ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಫಲತೆ ಹಿನ್ನೆಲೆಯಲ್ಲಿ ಚುನಾವಣೆ ತಂತ್ರಗಾರರ ಕುರಿತು ಕೇಂದ್ರಕ್ಕೆ ವರದಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆ ತೀವ್ರವಾಗಿ ಕೆಲಸ ಮಾಡಿ ಜಯಭೇರಿ ಬಾರಿಸಿದೆ. ಈ ಪ್ರಕ್ರಿಯೆಯಲ್ಲಿ ಪಕ್ಷದ ಗುರಿ ಮುಟ್ಟಲು ಕಾರಣವಾದ ರಾಜ್ಯದ ಇಬ್ಬರು ನಾಯಕರ ಕುರಿತು ಕೇಂದ್ರ ಬಿಜೆಪಿಗೆ ರಾಜ್ಯದಿಂದ ವರದಿ ನೀಡಲಾಗಿದೆ.

ಸಾಮಾನ್ಯವಾಗಿ ಚುನಾವಣೆ ಪ್ರಕ್ರಿಯೆ ನಂತರದಲ್ಲಿ ಆಯಾ ರಾಜ್ಯದಲ್ಲಿ ಉತ್ತಮವಾಗಿ ಚುನಾವಣೆ ನಡೆಸಿದವರ, ನಿರೀಕ್ಷಿತ ಫಲಿತಾಂಶ ತಂದುಕೊಟ್ಟ ಹೊಸ ನಾಯಕರ ಮಾಹಿತಿಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ತಂಡ ಪಡೆದುಕೊಳ್ಳುತ್ತದೆ. ಈ ಬಾರಿ ಚುನಾವಣೆಯಲ್ಲಿ ತೆಲಂಗಾಣ ಪ್ರಭಾರಿಯಾಗಿದ್ದ ಅರವಿಂದ ಲಿಂಬಾವಳಿ, ಕಲಬುರಗಿ ಲೋಕಸಭೆ ಮತ್ತು ಚಿಂಚೋಳಿ ವಿಧಾನಸಭೆ ಕ್ಷೇತ್ರದ ಪ್ರಭಾರಿಯಾಗಿದ್ದ ಎನ್. ರವಿಕುಮಾರ್ ಹೆಸರನ್ನು ಕೇಂದ್ರಕ್ಕೆ ಕಳಿಸಿಕೊಡಲಾಗಿದೆ. ಚಿಂಚೋಳಿಯಲ್ಲಿ ಸಾಕಷ್ಟು ಕೆಲಸ ಮಾಡಿದ ಮಾಜಿ ಸಚಿವ ವಿ. ಸೋಮಣ್ಣ ಅವರಿಗೂ ಪ್ರಶಂಸೆ ವ್ಯಕ್ತಪಡಿಸಲಾಗಿದೆ. ಕೆಲವರ ವೈಫಲ್ಯವನ್ನೂ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಲಿಂಬಾವಳಿಗೆ ಐದು ಕ್ಷೇತ್ರ: ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಪ್ರಭಾರಿಯಾಗಿದ್ದ ತೆಲಂಗಾಣದಲ್ಲಿ ಅವರ ತಂತ್ರಗಾರಿಕೆಯಿಂದ 4 ಸಂಸದರು ಜಯಿಸಿರುವುದಕ್ಕೆ ಅವರ ಕುರಿತು ವರದಿ ರವಾನಿಸಲಾಗಿದೆ. ಕಳೆದ ಲೋಕಸಭೆಯಲ್ಲಿ ಕೇವಲ ಒಂದು ಸಂಸದರನ್ನು ಹೊಂದಿದ್ದ ಪಕ್ಷ, ಈ ಬಾರಿ ಕೆಸಿಆರ್ ಅಲೆಯಲ್ಲಿ ಕೊಚ್ಚಿಹೋಗುತ್ತದೆ ಎಂದು ಪ್ರಮುಖ ನಾಯಕರು ಅಭಿಪ್ರಾಯಪಟ್ಟಿದ್ದರು. ಈ ಸಮಯದಲ್ಲಿ ತೆಲಂಗಾಣಕ್ಕೆ ನಿಯುಕ್ತಿಯಾದ ಲಿಂಬಾವಳಿಯಿಂದಾಗಿ ಕರೀಂನಗರ, ಅದಿಲಾ

ಬಾದ್, ನಿಜಾಮಾಬಾದ್ ಹಾಗೂ ಸಿಕಂದರಾಬಾದ್​ನಿಂದ ಸಂಸದರು ಆಯ್ಕೆಯಾಗಿದ್ದಾರೆ. ಅದೇ ರೀತಿ, ಸೋಲಿಲ್ಲದ ಸರದಾರ ವಿ.ಮುನಿಯಪ್ಪ ವಿರುದ್ಧ ವಿವಿಧ ಹೆಸರುಗಳು ಚರ್ಚೆಯಾಗುತ್ತಿದ್ದ ಸಮಯದಲ್ಲಿ ಅಚ್ಚರಿ ಎಂಬಂತೆ ಮುನಿಸ್ವಾಮಿ ಅವರ ಹೆಸರನ್ನು ಸೂಚಿಸಿದ್ದು ಲಿಂಬಾವಳಿ. ಇದೀಗ ಮುನಿಸ್ವಾಮಿ ಸಂಸದರಾಗುವ ಮೂಲಕ ಆ ಶ್ರೇಯವೂ ಲಿಂಬಾವಳಿಗೆ ಒಲಿದಿದೆ.

ಕೆಲವು ನಾಯಕರನ್ನು ವಿವಿಧೆಡೆಗೆ, ಕ್ಷೇತ್ರಗಳಿಗೆನಿಯೋಜಿಸಲಾಗಿದ್ದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಆದರೆ, ಅದಕ್ಕೆ ಬೇರೆ ಕಾರಣಗಳಿರುವುದರಿಂದ ವರದಿಯಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ ಎಂದು ಮೂಲಗಳು ಹೇಳಿವೆ.

52 ಮತಗಳಿಂದ ಸೋತಿದ್ದ ಧರ್ಮಸಿಂಗ್!

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ರವಿಕುಮಾರ್ ಅವರ ಎರಡು ತಿಂಗಳ ಪರಿಶ್ರಮ ಕೆಲಸ ಮಾಡಿದೆ. ಬಿಜೆಪಿಯಲ್ಲಿದ್ದ ವಿವಿಧ ಸಮುದಾಯದ ನಾಯಕರಾದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್, ಎ.ಬಿ. ಮಾಲಕರೆಡ್ಡಿ, ಉಮೇಶ್ ಜಾಧವ್ ಮುಂತಾದವರನ್ನು ನಿಯೋಜಿಸುವ ಸೋಷಿಯಲ್ ಇಂಜಿನಿಯರಿಂಗ್ ಕೆಲಸ ಮಾಡಲಾಗಿದೆ.

ಚಿಂಚೋಳಿಯಲ್ಲಿ ಒಂದು ತಿಂಗಳು ಬೀಡು ಬಿಟ್ಟು ವಿ. ಸೋಮಣ್ಣ ಜತೆಗೆ ಕೈಗೊಂಡ ಅದೇ ಸೋಷಿಯಲ್ ಇಂಜಿನಿಯರಿಂಗ್ ಪರಿಣಾಮ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಜಯಿಸಲು ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಲಾಗಿದೆ.

ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಿಇಟಿ ಕುರಿತ ಹೋರಾಟದಲ್ಲಿ ಖಾಸಗಿ ಆಡಳಿತ ಮಂಡಳಿ ಪರವಾಗಿ ನಿರ್ಧಾರ ಕೈಗೊಳ್ಳುತ್ತಿದ್ದರು. ಆಗ ಎಬಿವಿಪಿಯಲ್ಲಿ ರಾಜ್ಯ ಪದಾಧಿಕಾರಿಯಾಗಿದ್ದ ರವಿಕುಮಾರ್ ಹಾಗೂ ಧರ್ಮಸಿಂಗ್ ನಡುವೆ ಚಕಮಕಿ ನಡೆಯುತ್ತಿತ್ತು. 2008ರ ವಿಧಾನಸಭೆ ಚುನಾವಣೆಯಲ್ಲಿ, ಧರ್ಮಸಿಂಗ್ ಸ್ಪರ್ಧಿಸಿದ್ದ ಜೇವರ್ಗಿಯಲ್ಲೇ ಅನೇಕ ದಿನ ಚುನಾವಣೆ ತಂತ್ರಗಾರಿಕೆ ಹೆಣೆದಿದ್ದರು. ಸ್ವತಃ ಸಿಎಂ ತವರಿನಲ್ಲೇ ಇದ್ದ ದುಃಸ್ಥಿತಿಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಪರಿಣಾಮ, ರಾಜಕೀಯದಲ್ಲಿ ತಮಗೆ ಸಮಾನರೇ ಅಲ್ಲದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ವಿರುದ್ಧ 52 ಮತದ ಅಂತರದಲ್ಲಿ ಧರ್ಮಸಿಂಗ್ ಸೋತಿದ್ದರು.

Leave a Reply

Your email address will not be published. Required fields are marked *