ಲೋಕಸಭೆ ಚುನಾವಣೆ ಬಹಿಷ್ಕಾರ

ಶಿಡ್ಲಘಟ್ಟ: ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರೇಡ್-2 ತಹಸೀಲ್ದಾರ್ ವೈ.ಎಲ್.ಹನುಮಂತರಾವ್​ಗೆ ಭಕ್ತರಹಳ್ಳಿ ಗ್ರಾಪಂನ ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರು ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ಗ್ರಾಮಕ್ಕೆ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ ಒದಗಿಸುವಲ್ಲಿ ಚುನಾಯಿತ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಆದ್ದರಿಂದ ಏ.18ರಂದು ನಡೆಯುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಗ್ರಾಮದ ರಾಮಯ್ಯ, ಮುನಿಯಪ್ಪ, ಪ್ರಕಾಶ್, ಮುರಳೀಧರ್, ವೆಂಕಟಮೂರ್ತಿ ತಿಳಿಸಿದ್ದಾರೆ.

ಕಾಕಚೊಕ್ಕಂಡಹಳ್ಳಿಯಿಂದ ಅಂಕತಟ್ಟಿ ಗೇಟ್​ವರೆಗಿನ ರಸ್ತೆ ಹದಗೆಟ್ಟಿದೆ. ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಡಾಂಬರೀಕರಣ ಮಾಡಬೇಕಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿರುವ ಜನಪ್ರತಿನಿಧಿಗಳು ನಮಗೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮಹೇಶ್, ಗಂಗಾಧರ್, ಮುರಳಿಕೃಷ್ಣ, ಮನೋಹರ್, ರಾಜೇಂದ್ರ, ಹರೀಶ್, ಬಸವರಾಜು, ರವಿಕುಮಾರ್, ಸಂಪತ್, ರೈತ ಸಂಘದ ಭಕ್ತರಹಳ್ಳಿ ಪ್ರತೀಶ್, ಬೆಳ್ಳೂಟಿ ಮುನಿಕೆಂಪಣ್ಣ, ಡಿ.ವಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣ, ಕೆ.ಎಚ್.ದೇವರಾಜ್, ಶ್ರೀರಾಮಪ್ಪ ಉಪಸ್ಥಿತರಿದ್ದರು.