ಕೊಳ್ಳೇಗಾಲ: ವಕ್ಫ್ ಬೋರ್ಡ್ ಕೆಲಸ ಜಮೀನು ಕದಿಯುವುದಾಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಬಿಜಾಪುರದಲ್ಲಿ 16 ಸಾವಿರ ಎಕರೆ ವಕ್ಫ್ ಬೋರ್ಡ್ ಗೆ ಸೇರಿದ್ದು ಎಂದು ನೋಟಿಸ್ ಜಾರಿ ಮಾಡಲಾಗಿದೆ. ರೈತರ ಜಮೀನುಗಳನ್ನು ನಮಗೆ ಸೇರುತ್ತದೆ ಎಂದು ನೋಟಿಸ್ ನೀಡಲಾಗಿದೆ. ಈ ದೇಶದಲ್ಲಿ ಎಲ್ಲರಿಗೂ ಒಂದು ಕಾನೂನಾದರೆ, ವಕ್ಫ್ ಬೋರ್ಡ್‌ಗೆ ಮಾತ್ರ ಬೇರೆ ಇದೆಯೇ ಎಂದು ಪ್ರಶ್ನಿಸಿದರು. ಈ ಬೋರ್ಡ್‌ಗೆ ಇಷ್ಟು ಅಧಿಕಾರ ಕೊಟ್ಟಿದ್ದು ಯಾರು, ಕಾಂಗ್ರೆಸ್ ದೇಶವನ್ನೇ ಮಾರಾಟ ಮಾಡಲು ಕುಳಿತಿದೆಯೇ, 70 ವರ್ಷದಿಂದ ಜನರು ಪರಿತಪಿಸುವ ಕೆಲಸ ಮಾಡಿರುವ ಕಾಂಗ್ರೆಸ್ ಮುಂದೆ ಬಾರಿ ಗಂಡಾಂತರ ಸೃಷ್ಟಿ ಮಾಡುತ್ತದೆ ಎಂದು ಪಟ್ಟಣದ ಪ್ರವಾಸಿ ಮಂದಿರಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಲಿತರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ. ಮುಸ್ಲಿಮರ ಜಾಗಕ್ಕೂ ನೋಟಿಸ್ ಬಂದಿದೆ. ಎಲ್ಲರೂ ಧರಣಿಯಲ್ಲಿ ಕುಳಿತಿದ್ದಾರೆ. ವಕ್ಫ್ ಬೋರ್ಡ್ ವಿಚಾರ ವಾಗಿ ಪಾರ್ಲಿಮೆಂಟರಿ ಸಮಿತಿ ಮಾಡಿದೆ. ಇದನ್ನು ತುರ್ತಾಗಿ ಪರಿಗಣಿಸಬೇಕು, ವಕ್ಫ್ ಬೋರ್ಡ್ ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ದಲಿತರ 25 ಸಾವಿರ ಕೋಟಿ ರೂ.ನುಂಗಿದ್ದಾರೆ. ವಾಲ್ಮೀಕಿ ನಿಗಮದಿಂದ 187 ಕೋಟಿ ರೂ.ಗಳನ್ನು ನೇರವಾಗಿ ಖಾತೆಗೆ ಹಾಕಿಕೊಂಡು ಲೂಟಿ ಮಾಡಿದರು. ಮುಡಾ ವಿಚಾರದಲ್ಲಿ ಬಿಜೆಪಿ ಹೋರಾಟ ಮಾಡಿದ್ದಕ್ಕೆ ಸೈಟ್ ವಾಪಸ್ ಬಂದಿದೆ. ಅನಧಿಕೃತವಾಗಿ ಪಡೆದಿದ್ದ 5 ಎಕರೆ ವಾಪಸಾಗಿದೆ. 187 ಕೋಟಿ ರೂ.ನುಂಗಿದ್ದೀರಾ ಅಂತ ಸಿಎಂ ಕೇಳಿದರೆ, ಇಲ್ಲ ಬರಿ 87 ಕೋಟಿ ರೂ.ಎಂದು ಹೇಳುತ್ತಾರೆ. ಅಡಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಅಲ್ಲವೆ, ಕದ್ದ ಮಾಲು ವಾಪಸ್ ಕೊಟ್ಟರೆ ಆತ ಕಳ್ಳ ಅಲ್ಲವೆ, ಕಾಂಗ್ರೆಸ್ ಸರ್ಕಾರ ಕಳ್ಳರ ಸರ್ಕಾರ ಎಂದು ಹರಿಹಾಯ್ದರು.
ಮೂರು ಕ್ಷೇತ್ರದಲ್ಲಿ ಬೈ ಎಲಕ್ಷನ್ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅಭ್ಯರ್ಥಿ ಹುಡುಕಲು ಯೋಗ್ಯತೆ ಇಲ್ಲದೆ ಬಿಜೆಪಿ ಅವರನ್ನು ಸೆಳೆದಿದ್ದಾರೆ. ಆಮಿಷಗಳಿಗೆ ಬಲಿಯಾಗಿ ಸಿ.ಪಿ.ಯೋಗೇಶ್ವರ್ ಹೋಗಿದ್ದಾರೆ. ಮೂರು ಕಡೆಗಳಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದರು.
ಪಕ್ಷ ಬಿಟ್ಟವರು ಕಪ್ಪೆಗಳು: ಕೊಳ್ಳೇಗಾಲ ನಗರಸಭೆಯಲ್ಲಿ 6 ಸದಸ್ಯರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಛಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯಿಸಿ, ಆಸೆಗಳನ್ನು ಹೊತ್ತುಕೊಂಡು ಬಂದ ರಾಜಕಾರಣಿಗಳು ಒಂದೆಡೆ ಇರುವುದಿಲ್ಲ, ಸ್ವಾಭಿಮಾನದಲ್ಲಿ ಬದುಕಬೇಕು. ಮನುಷ್ಯನಿಗೆ ಎಥಿಕ್ಸ್ ಇರಬೇಕು. ಇಲ್ಲದಿದ್ದರೆ ಕಪ್ಪೆ ರೀತಿ ಕುಪ್ಪಳಿಸಿಕೊಂಡು ಹೋಗುತ್ತಾರೆ. ಕೊಳ್ಳೇಗಾಲದಲ್ಲಿ ಬಿಜೆಪಿ ಸಂಘಟನೆ ಹಿಂದುಳಿದಿಲ್ಲ ಎಂದರು. ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪರಮೇಶ್ವರಯ್ಯ, ಎಸ್ಸಿ ಮೋರ್ಚಾ ನಗರ ಮಂಡಲ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಎಸ್ಟಿ ಮೋರ್ಚಾ ಅಧ್ಯಕ್ಷೆ ಸುಶೀಲಾ ಮತ್ತಿತರಿದ್ದರು.