ಲೈವ್​ಬ್ಯಾಂಡ್​ಗಳ ಮೇಲೆ ದಾಳಿ

ಬೆಂಗಳೂರು: ಕಾನೂನುಬಾಹಿರವಾಗಿ ನಡೆಸುತ್ತಿದ್ದ ಎರಡು ಲೈವ್​ಬ್ಯಾಂಡ್ ಮತ್ತು ಎರಡು ಡಾನ್ಸ್ ಬಾರ್​ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಬೌನ್ಸರ್ ಸೇರಿ 11 ಮಂದಿಯನ್ನು ಬಂಧಿಸಿ 8 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಮಾನವ ಕಳ್ಳಸಾಗಣೆ ಮೂಲಕ ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆತಂದು ಅಶ್ಲೀಲ ನೃತ್ಯ ಮಾಡಿಸಲಾಗುತ್ತಿತ್ತು. ನೇಪಾಳ ಮೂಲದ ಒಬ್ಬ ಮಹಿಳೆ ಸೇರಿ 36 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದಿರಾನಗರದ ವೇಪರ್ಸ್ ಡಾನ್ಸ್ ಬಾರ್ ಮೇಲೆ ದಾಳಿ ನಡೆಸಿ ಮ್ಯಾನೇಜರ್​ಗಳಾದ ನವೀನ್​ಕುಮಾರ್, ದಿಲೀಪ್ ಸಾಹು ಮತ್ತು ಸಂಜಯ್ನನ್ನು ಬಂಧಿಸಲಾಗಿದೆ. ಮಾಲೀಕ ಅಕ್ಷತ್ ಪ್ರಸಾದ್ ತಲೆಮರೆಸಿಕೊಂಡಿದ್ದು, ಸಂಗೀತ ಪರಿಕರ ವಶಪಡಿಸಿಕೊಳ್ಳಲಾಗಿದೆ. ಇಂದಿರಾನಗರ 100 ಅಡಿ ರಸ್ತೆಯಲ್ಲಿರುವ ‘ಲಾಪ್ಚ್ 38’ ಡಾನ್ಸ್ ಬಾರ್ ಮೇಲೆ ದಾಳಿ ನಡೆಸಿ ಮ್ಯಾನೇಜರ್ ಅಸ್ಮಿತ್ ಶೆಟ್ಟಿ, ಜಯಕುಮಾರ್, ಡಿಜೆಗಳಾದ ಪಾಸ್ಕಲ್ ಲೆಫ್ಚ ಮತ್ತು ಜಾಲ್ ಎಂಬುವರನ್ನು ಬಂಧಿಸಲಾಗಿದೆ.

ಅಶೋಕನಗರ: ಅಶೋಕನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಮೆಹೆಂದಿ ಬಾರ್ ಮೇಲೆ ದಾಳಿ ನಡೆಸಿ ಬೌನ್ಸರ್​ಗಳಾದ ಸೂರಜ್, ಅರ್ಜುನ್, ಸಂತೋಷ್ ಶೆಟ್ಟಿ ಸೇರಿ 6 ಮಂದಿಯನ್ನು ಬಂಧಿಸಿ 9 ಮಹಿಳೆಯರನ್ನು ರಕ್ಷಿಸಲಾಗಿದೆ.

ಬಾರ್​ನಲ್ಲಿ 2.09 ಲಕ್ಷ ರೂ. ನಗದು, 150 ಟೋಕನ್​ಗಳು, 6 ಡಿವಿಆರ್, ಕಾರ್ಡ್ ಸ್ವೈಪಿಂಗ್ ಮಷಿನ್ ಮತ್ತು ಸಂಗೀತ ವಾದ್ಯ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯುವತಿಯರ ರಕ್ಷಣೆ

ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಲೇಸ್ ಬಾರ್ ಮೇಲೆ ದಾಳಿ ನಡೆಸಿದ ಪೊಲೀಸರು ನಬಿಲ್ ಮತ್ತು ಆನಂದ ಎಂಬುವರನ್ನು ಬಂಧಿಸಿ 27 ಮಹಿಳೆಯರ ರಕ್ಷಿಸಿದ್ದಾರೆ. ಬಾರ್ ಮಾಲೀಕ ನಹೀಮ್ ಅಬ್ದುಲ್ ಹ್ಯಾರೀಸ್, ಪರಮಾನಂದ, ಬ್ಯಾಂಡ್ ಲೀಡರ್ ರಮೇಶ್ ಪರಾರಿಯಾಗಿದ್ದಾರೆ. 5.92 ಲಕ್ಷ ರೂ. ನಗದು, ಮ್ಯೂಸಿಕ್ ಸಿಸ್ಟಮ್ ಡಿವಿಆರ್, ಹಾರ್ಡ್ ಡಿಸ್ಕ್ ಮತ್ತು ಹಣ ಎಣಿಸುವ ಯಂತ್ರ ಜಪ್ತಿ ಮಾಡಲಾಗಿದೆ.