ಲೋಕಸಭೆ ಸ್ಪರ್ಧೆಗೆ ಕಾಂಗ್ರೆಸ್ ಪರ ಹೆಚ್ಚಿನ ಬೆಂಬಲ

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಡ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಇರುವುದರಿಂದ ಅಭ್ಯರ್ಥಿ ಯಾವ ಪಕ್ಷದಿಂದ ಆಗಬೇಕು ಎನ್ನುವ ಚರ್ಚೆ ಹೆಚ್ಚಾಗಿದೆ. ಕಾಂಗ್ರೆಸ್​ಗೆ ಹೆಚ್ಚಿನ ಬೆಂಬಲ ವ್ಯಕ್ತ ಆಗುತ್ತಿದೆ. ಆದರೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಶಕ್ತಿ ಅಭಿಯಾನ ಆರಂಭಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವಕಾಂಕ್ಷಿ ಯೋಜನೆ ಯಶಸ್ವಿಯಾಗಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಶಕ್ತಿ ಅಭಿಯಾನ ಆರಂಭಗೊಂಡು ನಾಲ್ಕೈದು ತಿಂಗಳೂ ಕಳೆದರೂ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಶೇ. 50-60ರಷ್ಟು ಮಾತ್ರ ನೋಂದಣಿ ಆಗಿದೆ. ಬ್ಲಾಕ್ ಅಧ್ಯಕ್ಷರು ಗಂಭೀರವಾಗಿ ಪರಿಗಣಿಸಿ ಬೂತ್​ವುಟ್ಟದಲ್ಲಿ ಪಕ್ಷ ಸಂಘಟನೆಗೆ ಶಕ್ತಿ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ನಷ್ಟ ಆಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿದೆ. ಕಾಂಗ್ರೆಸ್ ಸರ್ಕಾರ ದೇಶಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ ಎಂಬಂತೆ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಎಂಎಲ್​ಸಿ ಆರ್.ಪ್ರಸನ್ನಕುಮಾರ್ ಮಾತನಾಡಿ, ಬ್ಲಾಕ್ ಅಧ್ಯಕ್ಷರಿಗೆ ಎಲ್ಲ ಬೂತ್​ಗಳಲ್ಲಿ ಶಕ್ತಿ ನೋಂದಣಿ ಮಾಡಿಸುವುದು ಕಷ್ಟ. 10 ಸದಸ್ಯರ ಬ್ಲಾಕ್ ಸಮಿತಿ ರಚಿಸಿ ಪ್ರತಿಯೊಬ್ಬರಿಗೂ ತಲಾ 10-15 ಬೂತ್​ನಲ್ಲಿ ನೋಂದಣಿ ಮಾಡಿಸಲು ಸೂಚಿಸಿ ನಿಗಾ ವಹಿಸಬೇಕು. ನಿಗದಿತ ಅವಧಿಯಲ್ಲಿ ಗುರಿ ತಲುಪಲು ಶ್ರಮಿಸಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಾ ಸುಲ್ತಾನ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ಬಲ್ಕೀಷ್ ಬಾನು, ಪಲ್ಲವಿ, ವಿಜಯಲಕ್ಷ್ಮೀ ಪಾಟೀಲ್, ಎಸ್.ಪಿ.ಶೇಷಾದ್ರಿ, ವಿಶ್ವನಾಥ್ ಕಾಶಿ, ನಾಗರಾಜ್, ರಾಮೇಗೌಡ, ದೇವೇಂದ್ರಪ್ಪ ಇದ್ದರು.

ಸಭೆಯಲ್ಲಿ ಅಸಮಾಧಾನ: ಶಕ್ತಿ ಅಭಿಯಾನದ ಬಗ್ಗೆ ಬ್ಲಾಕ್ ಅಧ್ಯಕ್ಷರು ವಿವರ ನೀಡುವಾಗ ಗೊಂದಲ ಉಂಟಾಗಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷರು ಬ್ಲಾಕ್ ಅಧ್ಯಕ್ಷರು ಹಾಗೂ ಬೂತ್ ಮುಖಂಡರಿಗೆ ಸೂಚನೆ ನೀಡುವಾಗ, ತಳಮಟ್ಟದಲ್ಲಿ ಹೊಂದಾಣಿಕೆ ಇಲ್ಲದಿರುವ ಕುರಿತು ಕೆಲವರು ಬೇಸರ ವ್ಯಕ್ತಪಡಿಸಿದರು. ಅಧಿಕಾರ ಅನುಭವಿಸಿದ ಮುಖಂಡರು ಬ್ಲಾಕ್ ಅಧ್ಯಕ್ಷರು, ಬೂತ್ ಮುಖಂಡರೊಂದಿಗೆ ಶಕ್ತಿ ಅಭಿಯಾನ ನೋಂದಣಿಗೆ ಆಗಮಿಸಬೇಕು. ಬೂತ್ ಮುಖಂಡರು ಮಾತ್ರ ಹೋದರೆ ಪ್ರಯೋಜನ ಆಗುವುದಿಲ್ಲ. ಹಿರಿಯ ನಾಯಕರು ಕೈಜೋಡಿಸಿದರೆ ಮಾತ್ರ ಶಕ್ತಿ ಅಭಿಯಾನ ನಿಗಧಿತ ಗುರಿ ತಲುಪಲು ಸಾಧ್ಯ ಎಂದು ಅನಿಸಿಕೆ ವ್ಯಕ್ತಪಡಿಸಿದರು.