ಅರಸೀಕೆರೆ: ವಕ್ಫ್ ಮಂಡಳಿ ರೈತರ ಭೂ ಕಬಳಿಕೆ ಮಾಡಲು ಹೊರಟಿರುವ ಕ್ರಮ ಖಂಡಿಸಿ ಹಾಗೂ ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ನಗರಾಧ್ಯಕ್ಷ ಅವಿನಾಶ್ ನಾಯ್ಡು ಮಾತನಾಡಿ, ವಕ್ಫ್ ಮಂಡಳಿ ರೈತರ ಭೂ ಕಬಳಿಕೆ ಮಾಡಲು ಹೊರಟಿರುವುದು ಅಕ್ಷಮ್ಯ. ಆಸ್ತಿ ಮಂಡಳಿಗೆ ಸೇರಿದೆ ಎಂದು ರಾಜ್ಯದ ಉದ್ದಗಲಕ್ಕೂ ನೊಟೀಸ್ ನೀಡುತ್ತಿದೆ. ಇದರಿಂದ ರೈತರು ಭಯದಲ್ಲಿ ಇದ್ದಾರೆ. ಮಠ- ಮಾನ್ಯಗಳು, ಶಾಲೆ-ಕಾಲೇಜುಗಳ ಮೇಲೂ ವಕ್ಫ್ ತನ್ನ ವಕ್ರದೃಷ್ಟಿ ಬೀರಿದೆ. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯೆ ಪ್ರವೇಶಿಸಿ ಎಲ್ಲ ಬೆಳವಣಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಗ್ರಾಮಾಂತರ ಅಧ್ಯಕ್ಷ ಯತೀಶ್ ಮಾತನಾಡಿ, ಉಪ ಚುನಾವಣೆಯಲ್ಲಿ ಗೆಲ್ಲಲು ರೈತರ ನೆರವಿಗೆ ಧಾವಿಸುವುದಾಗಿ ಸುಳ್ಳು ಆಶ್ವಾಸನೆ ನೀಡುತ್ತಿದ್ದು, ವಕ್ಫ್ ಬೋರ್ಡ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎನ್.ಡಿ.ಪ್ರಸಾದ್, ಬಾಣಾವರ ಜಯಣ್ಣ, ನಗರ ಪ್ರಧಾನ ಕಾರ್ಯದರ್ಶಿ ಸಿಂಧು, ಮಂಜುಕುಮಾರ್, ಕಿರಣ್, ನಿಕಟಪೂರ್ವ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಮನೋಜ್‌ಕುಮಾರ್, ಸುನಿಲ್ ಶಾಸ್ತ್ರಿ, ಗಂಗಾಣ್ಣ, ಮಧು, ವಿನೋದ್ ಜೈನ್, ದಿನೇಶ್, ಸಿದ್ದೇಶ್ ಭಂಡಾರಿ, ಅಶೋಕ್, ಚಂದ್ರಕಲಾ, ಸರೋಜಮ್ಮ ಇನ್ನಿತರರು ಪಾಲ್ಗೊಂಡಿದ್ದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.