ಮಡಿಕೇರಿ: ಹಿಂದುಗಳನ್ನು ಧಮನಿಸಿ ತಮ್ಮ ಓಟ್ ಬ್ಯಾಂಕ್ ಗಟ್ಟಿಗೊಳಿಸಲು ಕೆಲವು ರಾಜಕಾರಣಿಗಳು ಮಾಡಿರುವ ವಿಚಿತ್ರ ಕಾಯ್ದೆಯಿಂದಾಗಿ ವಕ್ಫ್ ಬೋರ್ಡ್ ತಮಗೆ ತೋಚಿದ ಸಾರ್ವಜನಿಕ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಇರುವ ವಿಶೇಷ ಕಾಯ್ದೆಯನ್ನು ಅಸ್ತ್ರವಾಗಿ ಬಳಸಿಕೊಂಡು ಹಿಂದುಗಳ ಜಮೀನುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಕೈಹಾಕಿದ್ದು, ಇದನ್ನು ಹಿಂದು ಜಾಗರಣ ವೇದಿಕೆ ಬಲವಾಗಿ ವಿರೋಧಿಸುತ್ತದೆ ಎಂದು ವೇದಿಕೆಯ ಕೊಡಗು ಘಟಕ ಹೇಳಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಕೊಡಗು ಜಿಲ್ಲೆಯ ಯಾವುದೇ ಭಾಗದಲ್ಲಿ ಆ ರೀತಿ ಹಿಂದುಗಳ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದಲ್ಲಿ ಅಥವಾ ನೋಟಿಸ್ ಬಂದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರಲು ವಿನಂತಿಸಿದ್ದಾರೆ.
ತಮ್ಮ ಜಾಗಕ್ಕೆ ಸಂಬಂಧಿಸಿ ಇತ್ತೀಚಿನವರೆಗಿನ ದಾಖಲೆಗಳನ್ನು ಎಲ್ಲರೂ ಕಡ್ಡಾಯವಾಗಿ ಮತ್ತೊಮ್ಮೆ ಪರಿಶೀಲಿಸುವಂತೆ ಕೋರಿದ್ದಾರೆ. ಸಮಸ್ಯೆಗಳಿದ್ದಲ್ಲಿ ವೇದಿಕೆಯ ಪ್ರಮುಖರನ್ನು ಸಂಪರ್ಕಿಸಲು ಕೋರಲಾಗಿದೆ. ಅಂತಹ ಜಮೀನನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಸಂಘಟನೆಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ.