ಲೋಕಸಭೆ ಟಿಕೆಟ್​ಗೆ ಪೈಪೋಟಿ

ಹುಬ್ಬಳ್ಳಿ:ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಧಾರವಾಡ ಹಾಗೂ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎಂಬ ಕುರಿತು ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಟಾಗೋರ್ ಒಬ್ಬೊಬ್ಬರಿಂದ ಅಭಿಪ್ರಾಯ ಸಂಗ್ರಹಿಸಿದರು. ಲೋಕಸಭೆ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಬೆಂಬಲಿಗರಿಂದ ತೀವ್ರ ಪೈಪೋಟಿ ನಡೆದಿದೆ.

ಗೋಕುಲ ರಸ್ತೆಯ ಅಕ್ಷಯ ಇನ್ ಹೋಟೆಲ್​ನಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರ ರಹಸ್ಯ ಸಭೆ ನಡೆಯಿತು. ಸಭೆಯಲ್ಲಿ ಅಕ್ಷರಶಃ ರಾಜಕೀಯ ಚುನಾವಣಾ ಮೇಲಾಟ ಆರಂಭವಾಗಿತ್ತು. ಅವರ ಪರ ಇವರು ಇವರ ಪರ ಅವರು ಲಾಬಿ ನಡೆಸಿದರು. ಮತ್ತೊಂದೆಡೆ ಮಾಣಿಕ್ಯಂ ಟಾಗೋರ್ ಪ್ರಮುಖ ಮುಖಂಡರಿಂದ ಲೋಕಸಭೆ ಅಭ್ಯರ್ಥಿಯ ಬಗ್ಗೆ ವೈಯಕ್ತಿಕ ಮಾಹಿತಿ ಸಂಗ್ರಹಿಸಿದರು.

ಸಭೆಯಲ್ಲಿ ಮಾಜಿ ಸಂಸದರು, ಹಾಲಿ, ಮಾಜಿ ಶಾಸಕರು, ಜಿ.ಪಂ., ತಾ.ಪಂ. ಸದಸ್ಯರು, ಪಾಲಿಕೆ ಸದಸ್ಯರು, ರಾಜ್ಯ, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸೇರಿ ನೂರಾರು ಪ್ರಮುಖರು ಹಾಜರಿದ್ದರು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಾಗಲಕೋಟೆ ಜಿಲ್ಲೆ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಅನಿಸಿಕೆ ಹಂಚಿಕೊಂಡರು. ಸಂಜೆ 5 ಗಂಟೆಯಿಂದ ರಾತ್ರಿ 8ರವರೆಗೆ ಧಾರವಾಡ ಜಿಲ್ಲೆ ಮುಖಂಡರಿಂದ ಅಭಿಪ್ರಾಯ ಕಲೆ ಹಾಕಿದರು.

ಧಾರವಾಡ ಲೋಕಸಭೆ ಟಿಕೆಟ್ ಆಕಾಂಕ್ಷಿಗಳ ಹೆಸರನ್ನು ಟಾಗೋರ್ ಬಳಿ ಹೇಳಿಕೊಂಡರು. ಆ ಅಭ್ಯರ್ಥಿಯನ್ನೇ ಏಕೆ ಆಯ್ಕೆ ಮಾಡಬೇಕು ಎಂದು ವಿವರಣೆ ನೀಡಿದರು. ಅದರಲ್ಲಿ ಪ್ರಮುಖವಾಗಿ ವಿನಯ ಕುಲಕರ್ಣಿ, ಸಂತೋಷ ಲಾಡ್, ಅನಿಲಕುಮಾರ್ ಪಾಟೀಲ, ಸದಾನಂದ ಡಂಗನವರ, ಅಲ್ತಾಫ ಹಳ್ಳೂರ, ಮತ್ತಿತರರು ಹೆಸರುಗಳನ್ನು ಹಲವು ಮುಖಂಡರು ಪ್ರಸ್ತಾಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ವಿನಯ ಕುಲಕರ್ಣಿ, ಎ.ಎಂ. ಹಿಂಡಸಗೇರಿ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ಅಲ್ತಾಫ ಹಳ್ಳೂರ, ಎಫ್.ಎಚ್. ಜಕ್ಕಪ್ಪನವರ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಶಿವಕುಮಾರ ಮೆಣಸಿನಕಾಯಿ, ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮತ್ತಿತರು ಉಪಸ್ಥಿತರಿದ್ದರು.

ಎಲ್ಲ ಗುಪ್ತ್ ಗುಪ್ತ್: ಗುಪ್ತ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಆಯ್ದ ಮುಖಂಡರು, ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಪ್ರಬಲ ಮುಖಂಡರು ಒಬ್ಬೊಬ್ಬರಾಗಿ ಟಾಗೋರ್ ಬಳಿ ಗುಪ್ತವಾಗಿ ಅಭಿಪ್ರಾಯ ರವಾನಿಸಿ ಹೊರ ಬರುತ್ತಿದ್ದ ದೃಶ್ಯ ಕಂಡುಬಂತು.

ನಮ್ಮವರಿಗೆ ಭಾಷಣ ಬರಲ್ಲ:ಸ್ವಾತಂತ್ರ್ಯ ಸಿಕ್ಕ ಬಳಿಕ ಕಾಂಗ್ರೆಸ್ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ಆದರೆ, ಅದರ ಪ್ರಚಾರ ತೆಗೆದುಕೊಳ್ಳುವುದು ನಮ್ಮ ಕಾರ್ಯಕರ್ತರಿಗೆ ಗೊತ್ತಿಲ್ಲ ಎಂದು ವಿನಯ ಕುಲಕರ್ಣಿ ಸಭೆಯಲ್ಲಿ ಹೇಳಿದರು. ಬಿಜೆಪಿ ಮುಖಂಡರು ಸಣ್ಣ ಪುಟ್ಟ ಕೆಲಸಗಳಿಗೆ ಅಪಾರ ಪ್ರಚಾರ ಪಡೆಯುತ್ತಾರೆ. ನಾವು ದೊಡ್ಡ ಕೆಲಸ ಮಾಡಿದರೂ ನಮ್ಮ ಕಾರ್ಯಕರ್ತರು, ಮುಖಂಡರಿಂದ ಪ್ರಚಾರ ಪಡೆಯುವಲ್ಲಿ ವಿಫಲವಾಗುತ್ತಿದ್ದೇವೆ ಎಂದರು.

ಸಿದ್ದರಾಮಯ್ಯಗೆ ಹೊಗಳಿಕೆ :ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತಿ ಹೆಚ್ಚು ಅಭಿವೃದ್ಧಿಪರ ಕೆಲಸಗಳು ಆಗಿವೆ. ಧಾರವಾಡಕ್ಕೆ ಐಐಟಿ ಬರಲು ಅವರ ಪ್ರಯತ್ನವಿದೆ. ರಾಜ್ಯ ಮರೆಯಲಾರದಂಥ ಅನೇಕ ಕೆಲಸಗಳನ್ನು ಅವರು ಮಾಡಿದ್ದಾರೆ ಎಂದು ವಿನಯ ಕುಲಕರ್ಣಿ ಹಾಡಿ ಹೊಗಳಿದರು.