More

  ಲೌಕಿಕ ಭಾವನೆಯಿಂದ ‘ವಸುದೈವ ಕುಟುಂಬಕಂ’ ಅಸಾಧ್ಯ

  ಗದಗ: ಸ್ವಾರ್ಥ ಪರ ಬದುಕಿನಿಂದಾಗಿ ವಸುದೈವಕುಟುಂಬಕಂ ಇಂದು ಮರೆಯಾಗುತ್ತಿದೆ. ಲೌಕಿಕ ಭಾವನೆ ಹೊಂದಿದವರಲ್ಲಿ ವಸುದೈವ ಕುಟುಂಬಕಂ ಅಸಾಧ್ಯ. ಆಧ್ಯಾತ್ಮಿಕ ಜ್ಞಾನ ಹೊಂದಿದಾಗ ಮಾತ್ರ ವಿಶ್ವಕುಟುಂಬಿಗಳಾಗಲು ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

  ತಾಲೂಕಿನ ಹುಲಕೋಟಿಯ ಶ್ರೀ ಕೈಲಾಸ ಆಶ್ರಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಆಶ್ರಮದ 28ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ವಸುದೈವ ಕುಟುಂಬಕಂ’ ವಿಷಯ ಕುರಿತು ಮಾತನಾಡಿದ ಅವರು, ಅರಿವಿನ ಪ್ರಾಣಿಯಾಗಿರುವ ಮನುಷ್ಯ ಪರೋಪಕಾರಿಯಾಗಿರದಿದ್ದರೆ ಬದುಕು ನಿರರ್ಥಕ ಎಂದರು.

  ಹುಲಕೋಟಿಯ ಕೈಲಾಸ ಆಶ್ರಮವು ವಾರ್ಷಿಕೋತ್ಸವ ನೆಪದಲ್ಲಿ ರಚನಾತ್ಮಕ ಕಾರ್ಯಗಳ ಮೂಲಕ ಜನರ ಬದುಕಿನಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ. ಕೃಷಿ ವಸ್ತು ಪ್ರದರ್ಶನ ಮೂಲಕ ರಾಸಾಯನಿಕ ಮುಕ್ತ ವ್ಯವಸಾಯದ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ಶ್ಲಾಘಿಸಿದರು.

  ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿಜಿ ಮಾತನಾಡಿ, ಕೇವಲ ತಿನ್ನುವ ಪದಾರ್ಥ ಮಾತ್ರ ಆಹಾರವಲ್ಲ. ಕಿವಿಯಿಂದ ಕೇಳುವ, ಕಣ್ಣಿನಿಂದ ನೋಡುವುದು ಕೂಡ ಆಹಾರವೇ. ಹೀಗಾಗಿ ಆಹಾರದಂತೆ ಮನಸ್ಸಿರುತ್ತದೆ. ಇಂದ್ರಿಯ ಮತ್ತು ಮನೋ ನಿಗ್ರಹ ಹೊಂದಿದವರಿಂದ ಮಾತ್ರ ವಸುದೈವಕುಟುಂಬಕಂ ಸಾಧ್ಯ. ಹಗುರ ವ್ಯಕ್ತಿತ್ವದವರಿಗೆ ಯಾವುದೇ ಜವಾಬ್ದಾರಿ ನೀಡುವುದು ಸಲ್ಲ. ವಿವೇಕ ಪ್ರಜ್ಞೆ ಹೊಂದಿ, ವ್ಯವಹಾರಿಕ ಜ್ಞಾನ ಅರಿತಾಗ ಮಾತ್ರ ಜವಾಬ್ದಾರಿ ನೀಡಬಹುದು ಎಂದು ಹೇಳಿದರು.

  ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಹೆತ್ತವರನ್ನೇ ಕೊಲ್ಲುವ ಮಕ್ಕಳ ಮನಸ್ಥಿತಿ, ಸ್ವಾರ್ಥ, ಅಧಿಕಾರದ ಲಾಲಸೆಯಿಂದಾಗಿ ಇಂದು ರಕ್ತ ಸಂಬಂಧಗಳೇ ಛಿದ್ರಗೊಳ್ಳುತ್ತಿವೆ. ಮನೆಯಲ್ಲೇ ಸಂಬಂಧಗಳು ಸರಿಯಿಲ್ಲದಿರುವಾಗ ವಸುದೈವಕುಟುಂಬಕಂ ನಿರೀಕ್ಷೆ ಮಾಡಲು ಸಾಧ್ಯವೇ? ಎಂದರು.

  ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಎಲ್ಲ ಮತ, ತತ್ವಗಳನ್ನು ಅರಿತು ಎಲ್ಲರೂ ನಮ್ಮವರು ಎಂಬ ಸದ್ಭಾವನೆ ಮೂಡಿದಾಗ ವಸುದೈವ ಕುಟುಂಬಕಂ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ವಿಶಾಲ ಭಾವನೆ ಅಗತ್ಯ ಎಂದು ಹೇಳಿದರು.

  ಸಾನ್ನಿಧ್ಯ ವಹಿಸಿದ್ದ ಕೈಲಾಸ ಆಶ್ರಮದ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭೇದ ಸಹಜವಾಗಿರುವುದನ್ನು ಕಾಣುತ್ತೇವೆ. ಆದರೆ, ಸತ್ಸಂಗದಿಂದ ಸಮಭಾವದ ಬದುಕು ಸಾಧ್ಯ. ಎಲ್ಲರೂ ನಮ್ಮವರು ಎಂಬ ಪ್ರೇಮ ಭಾವ ಜಾಗೃತಗೊಳ್ಳಬೇಕು. ಅಂದಾಗ ಮಾತ್ರ ವಸುದೈವಕುಟುಂಬಕಂ ಸಾಧ್ಯ ಎಂದು ಅಭಿಪ್ರಾಯಪಟ್ಟರು.

  ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮೀಜಿ, ಬೆಟಗೇರಿ ನೀಲಕಂಠಮಠದ ಶ್ರೀ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ವೇದಿಕೆಯಲ್ಲಿದ್ದರು.

  ಶಾಸಕ ಎಚ್.ಕೆ. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಜೆ.ಕೆ. ಜಮಾದಾರ ನಿರೂಪಿಸಿದರು.

  ಜಾತಿ, ಮತ, ಪಂಥ ಮೀರಿ ಕೇವಲ ಅಧ್ಯಾತ್ಮಕ್ಕೆ ಸೀಮಿತವಾಗದೇ ಜನರ ಬದುಕಿನ ಅಭ್ಯುದಯಕ್ಕೆ ಕಾರಣರಾದ ಶ್ರೀ ತಿರುಚ್ಚಿ ಸ್ವಾಮೀಜಿಗಳೇ ವಸುದೈವ ಕುಟುಂಬಕಂಗೆ ಪ್ರತ್ಯಕ್ಷ ನಿದರ್ಶನ.

  | ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ

  ಸಿಎಎ, ಎನ್​ಆರ್​ಸಿ, ಎನ್​ಪಿಎ ಕಾಯ್ದೆಗಳು ದೇಶದಲ್ಲಿ ಅಶಾಂತಿ ಮೂಡಿಸಿವೆ. ಜನರು ಭಯಭೀತರಾಗಿದ್ದಾರೆ. ಮೌಲ್ಯಗಳಿಗೆ ಅಪಾಯದ ಕರೆ ಗಂಟೆ ಶುರುವಾಗಿದೆ. ನಕಾರಾತ್ಮಕ ವಿಷಯಗಳು ವಿಜೃಂಭಿಸತೊಡಗಿವೆ. ದೌರ್ಜನ್ಯಗಳು ಮಿತಿಮೀರಿದೆ. ಹೀಗಾಗಿ ಸಾಮರಸ್ಯ, ಸಹಬಾಳ್ವೆ ಬದುಕು ನಮ್ಮದಾಗಬೇಕಿದೆ.

  | ಎಚ್.ಕೆ. ಪಾಟೀಲ

  ಶಾಸಕ, ಗದಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts