ಲೈಫ್ ಜೊತೆ ಹಾಡುಗಳು-ಟ್ರೇಲರ್

ಬೆಂಗಳೂರು: 2011ರಲ್ಲಿ ತೆರೆಕಂಡಿದ್ದ ‘ಸಾರಥಿ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ ಬಳಿಕ ದಿನಕರ್ ತೂಗುದೀಪ ನಿರ್ದೇಶನದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಹೀಗಿರುವಾಗಲೇ ಕಳೆದ ವರ್ಷ ‘ಲೈಫ್ ಜೊತೆ ಒಂದ್ ಸೆಲ್ಪಿ’ ಸಿನಿಮಾ ಕೈಗೆತ್ತಿಕೊಂಡು, ಇದೀಗ ಆ ಚಿತ್ರದ ಆಡಿಯೋ ಬಿಡುಗಡೆವರೆಗೂ ಆಗಮಿಸಿದ್ದಾರೆ. ಹೌದು, ಜೂ.15ರಂದು ಅದ್ದೂರಿಯಾಗಿ ಆಡಿಯೋ ಮತ್ತು ಟ್ರೇಲರ್ ಲಾಂಚ್ ಮಾಡಲು ಚಿತ್ರತಂಡ ಪ್ಲಾ್ಯನ್ ಮಾಡಿಕೊಂಡಿದೆ. ‘ಕ್ರೇಜಿಸ್ಟಾರ್’ ರವಿಚಂದ್ರನ್ ಮತ್ತು ದರ್ಶನ್ ಮುಖ್ಯ ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಲೈಫ್ ಜೊತೆ ಒಂದ್ ಸೆಲ್ಪಿ’ ಸಿನಿಮಾ ಶುರುವಾದಾಗಿನಿಂದ ಹಲವು ವಿಚಾರಗಳಿಗೆ ಸುದ್ದಿಯಾಗಿತ್ತು. ಮೊದಲನೆಯದು ಚಿತ್ರದ ಕಥೆ. ಪತ್ನಿ ಮಾನಸಾ ಬರೆದ ಕಥೆಗೆ ದಿನಕರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ‘ಜೊತೆ ಜೊತೆಯಲಿ’ ಚಿತ್ರದಲ್ಲಿ ನಿರ್ದೇಶಕ ದಿನಕರ್ ಮತ್ತು ನಾಯಕ ಪ್ರೇಮ್ ಒಂದಾಗಿದ್ದರು. ಬರೋಬ್ಬರಿ 12 ವರ್ಷಗಳ ನಂತರ ಮತ್ತೆ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಹಲವು ವಿಶೇಷಗಳೊಂದಿಗೆ ಸಿದ್ಧಗೊಂಡಿರುವ ‘ಲೈಫ್ ಜೊತೆ ಒಂದ್ ಸೆಲ್ಪಿ’ ಚಿತ್ರ ಆಡಿಯೋ ಬಿಡುಗಡೆ ಮಾಡಿಕೊಳ್ಳುವ ಧಾವಂತದಲ್ಲಿದೆ.

ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಎಲ್ಲ ರೀತಿಯ ಹಾಡುಗಳನ್ನು ಸಿನಿಮಾದಲ್ಲಿ ಅಳವಡಿಸಿದ್ದಾರಂತೆ. ಕಮರ್ಷಿಯಲ್​ಗಿಂತ ಸಂದರ್ಭಕ್ಕೆ ತಕ್ಕದಾದ ಗೀತೆಗಳು ಚಿತ್ರದಲ್ಲಿವೆ ಎನ್ನಲಾಗುತ್ತಿದೆ. ಪಾರ್ಟಿ ಸಾಂಗ್, ಭಾವನಾತ್ಮಕ ಗೀತೆ ಸೇರಿ ಒಟ್ಟು 4 ಹಾಡುಗಳು ಚಿತ್ರದಲ್ಲಿವೆ ಎಂದು ನಿರ್ದೇಶಕ ದಿನಕರ್ ಮಾಹಿತಿ ನೀಡುತ್ತಾರೆ. ಸಖತ್ ಕಾಳಜಿ ವಹಿಸಿ ಸಾಹಿತ್ಯ ಬರೆಸಿದ್ದಾರಂತೆ. ಶೀರ್ಷಿಕೆ ಗೀತೆಗೆ ಕವಿರಾಜ್ ಸಾಹಿತ್ಯ ಬರೆದರೆ, ಒಂದು ಹಾಡಿಗೆ ಯೋಗರಾಜ್ ಭಟ್, ತಾಯಿ-ಮಗನ ಸೆಂಟಿಮೆಂಟ್ ಸೇರಿ ಒಟ್ಟು ಎರಡು ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಆಗಸ್ಟ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರದ್ದು. ಸಮೃದ್ಧಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Leave a Reply

Your email address will not be published. Required fields are marked *