ಲೋಕೋಪಯೋಗಿ ಕಚೇರಿ ಚರಾಸ್ತಿ ಜಪ್ತಿ

ಧಾರವಾಡ: ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿದ ಹಿನ್ನೆಲೆಯಲ್ಲಿ ನಗರದ ಲೋಕೋಪಯೋಗಿ ಇಲಾಖೆ ಕಚೇರಿಯ ಚರಾಸ್ತಿ ಜಪ್ತಿ ಮಾಡಿದ ವಿದ್ಯಮಾನ ಮಂಗಳವಾರ ನಡೆದಿದೆ.

ಲಕ್ಷೆ್ಮೕಶ್ವರ- ಮಂಗಸೂಳಿ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ 8 ಜನರಿಂದ ಒಟ್ಟು 60 ಗುಂಟೆ ಜಾಗವನ್ನು 2009ರಲ್ಲಿ ಸ್ವಾಧೀನ ಮಾಡಿಕೊಂಡಿದ್ದರು. 9 ವರ್ಷ ಕಳೆದರೂ ರೈತರಿಗೆ ನೀಡಬೇಕಿದ್ದ 42 ಲಕ್ಷ ರೂ. ಪರಿಹಾರ ನೀಡದೇ ಸತಾಯಿಸಲಾಗುತ್ತಿದೆ.

ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಂದ ಬೇಸತ್ತ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ರೈತರ ಅರ್ಜಿ ಪುರಸ್ಕರಿಸಿದ ನಗರದ 2ನೇ ಹಿರಿಯ ದಿವಾಣಿ ನ್ಯಾಯಾಲಯ ಆ. 4 ಹಾಗೂ 25ರಂದು ಜಪ್ತಿ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ ಕೆಲ ದಿನಗಳ ಹಿಂದೆ ಜಪ್ತಿಗೆ ತೆರಳಿದ್ದ ಸಂದರ್ಭದಲ್ಲಿ, ಈ ಕಾಮಗಾರಿ ಕೆಆರ್​ಡಿಸಿಎಲ್​ಗೆ ಸಂಬಂಧಿಸಿದ್ದಾಗಿದೆ. ಒಂದು ತಿಂಗಳು ಅವಧಿ ನೀಡಿ ಎಂದು ಲೋಕೋಪಯೋಗಿ ಕಾರ್ಯ ನಿರ್ವಾಹಕ ಇಂಜಿನಿಯರ್ ವಿ.ಬಿ. ಯಮಕನಮರಡಿ ಅವರು ಕೇಳಿಕೊಂಡಿದ್ದರು. ಆದಾಗ್ಯೂ ರೈತರಿಗೆ ಪರಿಹಾರ ಸಂದಾಯವಾಗಿರಲಿಲ್ಲ.

ವಕೀಲ ನಾಗನಗೌಡ ಪಾಟೀಲ ಅವರ ಸಮ್ಮುಖದಲ್ಲಿ ಮಂಗಳವಾರ ಜಪ್ತಿ ಕಾರ್ಯ ನಡೆಸಿದ ಕೋರ್ಟ್ ಬೇಲೀಫ್ ಗಜಾನನ ಕಟಗಿ ಅವರು 10 ಕುರ್ಚಿ, 8 ಕಂಪ್ಯೂಟರ್, ಪ್ರಿಂಟರ್ ಸೇರಿ ವಿವಿಧ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡರು. ರೈತರಾದ ಮೃತ್ಯುಂಜಯ ಕುಂದಗೋಳ, ಚಂದ್ರಶೇಖರಯ್ಯ ಮಠಪತಿ, ರಾಯನಗೌಡ ಕುದರಿ, ಮಲಕಯ್ಯ ಕುಂದಗೋಳ, ಶಿವನಗೌಡ ಹಿರೇಗೌಡರ, ಆನಂದಯ್ಯ ಕುಂಗೋಳ, ಇತರರು ಇದ್ದರು.