ವಜ್ರಾಸನದಿಂದ ಮಂಡಿ ಸಮಸ್ಯೆ ಶಮನ

ಕಳೆದ ಎರಡು ವರ್ಷಗಳಿಂದ ಮಂಡಿನೋವು ಕಾಡುತ್ತಿದೆ. ಆಗಾಗ್ಗೆ ಸಾಮಾನ್ಯ ಪೇನ್ಕಿಲ್ಲರ್​ಗಳನ್ನು ತೆಗೆದುಕೊಳ್ಳುತ್ತೇನೆ. ಸಮಸ್ಯೆಗೆ ಪರಿಹಾರ ಸೂಚಿಸಿ.

| ಮಂಜುಮಾಲಿನಿ ಬೀರೂರು

ನಿಮಗೆ ವಜ್ರಾಸನ ಅಭ್ಯಾಸವೇ ಸೂಕ್ತ ಪರಿಹಾರ. ಮಂಡಿಗಳಲ್ಲಿನ ಬಿಗಿತ ಕಡಿಮೆಯಾದರೆ ರಕ್ತ ಸಂಚಾರ ಸುಗಮವಾಗುತ್ತದೆ. ಸಹಜವಾಗಿ ಆ ಸ್ಥಳದಲ್ಲಿ ನೋವು ಕಡಿಮೆಯಾಗುತ್ತದೆ. ಮಂಡಿ ನೋವಿನಿಂದ ಮುಕ್ತಿ ಪಡೆಯಲು ಇದು ಸರಳ ಮತ್ತು ಸೂಕ್ತ ಆಸನ. ನೋವು ಬಂದಿದೆ ಎಂದು ಆತಂಕ ಪಡಬೇಡಿ. ಪೇನ್ ಕಿಲ್ಲರ್​ಗಳ ಅತಿಯಾದ ಬಳಕೆಯೂ ಆರೋಗ್ಯಕ್ಕೆ ಮಾರಕ ಎಂಬುದು ನಿಮಗೆ ನೆನಪಿರಲಿ.

ವಜ್ರಾಸನ ಎಲ್ಲರಿಗೂ ಗೊತ್ತು. ಆದರೆ ಮಾಡಲು ಮುಂದಾಗುವುದಿಲ್ಲ. ವಜ್ರಾಸನ ಮಾಡುವ ಅತ್ಯಂತ ಸರಳ ವಿಧಾನ ತಿಳಿಯಿರಿ. ಯೋಗ ಮ್ಯಾಟನ್ನು ಹಾಸಿ ಒಂದು ಜಮಖಾನವನ್ನು ಮಡಿಸಿ ಇಟ್ಟುಕೊಳ್ಳಿ. ಮಣಿಕಟ್ಟುಗಳು ಜಮಖಾನದ ಮೇಲೆ ಬರುವಂತೆ ಇರಿಸಿ ಕಾಲುಗಳನ್ನು ಹಿಂದಕ್ಕೆ ಹಾಕಿ ಅರ್ಧ ಕುಳಿತುಕೊಳ್ಳಿ. ಒಂದು ದಿಂಬನ್ನು ತೊಡೆ ಮತ್ತು ಮೀನಖಂಡಗಳ ನಡುವೆ ಇಟ್ಟು ದಿಂಬಿನ ಮೇಲೆ ಪೂರ್ಣವಾಗಿ ಕುಳಿತುಕೊಳ್ಳಿ. ಪೃಷ್ಠಭಾಗವನ್ನು ದಿಂಬಿಗೆ ಒತ್ತಿ ಬೆನ್ನನ್ನು ನೇರಗೊಳಿಸಿ. 3ರಿಂದ 5 ನಿಮಿಷಗಳ ಕಾಲ ಸ್ಥಿತಿಯಲ್ಲಿರಿ. ನಂತರ ನಿಧಾನವಾಗಿ ಎದ್ದು ನಿಂತುಕೊಳ್ಳಿ. ದಿಂಬು ಮತ್ತು ಜಮಖಾನದ ಸಹಾಯದಿಂದ ಮಂಡಿಗಳು ನಿಧಾನವಾಗಿ ಮಡಚಲು ಸುಲಭವಾಗುತ್ತದೆ. ಮಂಡಿ, ಕಾಲುಗಳ ಭಾಗಕ್ಕೆ ರಕ್ತಚಲನೆ ಸುಗಮವಾಗಿ ನಡೆಯುತ್ತದೆ. ಇದರಿಂದ ಮಂಡಿಗಳಲ್ಲಿನ ಬಿಗಿತ ಕಡಿಮೆಯಾಗುತ್ತದೆ. ಮಂಡಿ ನೋವು ಶಮನಕ್ಕೆ ಇದು ಉತ್ತಮ ಆಸನ.

ಇನ್ನೊಂದು ವಿಧಾನ: ದಂಡಾಸನ ಅಭ್ಯಾಸ ಸಂದರ್ಭ ಕಾಲುಗಳಿಗೆ ಬೆಲ್ಟ್ ಕಟ್ಟಿಕೊಂಡು ಅಭ್ಯಾಸ ಮಾಡಿ. ಕಾಲುಗಳ ಮತ್ತು ಮಂಡಿಯ ಹಿಂಭಾಗ ಹಿಗ್ಗುವುದರಿಂದ ಬಹುತೇಕ ನೋವು ದೂರಾಗುತ್ತದೆ. ಅದನ್ನು ಅಭ್ಯಾಸ ಮಾಡುವ ವಿಧಾನ ಗಮನಿಸಿ. ಕಾಲುಗಳನ್ನು ಚಾಚಿ, ಬೆಂಚ್ ಅಥವಾ ನೆಲದ ಮೇಲೆ ಕುಳಿತುಕೊಳ್ಳಿ. ಅಗತ್ಯಕ್ಕೆ ತಕ್ಕಂತೆ

ಬೆಲ್ಟ್​ಗಳು, ದಿಂಬುಗಳನ್ನು ಇಟ್ಟುಕೊಳ್ಳಿ. 5 ಕೆ.ಜಿ. ತೂಕದ ಒಂದು ಡಿಸ್ಕ್ ಜೊತೆಗಿರಲಿ. ಮೊಣಕಾಲುಗಳು ಕಮಾನಿನ ಆಕಾರದಲ್ಲಿ ಬಾಗಿದ್ದರೆ ಪಾದಗಳ ನಡುವೆ ಇಟ್ಟಿಗೆ ಅಥವಾ ಬಟ್ಟೆಯನ್ನು ಗಟ್ಟಿಯಾಗಿ ಮಡಿಸಿ ಇಡಿ. 2-4 ಬೆಲ್ಟ್​ಗಳನ್ನು ಕಾಲಿಗೆ ಸುತ್ತಿ. ಮಂಡಿಯಿಂದ ಮೇಲ್ಭಾಗಕ್ಕೆ ತೊಡೆಗಳಿಗೆ 2 ಬೆಲ್ಟ್, ಮಂಡಿಯಿಂದ ಕೆಳಭಾಗಕ್ಕೆ 2 ಬೆಲ್ಟ್ ಹಾಕಿ ಬಿಗಿಗೊಳಿಸಿ. ಪಾದಗಳ ಕೆಳಗೆ ಒಂದು ದಿಂಬನ್ನು ಇರಿಸಿ. ತೊಡೆಗಳ ಮೇಲೆ 5 ಕೆ.ಜಿ. ಭಅರದ ಡಿಸ್ಕನ್ನು ಇಡಿ. 5 ನಿಮಿಷಗಳ ಕಾಲ ಸ್ಥಿತಿಯಲ್ಲಿರಿ. ಡಿಸ್ಕ್ ಮತ್ತು ಬೆಲ್ಟನ್ನು ತೆಗೆದು ಮಂಡಿಗಳ ಕೆಳಗೆ ದಿಂಬನ್ನಿಡಿ. ಕಾಲುಗಳ ಹಿಂಭಾಗ, ಮಂಡಿಯ ಹಿಂಭಾಗ ಹಿಗ್ಗುತ್ತದೆ. ಕ್ರಮೇಣವಾಗಿ ನೋವು ಕಡಿಮೆಯಾಗುತ್ತದೆ. ಸೂಕ್ತ ಯೋಗ ತರಬೇತುದಾರರನ್ನು ಸಂರ್ಪಸಿ. ಹಂತ ಹಂತವಾಗಿ ಅಭ್ಯಾಸ ಮಾಡಿ. ಎರಡೂ ಆಸನ ಅಭ್ಯಾಸದ ನಂತರ ಶವಾಸನ (ವಿಶ್ರಾಂತಿ ಆಸನ) ಮಾಡಬೇಕು. ಇದರಿಂದ ಕೆಳ ಬೆನ್ನಿನ ಸ್ನಾಯುಗಳಿಗೆ, ಕಾಲಿನ ಸ್ನಾಯುಗಳಿಗೆ ವಿಶ್ರಾಂತಿ ಲಭ್ಯ. ಬೆನ್ನಿನಲ್ಲಿ ಲಘುತ್ವದ ಅನುಭವವಾಗುತ್ತದೆ.