ಲ್ಯಾಂಡ್​ಫಿಲ್ ಸೃಷ್ಟಿ ಶಿಕ್ಷಾರ್ಹ ಅಪರಾಧ ಎಂದು ಬಿಬಿಎಂಪಿಯನ್ನು ಎಚ್ಚರಿಸಿದ ನ್ಯಾ. ಸುಭಾಷ್ ಬಿ.ಆಡಿ: ನ. 1ಕ್ಕೆ ತ್ಯಾಜ್ಯಮುಕ್ತ ನಗರವಾಗಿಸಲು ಸಲಹೆ

ಬೆಂಗಳೂರು: ಕಲ್ಲು ಗಣಿ ಹೊಂಡಗಳಲ್ಲಿ ಮಿಶ್ರತ್ಯಾಜ್ಯ ವಿಲೇವಾರಿ ಮಾಡಿದರೆ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹೊಸದಾಗಿ ಲ್ಯಾಂಡ್​ಫಿಲ್​ಗಳ ಸೃಷ್ಟಿಗೆ ಅವಕಾಶವಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಹೇಳಿದ್ದಾರೆ.

ಬೆಂಗಳೂರಿಗೆ ಬಿಬಿಎಂಪಿ ಸಿದ್ಧಪಡಿಸಿರುವ ಘನ ತ್ಯಾಜ್ಯ ನಿರ್ವಹಣಾ ಬೈಲಾದ ಮೇಲೆ ಚರ್ಚೆ ನಡೆಸಲು ಕರೆಯಲಾಗಿದ್ದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದರು. ಕಡ್ಡಾಯವಾಗಿ ತ್ಯಾಜ್ಯ ವಿಂಗಡಣೆ ಮಾಡಬೇಕು, ಹಸಿ ತ್ಯಾಜ್ಯವನ್ನು ಸಂಸ್ಕರಿಸಬೇಕು. ಗಣಿ ಹೊಂಡಗಳಲ್ಲಿ ಮಿಶ್ರತ್ಯಾಜ್ಯ ವಿಲೇವಾರಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಲ್ಯಾಂಡ್​ಫಿಲ್​ಗಳನ್ನು ಹೊಸದಾಗಿ ಸೃಷ್ಟಿಸಿದರೆ ಅದು ಕ್ರಿಮಿನಲ್ ಅಪರಾಧವಾಗಿ ಪರಿಗಣನೆಗೆ ಬರುತ್ತದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಮಿಶ್ರತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಅದಕ್ಕೂ ಮುನ್ನ ಬಿಬಿಎಂಪಿಯ ನೂತನ ಬೈಲಾ ಮತ್ತು 2016ರ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳ ಕುರಿತು ಮಾತನಾಡಿದ ಅವರು ಸುಪ್ರೀಂಕೋರ್ಟ್, ಎನ್​ಜಿಟಿ ಸೇರಿ ಇನ್ನಿತರ ನ್ಯಾಯ

ಪೀಠಗಳು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಆದೇಶಗಳನ್ನು ಹೊರಡಿಸಿವೆ.ಅದನ್ನಾಧರಿಸಿ 2010ರಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮ ರೂಪಿಸಲಾಯಿತು. ಅದಾದ ನಂತರ ಕೇಂದ್ರ ಸರ್ಕಾರ 2016ರಲ್ಲಿ ಹೊಸದಾಗಿ ನಿಯಮಗಳನ್ನು ರೂಪಿಸಿ, ಎಲ್ಲ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ಸೂಚಿಸಲಾಯಿತು. ಈಗ ಅದರ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದರು.

11 ಸಾವಿರ ಟನ್ ತ್ಯಾಜ್ಯ ಉತ್ಪತ್ತಿ: ರಾಜ್ಯದಲ್ಲಿ 11,085 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಬೆಂಗಳೂರು ಒಂದರಲ್ಲೇ 6 ಸಾವಿರ ಟನ್​ವರೆಗೆ ಕಸ ಉತ್ಪತ್ತಿಯಾಗುತ್ತದೆ. ಅದರ ಸಮರ್ಪಕ ನಿರ್ವಹಣೆಗೆ 7 ಕಡೆ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಆದರೂ, ಕಸ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿಯೇ ಮಿಶ್ರತ್ಯಾಜ್ಯವನ್ನು ಗಣಿ ಹೊಂಡಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದನ್ನು ಸ್ಥಗಿತಗೊಳಿಸಬೇಕು. ಹೀಗಾಗಿಯೇ ಹೊಸ ಬೈಲಾ ಪ್ರಕಾರ ತ್ಯಾಜ್ಯ ವಿಂಗಡಣೆ ಕಡ್ಡಾಯವಾಗಿಸಲಾಗಿದೆ ಎಂದು ನ್ಯಾ. ಸುಭಾಷ್ ಬಿ. ಆಡಿ ಹೇಳಿದರು.

ಘಟಕಗಳಿಗೆ ಜನರ ವಿರೋಧ: ತ್ಯಾಜ್ಯ ನಿರ್ವಹಣಾ ಘಟಕಗಳಿಂದ ಹೊರಸೂಸುವ ದುರ್ವಾಸನೆ ತಡೆಯಲು ಬಿಬಿಎಂಪಿ ವಿಫಲವಾಗಿದೆ. ಹೀಗಾಗಿಯೇ ಘಟಕಗಳ ಸುತ್ತಲಿನ ಜನರು ಅದರ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿ ತ್ಯಾಜ್ಯದ ವಾಸನೆ ಕಡಿಮೆ ಮಾಡುವ ಮತ್ತು ಶೀಘ್ರದಲ್ಲಿ ಸಂಸ್ಕರಿಸುವ ವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸುಭಾಷ್ ಬಿ. ಆಡಿ ಹೇಳಿದರು.

ನೆರೆಪೀಡಿತ ಪ್ರದೇಶಗಳಿಗೆ 5 ಕೋಟಿ ರೂ. ನೆರವು

ಪ್ರವಾಹಪೀಡಿತ ಪ್ರದೇಶಗಳ ಮರುನಿರ್ವಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಿಬಿಎಂಪಿ ಸದಸ್ಯರ 1 ತಿಂಗಳ ಗೌರವಧನ 16.8 ಲಕ್ಷ ರೂ. ಹಾಗೂ ಬಿಬಿಎಂಪಿಯಿಂದ 5 ಕೋಟಿ ರೂ.ಗಳನ್ನು ನೀಡಲು ಕುರಿತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಂಗಳೂರು ಗಣೇಶ ಉತ್ಸವಕ್ಕೆ 5 ದಿನಗಳ ಬದಲಾಗಿ 11 ದಿನಗಳಿಗೆ ಮೈದಾನ ನೀಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ರಾಜ್ಯೋತ್ಸವಕ್ಕೆ ಬಿಬಿಎಂಪಿ ಕೊಡುಗೆ

ನ.1ರೊಳಗೆ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ನಿವಾರಣೆ ಮಾಡಲು ಎಲ್ಲರೂ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಬಿಬಿಎಂಪಿಗೆ ನ್ಯಾ. ಸುಭಾಷ್ ಅಡಿ ಸೂಚನೆ ನೀಡಿದರು. ಅದಕ್ಕೆ ಸಮ್ಮತಿಸಿದ ಮೇಯರ್ ಗಂಗಾಂಬಿಕೆ, ರಾಜ್ಯೋತ್ಸವಕ್ಕೆ ಬೆಂಗಳೂರಿಗರು ವಿಶೇಷ ಕೊಡುಗೆ ನೀಡಲಿದ್ದಾರೆ. ಸೆ. 1ರಿಂದ ಪ್ಲಾಸ್ಟಿಕ್ ನಿಷೇಧ ಮತ್ತು ತ್ಯಾಜ್ಯ ವಿಂಗಡಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನ. 1ಕ್ಕೆ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ನನ್ನ ವಾರ್ಡ್, ನನ್ನ ಜವಾಬ್ದಾರಿ…

ತ್ಯಾಜ್ಯ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಸದಸ್ಯರ ಪಾತ್ರ ಬಹಳ ಮುಖ್ಯ ಎಂದ ನ್ಯಾ. ಸುಭಾಷ್ ಬಿ. ಅಡಿ, ಬಿಬಿಎಂಪಿ ಸದಸ್ಯರು ತಾವು ಪ್ರತಿನಿಧಿಸುವ ವಾರ್ಡ್​ನಲ್ಲಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದರು. ಪ್ರತಿಯೊಬ್ಬರೂ ನನ್ನ ವಾರ್ಡ್, ನನ್ನ ಜವಾಬ್ದಾರಿ ಎಂಬಂತೆ ಕೆಲಸ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ವಾರ್ಡ್ ಮಟ್ಟದಲ್ಲಿಯೇ ತ್ಯಾಜ್ಯ ಸಂಸ್ಕರಣೆಗೆ ಕ್ರಮ ಕೈಗೊಂಡರೆ ಕಸ ವಾರ್ಡ್​ನಿಂದ ಹೊರ ಹೋಗದಂತೆ ಮಾಡಬಹುದು. ತ್ಯಾಜ್ಯ ವಿಂಗಡಣೆ ಪ್ರತಿ ನಾಗರಿಕರ ಕರ್ತವ್ಯ. ತ್ಯಾಜ್ಯವನ್ನು ಹಸಿ, ಒಣ ತ್ಯಾಜ್ಯವಾಗಿ ವಿಂಗಡಿಸಿ ನೀಡಬೇಕು. ಆ ಕುರಿತು ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಸದಸ್ಯರ ನಿರಾಸಕ್ತಿ

ತ್ಯಾಜ್ಯ ಸಮಸ್ಯೆ ನಿವಾರಣೆಗೆ ಮೇಯರ್, ಬಿಬಿಎಂಪಿ ಆಯುಕ್ತರು ಕೆಲಸ ಮಾಡುತ್ತಿದ್ದರೂ ಸದಸ್ಯರಿಗೆ ಮಾತ್ರ ಯಾವುದೇ ಆಸಕ್ತಿಯಿದ್ದಂತಿಲ್ಲ. ಶನಿವಾರದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಶೇ. 50 ಸದಸ್ಯರು ಹಾಜರಾಗದೆ, ನಿರ್ಲಕ್ಷ್ಯ ವಹಿಸಿದ್ದರು. ಸಭೆ ಆರಂಭವಾಗುವ ವೇಳೆಗೆ ಇದ್ದ ಉಪ ಮೇಯರ್ ಭದ್ರೇಗೌಡ, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿ ಇನ್ನಿತರರು ಕೆಲ ಹೊತ್ತಿನಲ್ಲಿಯೇ ಹೊರನಡೆದರು. ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಹೊರತುಪಡಿಸಿ, ಪಕ್ಷದ ಉಳಿದ ಯಾವುದೇ ಸದಸ್ಯರು ಸಭೆಗೆ ಸಮರ್ಪಕವಾಗಿ ಹಾಜರಾಗಲಿಲ್ಲ. ಕಾಂಗ್ರೆಸ್​ನಲ್ಲೂ ಬೆರಳೆಣಿಕೆಯ ಸದಸ್ಯರು ಸಭೆಗೆ ಬಂದಿದ್ದರು. ಉಳಿದವರು ಸಮಸ್ಯೆಯ ಗಂಭೀರತೆ ಅರಿವಿಲ್ಲದಂತೆ ವರ್ತಿಸಿದರು.

ಕೈಗಾರಿಕಾ ಪ್ರದೇಶದವರೊಂದಿಗೆ ಸಭೆ

ಚರ್ಚೆ ವೇಳೆ ಸದಸ್ಯರು ಕೂಡ ಕೆಲ ಸಲಹೆ ನೀಡಿದರು. ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಕೈಗಾರಿಕಾ ತ್ಯಾಜ್ಯ ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ. ಹೀಗಾಗಿ ಅವರೊಂದಿಗೆ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಸೂಚಿಸಬೇಕೆಂದರು. ಘನ ತ್ಯಾಜ್ಯ ನಿರ್ವಹಣಾ ಬೈಲಾ ಅಂತಿಮವಾಗಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ದಂಡ ವಿಧಿಸುವ ಕ್ರಮವನ್ನು ಮುಂದೂಡುವಂತೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮನವಿ ಮಾಡಿದರು. ಅದಕ್ಕೆ ಒಪ್ಪದ ನ್ಯಾ. ಸುಭಾಷ್ ಅಡಿ, ಬಿಬಿಎಂಪಿಯ ಇಂತಹ ಮೃದುಧೋರಣೆಯೇ ಕಸದ ಸಮಸ್ಯೆಗೆ ಕಾರಣವಾಗಿದೆ. ದಂಡ ವಿಧಿಸುವ ಪ್ರಕ್ರಿಯೆ ಸೆಪ್ಟೆಂಬರ್​ನಿಂದಲೇ ಜಾರಿಗೊಳ್ಳಬೇಕು ಎಂದು ಸೂಚಿಸಿದರು.

ಘಟಕಗಳ ವಿರೋಧ ರಾಜಕೀಯಕ್ಕಾಗಿ

ಪಾಲಿಕೆಯ 7 ಸಂಸ್ಕರಣಾ ಘಟಕಗಳು ಸಮರ್ಪಕ ವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಘಟಕಗಳಿಂದ 2,800 ಟನ್ ಹಸಿ ತ್ಯಾಜ್ಯ ಸಂಸ್ಕರಣೆಯ ಗುರಿ ಹೊಂದಲಾಗಿತ್ತು. ಆದರೆ, ನಿರ್ಲಕ್ಷ್ಯದಿಂದಾಗಿ ಈಗ ಕೇವಲ 1,200 ಟನ್ ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ. ಆ ಘಟಕಗಳು ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಬೇಕು. ಜತೆಗೆ ಘಟಕಗಳಿಗೆ ಜನರು ವಿರೋಧ ವ್ಯಕ್ತಪಡಿಸುತ್ತಿ ರುವುದರ ಹಿಂದೆ ಕೆಲ ಮುಖಂಡರಿದ್ದಾರೆ. ಆ ಬಗ್ಗೆಯೂ ಗಮನ ಹರಿಸುವಂತೆ ನ್ಯಾಯಮೂರ್ತಿ ಹೇಳಿದರು.

ಬಡಾವಣೆಗಳಲ್ಲೇ ತ್ಯಾಜ್ಯ ನಿರ್ವಹಣೆ

ವಾರ್ಡ್​ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅಲ್ಲಿಯೇ ಸಂಸ್ಕರಿಸಲು ಕ್ರಮ ವಹಿಸಬೇಕು. ಅದರ ಜತೆಗೆ, ಬಿಡಿಎ ಹೊಸದಾಗಿ ನಿರ್ವಿುಸುವ ಬಡಾವಣೆಗಳಲ್ಲಿ ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ಜಾಗ ಮೀಸಲಿರಿಸಬೇಕು ಎಂದು ನ್ಯಾ. ಸುಭಾಷ್ ಅಡಿ ಸೂಚಿಸಿದರು.

ಪ್ರತ್ಯೇಕ ನಿಗಮಕ್ಕೆ ಸಲಹೆ

ಕಸ ಸಮಸ್ಯೆ ನಿವಾರಣೆಗೆ ಗೋವಾ ಹಾಗೂ ಆಂಧ್ರದಲ್ಲಿ ಪ್ರತ್ಯೇಕ ನಿಗಮ ಸ್ಥಾಪಿಸಲಾಗಿದೆ. ರಾಜ್ಯದ ಅರ್ಧಕ್ಕಿಂತ ಹೆಚ್ಚು ಕಸ ಉತ್ಪತ್ತಿಯಾಗುವ ಬೆಂಗಳೂರಿನಲ್ಲೂ ಕಸ ನಿರ್ವಹಣೆಗಾಗಿ ಪ್ರತ್ಯೇಕ ನಿಗಮ ರಚನೆ ಮಾಡುವ ಬಗ್ಗೆ ಚಿಂತನೆ ನಡೆಸುವುದು ಸೂಕ್ತ ಎಂದು ನ್ಯಾಯಮೂರ್ತಿ ಸುಭಾಷ್ ಅಡಿ ಹೇಳಿದರು.

Leave a Reply

Your email address will not be published. Required fields are marked *