ವಚನಕಾರರಿಂದ ಸಮಾಜ ಸುಧಾರಣೆ

ಚಿಕ್ಕಬಳ್ಳಾಪುರ: ಉತ್ತಮ ಸಮಾಜ ನಿರ್ವಣಕ್ಕಾಗಿ ವಚನಕಾರರ ಮಾರ್ಗದರ್ಶನದಂತೆ ಜನ ನಡೆದುಕೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಅನೇಕ ವಚನಕಾರರು ಒಳ್ಳೆಯ ಚಿಂತನೆಯ ಸಂದೇಶಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಶ್ರಮಿಸಿದ್ದಾರೆ. ಇವರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.

ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಮಾತನಾಡಿ, ಕರ್ಮಯೋಗಿಗಳಾದ ಸಿದ್ದರಾಮೇಶ್ವರರು ಸಮಾಜ ಸುಧಾರಣೆ ಸೇವೆಯಲ್ಲಿ ಬದುಕಿನ ಸಿದ್ಧಿ ಕಂಡುಕೊಂಡವರು. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಕಲ್ಯಾಣಿ, ಕೆರೆ-ಕಟ್ಟೆಗಳನ್ನು ನಿರ್ವಿುಸಿದರು. ಮಹಿಳೆಯರ ಸಮಾನತೆಗಾಗಿ ಧ್ವನಿ ಎತ್ತಿದರ ಜತೆಗೆ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಇಂತಹ ವ್ಯಕ್ತಿಯನ್ನು ನಿರಂತರವಾಗಿ ಸ್ಮರಿಸಿ, ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮಾತನಾಡಿ, ಭೋವಿ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಇದಕ್ಕೆ ನಿರೀಕ್ಷೆಗೆ ಅನುಗುಣವಾಗಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ ಕಂಡಿಲ್ಲ. ಇದಕ್ಕೆ ಈಗಲೂ ಕೆಲವರು ಕೀಳಾಗಿ ಮಾತನಾಡುತ್ತಾರೆ. ಇದರಿಂದ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಸಂಘಟಿತರಾಗಬೇಕು. ಆಗ ಮಾತ್ರ ಸವಲತ್ತುಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಶಶಿಧರ್, ತಹಸೀಲ್ದಾರ್ ಕೆ.ನರಸಿಂಹಮೂರ್ತಿ, ತಾಪಂ ಇಒ ಕೆ.ಪಿ.ಸಂಜೀವಪ್ಪ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ಮತ್ತಿತರರು ಇದ್ದರು.

ಸನ್ಮಾನ, ಪುರಸ್ಕಾರ : ಕೋಲಾರ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಕೋಲಾರ ಜಿಲ್ಲಾ ಭೋವಿ ಜನಾಂಗದ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಟಿ.ವೆಂಕಟರಮಣ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.