ವಕೀಲರ ರಕ್ಷಣೆಗೆ ಬಿಜೆಪಿ ಬದ್ಧ

ಧಾರವಾಡ:ವಕೀಲ ವೃತ್ತಿಯಲ್ಲಿ ಎಲ್ಲ ವರ್ಗದ ಜನರು ಇರುತ್ತಾರೆ. ಇಲ್ಲಿ ದೊರಕುವ ಅನುಭವ ಯಾವ ವೃತ್ತಿಯಲ್ಲಿಯೂ ದೊರಕದು. ವಕೀಲರು ಮಾಡಿದ ಸಾಕಷ್ಟು ಹೋರಾಟಗಳಿಗೆ ಬಿಜೆಪಿ ಬೆಂಬಲ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ವಕೀಲ ರಕ್ಷಣೆಗಾಗಿ ವಿಶೇಷ ಯೋಜನೆ ಜಾರಿಗೆ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ನಗರದ ಮಂದಾರ ಹೋಟೆಲ್​ನಲ್ಲಿ ಶನಿವಾರ ಆಯೋಜಿಸಿದ್ದ ‘ದೇಶಕ್ಕಾಗಿ ಮೋದಿ ಮೋದಿಗಾಗಿ ನ್ಯಾಯವಾದಿ’ ಎಂಬ ವಕೀಲರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

5 ವರ್ಷ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಿರುವ ಎನ್​ಡಿಎ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿವೆ. ಇದನ್ನು ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ಪ್ರಧಾನಿ ಮೋದಿ 5 ವರ್ಷ ಅವಿಶ್ರಾಂತರಾಗಿ ದೇಶಕ್ಕಾಗಿ ದುಡಿದಿದ್ದಾರೆ. ಅವರ ಕಾರ್ಯವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಪ್ರತಿಪಕ್ಷಗಳಿಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲು ವಿಷಯಗಳು ಇಲ್ಲ. ರಾಷ್ಟ್ರ ರಕ್ಷಣೆಯಲ್ಲಿ ಮೋದಿ ಕೈಗೊಂಡ ನಿರ್ಧಾರಗಳು ಮಾದರಿಯಾಗಿವೆ.

ಲೋಕಸಭೆಯಲ್ಲಿ ಪ್ರಲ್ಹಾದ್ ಜೋಶಿ ರಾಜ್ಯದ ಪರವಾಗಿ ಉತ್ತಮವಾಗಿ ಮಾತನಾಡುತ್ತಾರೆ. ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ ಜೋಶಿ ಅವರನ್ನು ಬೆಂಬಲಿ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಕೋರಿದರು. ಹಿರಿಯ ವಕೀಲ ಕೆ.ಬಿ. ನಾವಲಗಿಮಠ, ಡಾ. ಕಲ್ಮೇಶ ಹಾವೇರಿಪೇಟ್, ಅರುಣ ಜೋಶಿ, ಇತರರು ಉಪಸ್ಥಿತರಿದ್ದರು.

ವಕೀಲರಿಗೆ ವಸತಿ ಸೌಲಭ್ಯ: ಹುಬ್ಬಳ್ಳಿಯ ನೂತನ ಕೋರ್ಟ್ ಪಕ್ಕದಲ್ಲಿ 18 ಎಕರೆ ಜಮೀನು ಇದೆ. ಅಲ್ಲಿ ವಕೀಲರಿಗೆ ನಿವೇಶನ ಒದಗಿಸಿಕೊಡಬಹುದಾಗಿದೆ. ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ಆದ್ದರಿಂದ ವಕೀಲರಿಗೆ ಭದ್ರತೆ, ರಕ್ಷಣೆ ನೀಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಜಗದೀಶ ಶೆಟ್ಟರ್ ಅವರು ವಕೀಲರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಸಿಎಂಗೆ ಒಳಗೊಳಗೆ ಖುಷಿ

ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ತುಂಬಿದೆ. ಇತ್ತೀಚೆಗೆ ನಾನು ದೇವೇಗೌಡರ ಪತ್ನಿ ಚೆನ್ನಮ್ಮ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ಹೇಳಿದ್ದೆ. ಅದಕ್ಕೆ ಸಿಎಂ ಕುಮಾರಸ್ವಾಮಿ ಕೋಪಿಸಿಕೊಂಡಿದ್ದಾರೆ. ನಾನು ಚೆನ್ನಮ್ಮ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ಹೇಳಿದ್ದೆನೇ ಹೊರತು ತಪ್ಪು ಮಾತನಾಡಿಲ್ಲ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಮೇಲ್ನೋಟಕ್ಕೆ ಬೇಸರ ವ್ಯಕ್ತಪಡಿಸಿದರೂ ಒಳಗೊಳಗೆ ಖುಷಿ ಪಡುತ್ತಾರೆ ಎಂದು ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಲಕ್ಷ್ಮೀ ಹೆಬ್ಬಾಳಕರ ಮತಯಾಚನೆ

ಸತ್ಯ, ನ್ಯಾಯ ಹಾಗೂ ಪ್ರೀತಿ ಕಾಂಗ್ರೆಸ್​ನ ತತ್ತ್ವಗಳು. ಎಲ್ಲ ಸಮಾಜದವರ ಅಭಿವೃದ್ಧಿಗಾಗಿ ಶ್ರಮಿಸುವ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ತಾಲೂಕಿನ ಮುಮ್ಮಿಗಟ್ಟಿ ಬಳಿಯ ಸಾಯಿ ಅರಣ್ಯ ಭವನದಲ್ಲಿ ನರೇಂದ್ರ ಹಾಗೂ ಗರಗ ಜಿ.ಪಂ. ವ್ಯಾಪ್ತಿಯ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್​ನಿಂದ ಬಡವರ ಪಟ್ಟಿ ಸಿದ್ಧಪಡಿಸಿದ್ದು, ಕನಿಷ್ಠ ಆದಾಯ ಖಾತ್ರಿ ಯೋಜನೆ ಅಡಿ ಕಡುಬಡವರಿಗೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡುವ ಗುರಿ ಹೊಂದಿದ್ದೇವೆ. ಈ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿವರ್ಷ ಜಮೆ ಆಗಲಿದೆ. ಆದರೆ, ಬಿಜೆಪಿ ಸರ್ಕಾರ ನೋಟು ನಿಷೇಧಿಸಿ, ಜನ್​ಧನ್ ಖಾತೆ ತೆರೆಸಿ ಬಡವರ ಜೇಬಿನಿಂದಲೇ ಹಣ ಕಸಿದುಕೊಂಡಿದೆ ಎಂದರು. ಶಿವಲೀಲಾ ವಿನಯ ಕುಲಕರ್ಣಿ, ನಯನಾ ಮೋಟಮ್ಮ, ಶಾಂತವ್ವ ಗುಜ್ಜಳ, ರಾಜೇಶ್ವರಿ ಪಾಟೀಲ, ರೇಣುಕಾ ಕಳ್ಳಿಮನಿ, ಸುನೀತಾ ಹುರಕಡ್ಲಿ, ಕರಿಯಪ್ಪ ಮಾದರ, ಶಿವನಗೌಡ ಪಾಟೀಲ, ಮಡಿವಾಳಗೌಡ ಪಾಟೀಲ ಹಾಗೂ ವಿವಿಧ ಗ್ರಾ.ಪಂ. ಸದಸ್ಯರಿದ್ದರು.

ಗಿರಣಿ ಚಾಳದಲ್ಲಿ ಮತಯಾಚನೆ

ಹುಬ್ಬಳ್ಳಿಯ ವಾರ್ಡ್ ನಂ. 45, 56ರಲ್ಲಿ ಯಾತಗೇರಿ ಸಹೋದರರ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪಾದಯಾತ್ರೆ ಮೂಲಕ ಮತ ಯಾಚಿಸಲಾಯಿತು. ವಾರ್ಡ್​ನ ಪಿಎನ್​ಟಿ ಕ್ವಾರ್ಟರ್ಸ್, ಗಿರಣಿ ಚಾಳ ಹಾಗೂ ಚಾಣಕ್ಯಪುರಿಯಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು.

Leave a Reply

Your email address will not be published. Required fields are marked *