ವಂಚನೆ ವಿರುದ್ಧ ದೂರು ದಾಖಲಿಸುವವರು ಕಡಿಮೆ

ಶಿವಮೊಗ್ಗ: ಅನ್ಯಾಯಕ್ಕೆ ಒಳಗಾಗುವ ಗ್ರಾಹಕರು ದೂರು ದಾಖಲಿಸುವ ಸಂಖ್ಯೆ ಕಡಿಮೆ ಇರುವುದರಿಂದ ಮೋಸ ಮಾಡುವವರ ಪ್ರಮಾಣ ಹೆಚ್ಚುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದರು.

ನಗರದ ಎಸ್​ವಿಕೆ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ತನಗೆ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಬೇಕು. ಹೆಚ್ಚಿನ ಪ್ರಕರಣ ದಾಖಲಾಗಿ ಶಿಕ್ಷೆಯಾದರೆ ಮೋಸ ಮಾಡುವ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿನಿಂದ ಸಾವಿನ ತನಕ ಗ್ರಾಹಕ ಆಗಿರುತ್ತಾನೆ. ಭಾರತ ಅತಿ ಹೆಚ್ಚು ಗ್ರಾಹಕರ ಒಳಗೊಂಡ ದೇಶ. ಗ್ರಾಹಕರು ಹೆಚ್ಚಿದ್ದರೆ ಬೇಡಿಕೆಯೂ ಅಧಿಕ ಆಗಿರುತ್ತದೆ. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಗ್ರಾಹಕರಿಗೆ ಮೋಸ ಮಾಡುವ ಸಂದರ್ಭ ಕೂಡ ಅಧಿಕ ಎಂದು ಹೇಳಿದರು.

ಆನ್​ಲೈನ್ ಮಾರುಕಟ್ಟೆ ವಿಸ್ತಾರ ಆಗುತ್ತಿರುವ ಜಗತ್ತಿನಲ್ಲಿ ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು. ಕೊಳ್ಳುಬಾಕ ಮನೋಸ್ಥಿತಿ ಬಿಟ್ಟು ಅಗತ್ಯವಿರುವ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು. ರೈತರು ಗ್ರಾಹಕರಾಗಿ ಹಾಗೂ ಮಾರಾಟಗಾರರಾಗಿ ಮೋಸ ಹೋಗುತ್ತಾರೆ. ದಲ್ಲಾಳಿಗಳು ರೈತರಿಗೆ ಮೋಸ ಮಾಡುತ್ತಾರೆ. ರೈತರು ಜಾಗೃತರಾಗಬೇಕು ಎಂದು ತಿಳಿಸಿದರು.

ಎನ್​ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ಮಾಹಿತಿ ಕೊರತೆ ಹಾಗೂ ನ್ಯಾಯ ಸಿಗುವುದು ಕಷ್ಟವೆಂಬ ನಿರಾಶಾ ಭಾವನೆಯಿಂದ ಗ್ರಾಹಕರು ನ್ಯಾಯ ಪಡೆದುಕೊಳ್ಳಲು ವಿಫಲರಾಗುತ್ತಾರೆ. ಇಂತಹ ಮನೋಸ್ಥಿತಿ ಹೆಚ್ಚಿರುವುದರಿಂದ ಗ್ರಾಹಕರು ಮೋಸ ಹೋಗುತ್ತಲೇ ಇದ್ದಾರೆ ಎಂದು ಹೇಳಿದರು.

ಗ್ರಾಹಕರು ಕಾನೂನಿನ ಗ್ರಾಹಕರ ಹಕ್ಕುಗಳ ಅಧ್ಯಯನ ಮಾಡಬೇಕು. ತಿಳಿವಳಿಕೆ ಇದ್ದರೆ ಮೋಸ ಹೋಗಲು ಸಾಧ್ಯವಿಲ್ಲ. ಗ್ರಾಹಕರ ವೇದಿಕೆ ಮಾರ್ಗದರ್ಶನ ಹಾಗೂ ಸಹಕಾರ ಪಡೆದುಕೊಂಡು ಅನ್ಯಾಯಕ್ಕೆ ಒಳಗಾದ ಸಂದರ್ಭದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಬೇಕು ಎಂದು ತಿಳಿಸಿದರು.

ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ತೂಕ ಉಪಕರಣಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಸಿ.ಬಾದಾಮಿ ಅಧ್ಯಕ್ಷತೆ ವಹಿಸಿದ್ದರು. ಎನ್​ಇಎಸ್ ಕುಲಸಚಿವ ಪ್ರೊ. ಟಿ.ಎಸ್.ಹೂವಯ್ಯಗೌಡ, ಬಳಕೆದಾರರ ವೇದಿಕೆ ಅಧ್ಯಕ್ಷ ಬಿ.ವಿ.ಗೋಪಾಲಕೃಷ್ಣ, ಕಾರ್ಯದರ್ಶಿ ಬಿ.ಎಸ್.ನಾಗರಾಜ್, ಎಸ್​ವಿಕೆ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಕೆ.ಪ್ರಕಾಶ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಎ.ಟಿ.ಜಯಪ್ಪ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಚ್.ಎಸ್.ರಾಜು, ಎಂ.ಎಂ.ಜಯಸ್ವಾಮಿ ಇದ್ದರು.

ಗಮನ ಸೆಳೆದ ಅಣಕು ಪ್ರದರ್ಶನ: ಗ್ರಾಹಕರು ತೂಕ, ಗುಣಮಟ್ಟ, ಬೆಲೆ ಹಾಗೂ ಪ್ರಮಾಣ ವಿಷಯಗಳಲ್ಲಿ ಮೋಸ ಹೋಗುವ ಮುನ್ನ ಎಚ್ಚರ ವಹಿಸುವಂತೆ ವಿದ್ಯಾರ್ಥಿನಿಯರು ಮಾಡಿದ ಬೀದಿ ನಾಟಕ ಅಣಕು ಪ್ರದರ್ಶನ ಗಮನಸೆಳೆಯಿತು. ಸಭಾ ಕಾರ್ಯಕ್ರಮದಲ್ಲಿ ಡಿಸಿ ಭಾಷಣ ಮುಗಿಯುತ್ತಿದ್ದಂತೆ ಕೆಲ ವಿದ್ಯಾರ್ಥಿನಿಯರು ವಾಗ್ವಾದ ಶುರು ಮಾಡಿಕೊಂಡರು. ಆದರೆ ಕೆಲ ಕ್ಷಣಗಳಲ್ಲೇ ತಿಳಿಯಿತು ಇದು ಗ್ರಾಹಕರ ಹಕ್ಕುಗಳ ಕುರಿತು ಅರಿವು ಮೂಡಿಸುವ ಬೀದಿ ನಾಟಕದ ದೃಶ್ಯವೆಂದು. ಅಣಕು ಪ್ರದರ್ಶನಕ್ಕೆ ಡಾ. ಎಸ್.ಕೆ.ಚಿದಾನಂದ ಮಾರ್ಗದರ್ಶನ ನೀಡಿದ್ದರು.