ಲೋಕಸಭೆಗೆ ಏ.18ರಂದು ಮತದಾನ, 50 ಸಾವಿರ ರೂ.ಇದ್ದರೆ ದಾಖಲೆ ಕೊಡಬೇಕು

ಚಿತ್ರದುರ್ಗ: ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಂಡಿರುವ ಚಿತ್ರದುರ್ಗ ಲೋಕಸಭೆ ಚುನಾವಣೆಗೆ ಏ.18ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಮಾ.19ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮಾ.26 ಕೊನೇ ದಿನವಾಗಿರುತ್ತದೆ. ನಾಮಪತ್ರ ಪರಿಶೀಲನೆ 27ಕ್ಕೆ ನಡೆಯಲಿದ್ದು, ನಾಮಪತ್ರ ಹಿಂತೆಗೆತಕ್ಕೆ 29 ಕೊನೇ ದಿನವಾಗಿರುತ್ತದೆ. ಏಪ್ರಿಲ್ 18ರಂದು ಮತದಾನ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಟಿಸಲಾಗುವುದು ಎಂದರು.

ಬರಗಾಲ ಕಾಮಗಾರಿಗೆ ಇಲ್ಲ ಅಡ್ಡಿ
ಈಗಾಗಲೇ ಜಿಲ್ಲೆಯಲ್ಲಿ ನೀತಿಸಂಹಿತೆ ಜಾರಿಯಾಗಿದೆ. ಆದರೆ, ಬರ ಪರಿಹಾರ ಕಾಮಗಾರಿಗಳಿಗೆ ಯಾವುದೇ ಅಡ್ಡಿ ಇಲ್ಲ, ಅಗತ್ಯವಿದ್ದರೆ ಚುನಾವಣಾ ಆಯೋಗದ ಮೇಲಧಿಕಾರಿಗಳಿಂದ ಸೂಕ್ತ ಅನುಮತಿಯನ್ನೂ ಪಡೆದುಕೊಳ್ಳಲಾಗುವುದು. ನೀತಿಸಂಹಿತೆ ಉಲ್ಲಂಘನೆ ಕುರಿತು ನಾಗರಿಕರು ಸಹಾಯವಾಣಿ 1950 ಹಾಗೂ ಸಿ-ವಿಜಿಲ್ ಆ್ಯಪ್ ಮೂಲಕ ಆಯೋಗಕ್ಕೆ ಮಾಹಿತಿ ಕೊಡಬಹುದು.

50 ಸಾವಿರ ರೂ.ಮೀರಿದರೆ ದಾಖಲೆ ಕೊಡಬೇಕು
ಆ್ಯಪ್‌ಗೆ ಆಪ್‌ಲೋಡ್ ಆದ 15 ನಿಮಿಷದೊಳಗೆ ಸಂಬಂಧಿಸಿದ ಅಧಿಕಾರಿಗಳು ದೂರು ಪರಿಶೀಲನೆ ನಡೆಸಲಿದ್ದಾರೆ. ಈ ಚುನಾವಣೆಯಲ್ಲೂ ನೋಟಾ ಇರುತ್ತದೆ. ಚುನಾವಣಾ ವೆಚ್ಚ 50 ಸಾವಿರ ರೂ. ಮೀರಿದ ಮೊತ್ತಕ್ಕೆ ಅಧಿಕೃತ ದಾಖಲೆ, 10 ಲಕ್ಷ ರೂ. ಮೀರಿದ ಮೊತ್ತವಿದ್ದರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಕೊಡಬೇಕಾಗುತ್ತದೆ ಎಂದು ತಿಳಿಸಿದರು.

ಸಿಆರ್‌ಪಿಎಫ್ ಪಡೆ
ಎಸ್ಪಿ ಡಾ. ಕೆ. ಅರುಣ್ ಮಾತನಾಡಿ, ಜಿಲ್ಲೆಯಲ್ಲಿ 30 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಗಲಾಟೆಯಾಗಬಹುದಾದ ಕ್ಷೇತ್ರಗಳನ್ನು ಗುರುತಿಸಲಾಗುತ್ತಿದೆ. ಅತಿಸೂಕ್ಷ್ಮ ಕ್ಷೇತ್ರಗಳಲ್ಲಿ ಸಿಆರ್‌ಪಿಎಫ್ ಪಡೆಯನ್ನು ನಿಯೋಜಿಸಲಾಗುತ್ತಿದೆ. ಕ್ಷೇತ್ರಾದ್ಯಂತ 24/7 ಅವಧಿಯಲ್ಲಿ ಚೆಕ್‌ಪೋಸ್ಟ್ ಇರುತ್ತದೆ ಎಂದರು.