ವಕೀಲನಿಗೆ ಸಾರಿಗೆ ಸಿಬ್ಬಂದಿ ಹಲ್ಲೆ

ತುಮಕೂರು: ಎಚ್​ಎಂಟಿ (ಇಸ್ರೋ) ಬಳಿ ಬಸ್ ನಿಲುಗಡೆಗೆ ಹೈಕೋರ್ಟ್ ಆದೇಶವಿದ್ದರೂ ನಿಲ್ಲಿಸದ ಕೆಎಸ್​ಆರ್​ಟಿಸಿ ಕ್ರಮ ಪ್ರಶ್ನಿಸಿದ ಹೈಕೋರ್ಟ್ ವಕೀಲರೊಬ್ಬರ ಮೇಲೆ ಸಾರಿಗೆ ಸಿಬ್ಬಂದಿ ಶನಿವಾರ ಹಲ್ಲೆ ನಡೆಸಿದ್ದಾರೆ.

ವಿಜಯಾಬಾಯಿ ಎಂಬುವವರು ಶುಕ್ರವಾರ ಸರ್ಕಾರಿ ಬಸ್​ನಲ್ಲಿ ಬೆಂಗಳೂರಿನಿಂದ ಬಂದಿದ್ದು, ಇಸ್ರೋ ಎದುರು ಬಸ್ ನಿಲ್ಲಿಸದಿರುವ ಕ್ರಮ ಪ್ರಶ್ನಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ದೂರು ನೀಡಿದ್ದರು. ದೂರಿಗೆ ಸ್ಪಂದಿಸದ್ದರಿಂದ ಕೆಎಸ್​ಆರ್​ಟಿಸಿ ಕಚೇರಿಯಲ್ಲಿ ಪ್ರತಿಭಟನೆಗೆ ಮುಂದಾದ ಹೈಕೋರ್ಟ್ ವಕೀಲ ರಮೇಶ್ ನಾಯ್್ಕ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.

ಗೋಕುಲ ಬಡಾವಣೆ, ಬಡ್ಡಿಹಳ್ಳಿ, ಮಹಾಲಕ್ಷ್ಮೀನಗರ ಹಾಗೂ ಶ್ರೀನಗರ ಬಡಾವಣೆಯ ಸಾವಿರಾರು ಜನರು ಪರವಾಗಿ ಬೆಂಗಳೂರು-ತುಮಕೂರು ಮಾರ್ಗದ ತಡೆರಹಿತ ಬಸ್ ಕೋರಿಕೆ ನಿಲುಗಡೆಗೆ ಹೈಕೋರ್ಟ್​ನಲ್ಲಿ ರಮೇಶ್ ನಾಯ್್ಕ ಪಿಎಎಲ್ ಹಾಕಿದ್ದರು. 2018 ಅ.5ರಂದು ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಆದೇಶ ಹೊರಡಿಸಿ ತುಮಕೂರು-ಬೆಂಗಳೂರು-ತುಮಕೂರು ನಡುವೆ ಸಂಚರಿಸುವ ವೇಗದೂತ, ಸಾಮಾನ್ಯ ಹಾಗೂ ನಗರ ಸಾರಿಗೆ ಬಸ್​ಗಳು ಎಚ್​ಎಂಟಿ ಬಳಿ ಹೋಗುವಾಗ, ಬರುವಾಗ ಕೋರಿಕೆ ನಿಲುಗಡೆ ನೀಡುವಂತೆ ಚಾಲಕರು, ನಿರ್ವಾಹಕರಿಗೆ ಸೂಚಿಸಿದ್ದರು. ಹಿರಿಯ ಅಧಿಕಾರಿಯ ಆದೇಶವಿದ್ದರೂ ಚಾಲಕರು ಬಸ್ ನಿಲ್ಲಿಸದೆ ಪ್ರಯಾಣಿಕರೊಂದಿಗೆ ಜಗಳ ಮಾಡುವುದು ಸಾಮಾನ್ಯವಾಗಿತ್ತು.

ವಿಜಯಾಬಾಯಿ ದೂರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಸ್ಪಂದಿಸದ್ದರಿಂದ ವಕೀಲ ರಮೇಶ್ ನಾಯ್್ಕ ಶನಿವಾರ ಬೆಳಗ್ಗೆ ಬಸ್ ನಿಲ್ದಾಣದಲ್ಲಿಯೇ ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಮಾತಿನ ಚಕಮಕಿ ನಡೆದು ಸಾರಿಗೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ರಮೇಶ್​ನಾಯ್್ಕ ನಗರ ಠಾಣೆಗೆ ದೂರು ನೀಡಿದ್ದಾರೆ.

ಬಸ್ ನಿಲ್ದಾಣದ ಬಳಿ ಶನಿವಾರ ಗೊಂದಲ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವಕೀಲ ರಮೇಶ್​ನಾಯ್್ಕ ಕೋರಿಕೆಯಂತೆ ಚುನಾವಣೆ ಮತ ಎಣಿಕೆ ನಂತರ ಜನಸಂಪರ್ಕ ಸಭೆ ನಡೆಸಲಾಗುವುದು.

| ಡಿ.ಫಕ್ರುದ್ದೀನ್, ವಿಭಾಗೀಯ ಸಂಚಲನಾ ಅಧಿಕಾರಿ

Leave a Reply

Your email address will not be published. Required fields are marked *