ಲೈಂಗಿಕ ಕಿರುಕುಳ ತಾಳದೆ ದಂಪತಿ ಆತ್ಮಹತ್ಯೆಗೆ ಯತ್ನ

ಹೊಸದುರ್ಗ: ಯುವಕನೊಬ್ಬನ ಲೈಂಗಿಕ ಕಿರುಕುಳದಿಂದ ಮನನೊಂದು, ತಾಲೂಕಿನ ಕೊಂಡಾಪುರದ ದಂಪತಿ ಡೆತ್ ನೋಟ್ ಬರೆದಿಟ್ಟು ಗುರುವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತಿ ಮೃತಪಟ್ಟಿದ್ದು, ಪತ್ನಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕ ಮೈಲಾರಪ್ಪ ಮೃತ ವ್ಯಕ್ತಿ. ಆತನ ಪತ್ನಿ ಸರೋಜಾ ತೀವ್ರ ಅಸ್ವಸ್ಥಗೊಂಡಿದ್ದು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕೊಂಡಾಪುರದ ಯುವಕ, ಭದ್ರಾವತಿ ತಾಲೂಕು ಸೀತಾರಾಮಪುರದ ಪ್ರೌಢಶಾಲೆಯ ಎಸ್‌ಡಿಎ ನೌಕರ ವಿನಯ್, ಆತನ ತಾಯಿ ಶಾರದಮ್ಮ ಹಾಗೂ ಮಂಜುನಾಥ್ ಎಂಬುವವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ವಿವರ: ವಿನಯ್ ಎಂಬಾತ ತನ್ನ ಪತ್ನಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಲೈಂಗಿಕ ಕಿರುಕುಳ ನೀಡಿದ್ದನು ಎಮದು ಮೈಲಾರಪ್ಪ- ಸರೋಜಾ ದಂಪತಿ ಹೊಸದುರ್ಗ ಪೊಲೀಸರಿಗೆ ಜೂನ್ 10ರ ಬುಧವಾರ ದೂರು ನೀಡಿದ್ದರು.

ಅಲ್ಲಿ ಸೂಕ್ತ ಸ್ಪಂದನೆ ದೊರೆತಿರಲಿಲ್ಲ. ಯುವಕನ ಸಂಬಂಧಿ ಪೊಲೀಸ್ ಇಲಾಖೆಯಲ್ಲಿರುವ ಕಾರಣ ಇಲಾಖೆಯವರು ಸ್ಪಂದಿಸಿಲ್ಲ ಎಂದ ದಂಪತಿಗಳು ಡೆತ್ ನೋಟ್‌ನಲ್ಲಿ ದೂರಿದ್ದರು.

ಈ ನಡುವೆ ಯುವಕ ಫೋನ್‌ನಲ್ಲಿ ಮಾತನಾಡಿದ್ದನೆನ್ನಲಾದ ಆಡಿಯೋ ಬಹಿರಂಗವಾಗಿ ತಮ್ಮ ಮರ್ಯಾದೆಗೆ ಚ್ಯುತಿ ಬಂದಿದೆ ಎಂದು ಎಂದು ಮನನೊಂದ ದಂಪತಿ ಆತ್ಮಹತ್ಯೆಗೆ ಯೋಚಿಸಿದ್ದರು.

ಗುರುವಾರ ಸಂಜೆ 5ಕ್ಕೆ ಕಬ್ಬಳ ಗ್ರಾಮದ ಬಳಿಯಿರುವ ರಂಗನಾಥಸ್ವಾಮಿ ದೇವಾಲಯದ ಬಳಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ 6 ನಿಮಿಷಗಳ ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತರ ವಾಟ್ಸ್‌ಆಪ್‌ಗೆ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು.

ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿ ಹುಡುಕಲು ಶುರು ಮಾಡಿದರು. ಮೊಬೈಲ್ ಆನ್ ಆದ ತಕ್ಷಣ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಲು ಪ್ರಯತ್ನಿಸಿದರು. ಲೋಕೆಷನ್ ಪಡೆದು ಹುಡುಕಾಟ ತೀವ್ರಗೊಳಿಸಿದರು.

ತಡ ರಾತ್ರಿ 1 ಗಂಟೆಗೆ ತೊಣಚೆನಹಳ್ಳಿ ರಸ್ತೆ ಬದಿ ಬೆವಿನಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಪತ್ತೆಯಾಗಿದ್ದರು. ಮೈಲಾರಪ್ಪ ಸ್ಥಳದಲ್ಲಿಯೇ ಸಾವಿಗಿಡಾಗಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಸರೋಜಮ್ಮ ಅವರನ್ನು ನೇಣು ಕುಣಿಕೆಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.

ನಮ್ಮ ಈ ಸ್ಥಿತಿಗೆ ಕಾರಣರಾದ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ನಮ್ಮ ಅತ್ಮಕ್ಕೆ ಶಾಂತಿ ದೊರಕಿಸುವಂತೆ ದಂಪತಿ ಡೆತ್ ನೋಟ್‌ನಲ್ಲಿ ಮನವಿ ಮಾಡಿದ್ದರು.

Leave a Reply

Your email address will not be published. Required fields are marked *