ಮೈಸೂರು: ಲೈಸೆನ್ಸ್ ರಹಿತ ರೈತರಿಗೂ ತಂಬಾಕು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ತಂಬಾಕು ಬೆಳೆಗಾರರ ಹಿತರಕ್ಷಣಾ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಂಬಾಕು ಕೃಷಿಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ವಿಜಯನಗರದಲ್ಲಿರುವ ತಂಬಾಕು ಮಾರಾಟ ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಹಕ್ಕೊತ್ತಾಯ ಮಂಡಿಸಿದರು.
ತಂಬಾಕು ಮಾರಾಟ ಕೇಂದ್ರದಲ್ಲಿ ಫೆ.21ಕ್ಕೆ ವಹಿವಾಟು ಸ್ಥಗಿತಗೊಳಿಸಲಾಗುವುದು ಎಂದು ಫಲಕ ಹಾಕಲಾಗಿದೆ. ಇದರಿಂದಾಗಿ ಜನವರಿಯಲ್ಲೇ ಕಟಾವು ಮಾಡಿರುವ ತಂಬಾಕು ಗುಣಮಟ್ಟ ಕಳೆದುಕೊಳ್ಳಲಿದೆ. ಜಿಲ್ಲೆಯ 11 ಸಾವಿರ ಮತ್ತು ರಾಜ್ಯದಲ್ಲಿ 18 ಸಾವಿರ ಲೈಸೆನ್ಸ್ ರಹಿತ ತಂಬಾಕು ಬೆಳೆಗಾರರಿಗೆ ನಷ್ಟವಾಗಲಿದೆ. ಜತೆಗೆ, ಅನ್ಯಾಯವೂ ಆಗಲಿದೆ. ಆದ್ದರಿಂದ ಲೈಸೆನ್ಸ್‌ರಹಿತ ರೈತರಿಗೆ ತಂಬಾಕು ಬೆಳೆ ಮಾರಾಟಕ್ಕೆ ಅವಕಾಶ ಕಲ್ಪಿಸಲು ಕೂಡಲೇ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಲೈಸೆನ್ಸ್ ರಹಿತ ರೈತರಿಗೆ ದಂಡ ವಿಧಿಸುವ ಪದ್ಧತಿಯನ್ನು ರದ್ದುಪಡಿಸಬೇಕು. ಪ್ರತಿ ಕೆಜಿ ತಂಬಾಕಿಗೆ 350 ರೂ. ಬೆಲೆ ನಿಗದಿ ಪಡಿಸಬೇಕು, ಲೈಸೆನ್ಸ್ ನೀಡಿ ತಂಬಾಕು ಮಂಡಳಿಯಿಂದ ಎಲ್ಲ ಸೌಲಭ್ಯವನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರ ಅಹವಾಲು ಆಲಿಸಿದ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣರಾವ್ ಅವರು, ತಂಬಾಕು ಮಾರುಕಟ್ಟೆಯಲ್ಲಿ ನಾಮಫಲಕ ಹಾಕಿದ್ದರೂ ಫೆ.21ರಂದು ಖರೀದಿ ಮಳಿಗೆಯನ್ನು ಮುಚ್ಚುವುದಿಲ್ಲ. ಜತೆಗೆ, ಇನ್ನಿತರ ಬೇಡಿಕೆ ಈಡೇರಿಸುವ ಕುರಿತು ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈತರು, ಸದ್ಯ ಪ್ರತಿಭಟನೆ ಕೈಬಿಡಲಾಗುವುದು. ಬೇಡಿಕೆ ಈಡೇರದಿದ್ದರೆ ಫೆ.23ರಂದು ಮತ್ತೆ ಪ್ರಾದೇಶಿಕ ವ್ಯವಸ್ಥಾಪಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹುಣಸೂರು ಘಟಕದ ಅಧ್ಯಕ್ಷ ಗೋವಿಂದಯ್ಯ ತಮ್ಮಡ ಹಳ್ಳಿ, ಪ್ರಧಾನ ಕಾರ್ಯದರ್ಶಿ ವಿ. ಬಸವರಾಜ ಕಲ್ಕುಣಿಕೆ, ಮುಖಂಡರಾದ ತಮ್ಮಣ್ಣೇಗೌಡ ನಾಗನಹಳ್ಳಿ, ವೀರಪ್ಪ ಕಲ್ಲಹಳ್ಳಿ, ಚಿನ್ನಪ್ಪ, ನಾಗಪ್ಪ, ಕೃಷ್ಣ ಕಲ್ಲಹಳ್ಳಿ, ಮುದ್ದುಸ್ವಾಮಿ ಗೌಡ, ಷಣ್ಮುಖ, ಚಂದ್ರೇಗೌಡ, ಪುಟ್ಟರಾಜು, ಚಂದ್ರಪ್ಪ, ಗೋವಿಂದಾಚಾರಿ ಇನ್ನಿತರರಿದ್ದರು.