ಲೋಕಸಭಾ ಚುನಾವಣೆ: ರಾಷ್ಟ್ರೀಯ ಕಾರ್ಮಿಕರ ಸನ್ನದು ಬಿಡುಗಡೆ

ಕುಂದಾಪುರ : ಕೇಂದ್ರ ಕಾರ್ಮಿಕ ಸಂಘಟನೆಗಳು ತಮ್ಮ ಹೋರಾಟದ ಮುಂದುವರಿದ ಭಾಗವಾಗಿ 2019 ರ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳ ಎದುರು ತಮ್ಮದೇ ಆದ ರಾಷ್ಟ್ರೀಯ ಕಾರ್ಮಿಕರ ಸನ್ನದನ್ನು ಇರಿಸಿವೆ.

ಕುಂದಾಪುರ ಹಂಚು ಕಾರ್ಮಿಕಭವನದಲ್ಲಿ ಶನಿವಾರ ನಡೆದ ಕಾರ್ಮಿಕರ ಸಭೆಯಲ್ಲಿ ಮುಷ್ಕರದಲ್ಲಿ ಎತ್ತಿದ ಬೇಡಿಕೆಗಳನ್ನೊಳಗೊಂಡು ಇತರೆ 45 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಡುಗಡೆಗೊಳಿಸಲಾಯಿತು.

ಭ್ರಾತೃತ್ವ ಮತ್ತು ಸಾಮಾಜಿಕ ಸೌಹಾರ್ಧತೆಗಾಗಿ ಕಾರ್ಮಿಕರ ಐಕ್ಯತೆ ಎಂಬ ಘೋಷಣೆಯೊಂದಿಗೆ ರಾಜ್ಯದ ಜನತೆ ಎದುರಿಸುತ್ತಿರುವ ಸವಾಲುಗಳನ್ನು ಮನಗಾಣಬೇಕೆಂದು ಮನವಿ ಮಾಡಿದೆ.

ಕಾರ್ಮಿಕ ಸಂಘಟನೆಗಳ ಬಲಿಷ್ಠ ವಿರೋದದ ನಡುವೆಯು ಕೇಂದ್ರ ಸರ್ಕಾರವು ಕಾರ್ಮಿಕರ 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ತೆಗೆದು ಹಾಕಿ 4 ಕಾರ್ಮಿಕ ಸಂಹಿತೆಗಳಲ್ಲಿ ವಿಲೀನಗೊಳಿಸಲು ಮುಂದಾಗಿದೆ. ಸರಕಾರವು ಜನತೆಯ ಜ್ವಲಂತ ಸಮಸ್ಯೆಗಳನ್ನು ತುರ್ತಿನ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ. ವಸತಿ, ಆರೋಗ್ಯ, ಶಿಕ್ಷಣ, ಸಾರಿಗೆ, ವಿದ್ಯುತ್ ಮುಂತಾದ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿದೆ. ಆದರೆ ಕಾರ್ಮಿಕರ ವೇತನಗಳು ಸ್ಥಗಿತಗೊಂಡಿರುವುದಾಗಿ ಬೇಸರ ವ್ಯಕ್ತಪಡಿಸಿದೆ.

ನಿರುದ್ಯೋಗವು ಕೇವಲ ಯುವಜನತೆಗೆ ಮಾತ್ರವಲ್ಲದೆ ಕೈಗಾರಿಕೆ ಮುಚ್ಚುವಿಕೆ ಮತ್ತು ಸ್ಥಗಿತಗೊಳಿಸುವುದರಿಂದ ಕಾರ್ಮಿಕರ ಬದುಕು ಅತಂತ್ರವಾಗುತ್ತಿದೆ. ಸಾರ್ವಜನಿಕ ಬ್ಯಾಂಕ್​ಗಳಲ್ಲಿ  ಕಾರ್ಮಿಕರು ಮತ್ತು ಸಾಮಾನ್ಯ ಜನತೆ ಉಳಿತಾಯ ಮಾಡಿರುವ ಸಾವಿರಾರು ಕೋಟಿ ರೂಪಾಯಿಗಳ ಹಣವನ್ನು ಕಾರ್ಪೋರೇಟ್ ಲೂಟಿಕೋರರು ಲೂಟಿ ಮಾಡಿಕೊಂಡು ವಿದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಬ್ಯಾಂಕ್ ಗಳು ನೀಡಿರುವ ಅನುತ್ಪಾದಕ ಸಾಲಗಳು (NPA) ಶೇ.80 ಭಾಗ ಕೇವಲ 50 ಜನ ಕಾರ್ಪೋರೇಟ್ ಮನೆತನಕ್ಕೆ ಸೇರಿದ್ದಾಗಿದೆ ಎಂದು ದೂರಿದ್ದಾರೆ.

ಸರಕಾರವು ದೇಶ ಮತ್ತು ವಿದೇಶಿ ದೊಡ್ಡ ಬಂಡವಾಳಗಾರರಿಗೆ ವಾರ್ಷಿಕ 5 ಲಕ್ಷ ಕೋಟಿ ರೂ.ಗೂ ಹೆಚ್ಚು ತೆರಿಗೆ ರಿಯಾಯಿತಿ ಮತ್ತು ವಿನಾಯಿತಿ ನೀಡುತ್ತಿದೆ. ಬಡವರು,ಕಾರ್ಮಿಕರಿಗೆ ಸಾಮಾಜಿಕ ಕಲ್ಯಾಣ ಖಾತ್ರಿಗೆ ಅಗತ್ಯ ಹಣ ಖರ್ಚು ಮಾಡಲು ನಿರಾಕರಿಸುತ್ತಿದೆ. ಸರ್ಕಾರದ ಈ ನೀತಿಗಳನ್ನು ಸೋಲಿಸಲು ಚುನಾವಣೆ ಸಮಯದಲ್ಲಿ ಬಡವರ, ಕಾರ್ಮಿಕರ ಬೇಡಿಕೆಗಳನ್ನು ಎತ್ತುವ ಸಮಯವಾಗಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನಾವು ಒತ್ತಾಯಿಸಬೇಕಾಗಿದೆ ಎಂಬ ಅಂಶಗಳನ್ನು ರಾಷ್ಟ್ರೀಯ ಕಾರ್ಮಿಕರ ಸನ್ನದ್ದಿನಲ್ಲಿ ಸೇರಿಸಲಾಗಿದೆ. ಈ ಬೇಡಿಕೆಗಳನ್ನು ಚುನಾವಣಾ ವಿಷಯವಾಗಿ ಮಾರ್ಪಡಿಸಲು ಜನರ ಮಧ್ಯೆ ಕೊಂಡೊಯ್ದು ವ್ಯಾಪಕ ಪ್ರಚಾರ ಮಾಡಲು ಸಭೆ ತೀರ್ತೀಮಾನಿಸಿತು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್,ಉಪಾಧ್ಯಕ್ಷ ಬಾಲಕ್ರಷ್ಣಶೆಟ್ಟಿ, ವಿ. ನರಸಿಂಹ, ಎಚ್. ನರಸಿಂಹ, ವೆಂಕಟೇಶ್ ಕೋಣಿ, ಸುರೇಶ್ ಕಲ್ಲಾಗರ ಉಪಸ್ಥಿತರಿದ್ದರು.