತ್ಯೆ. ಈ ಸಂಬಂಧ 11 ಮಂದಿಯನ್ನು ಬಂಧಿಸಲಾಗಿತ್ತು. ಜುಲೈ 1ರಂದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ರೈನ್​ಪುರದಲ್ಲಿ ಐವರನ್ನು ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಗ್ರಾಮಸ್ಥರು.

ಸಾಮಾಜಿಕ ಜಾಲತಾಣ ಗಳಲ್ಲಿ ವದಂತಿ ಹಬ್ಬಿಸುವವ ರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ಎಲ್ಲಾ ಜಿಲ್ಲೆಯ ಎಸ್​ಪಿಗಳಿಗೆ ಸೂಚಿಸಲಾಗಿದೆ. ವಿವಿಧ ರೀತಿಯಲ್ಲಿ ಜನ ಜಾಗೃತಿ ಮೂಡಿಸಲಾಗುತ್ತಿದೆ.

| ಕಮಲ್ ಪಂತ್ ಎಡಿಜಿಪಿ

ರೇಡಿಯೋ ಮೂಲಕ ಜಾಗೃತಿ

ರೇಡಿಯೋ ಕೇಂದ್ರಗಳ ಮೂಲಕ ಮಕ್ಕಳ ಕಳ್ಳರ ವದಂತಿಗೆ ಕಿವಿಗೊಡದಂತೆ ಜನರಿಗೆ ತಿಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ವಿಶೇಷ ಜಾಗೃತಿ ಕಾರ್ಯಕ್ರಮ, ಧ್ವನಿ ಮುದ್ರಿಕೆ ನಾಟಕವನ್ನು ಪ್ರಸಾರ ಮಾಡಿಸಲು ಚಿಂತನೆ ನಡೆಸಿದೆ. ಅಲ್ಲದೇ, ಈ ಕುರಿತು ರೇಡಿಯೋ ಕೇಂದ್ರಗಳಲ್ಲಿ ನಡೆಯುವ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.

|ಯಂಕಣ್ಣ ಸಾಗರ್ ಬೆಂಗಳೂರು

Leave a Reply

Your email address will not be published. Required fields are marked *