More

  ಲಿಂ. ಸಿದ್ಧಲಿಂಗ ಶ್ರೀಗಳ ಜನ್ಮದಿನ ಭಾವೈಕ್ಯ ದಿನವಾಗಲಿ

  ಗದಗ: ಕೋಮು ಸೌಹಾರ್ದತೆಯ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ ಪಡೆದ ದಕ್ಷಿಣ ಭಾರತದ ಏಕೈಕ ಸ್ವಾಮೀಜಿಗಳಾಗಿದ್ದ ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲು ಸರ್ಕಾರ ಮುಂದಾಗಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

  ನಗರದ ತೋಂಟದಾರ್ಯ ಮಠದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 72ನೇ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಭಾವೈಕ್ಯ ದಿನಾಚರಣೆ’ ಹಾಗೂ ಶ್ರೀಗಳ ಕುರಿತ ಗ್ರಂಥಗಳ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

  ತಮ್ಮ ಜೀವಿತಾವಧಿಯುದ್ದಕ್ಕೂ ಬಸವತತ್ವಗಳ ಅನುಷ್ಠಾನಕ್ಕಾಗಿ ಶ್ರಮಿಸಿದ ಅವರು ಶ್ರೀಮಠವನ್ನು ಭಾವೈಕ್ಯ ಕೇಂದ್ರವನ್ನಾಗಿಸಿ ತನ್ಮೂಲಕ ಕೋಮು ಸೌಹಾರ್ದತೆಗೆ ಮೇಲ್ಪಂಕ್ತಿ ಹಾಕಿದರು. ಹೀಗಾಗಿ ಸರ್ಕಾರ ಲಿಂಗೈಕ್ಯ ಶ್ರೀಗಳ ಜಯಂತಿಯನ್ನು ಭಾವೈಕ್ಯತೆ ದಿನವಾಗಿ ಆಚರಿಸಬೇಕು ಹಾಗೂ ನಗರದಲ್ಲಿ ಭಾವೈಕ್ಯ ಭವನ ನಿರ್ವಿುಸಲು ಮುಂದಾಗಬೇಕೇಂದು ಸರ್ಕಾರಕ್ಕೆ ಮನವಿ ಮಾಡಿದರು.

  ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಗೃಹಸ್ಥರ ಮನೆಯಲ್ಲಿ ಪುತ್ರೋತ್ಸವವಾದರೆ, ಮಠಗಳಲ್ಲಿ ಪುಸ್ತಕೋತ್ಸವಗಳಾಗಬೇಕೆಂದು ನುಡಿಯುತ್ತಿದ್ದ ಲಿಂಗೈಕ್ಯ ಶ್ರೀಗಳ ಜಯಂತಿಯಲ್ಲಿ ಪುಸ್ತಕಗಳ ಬಿಡುಗಡೆಗೆ ಆದ್ಯತೆ ನೀಡಿರುವುದು ಅವರಿಗೆ ಸಲ್ಲಿಸಿರುವ ಗೌರವ ಎಂದರು.

  ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಸಾಹಿತಿ ವೀರಣ್ಣ ರಾಜೂರ, ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿದರು.

  ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಕುರಿತು ಡಾ. ಜಗದೀಶ ಕೊಪ್ಪ ಹಾಗೂ ಪೊ›. ಶಶಿಧರ ತೋಡಕರ ಸಂಪಾದಿಸಿದ ‘ಸಮಾಜಮುಖಿ’, ಪೊ›.ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ‘ಸನ್ನಿಧಾನ’, ವೀರನಗೌಡ ಮರಿಗೌಡರ ರಚಿಸಿದ ‘ವಿಶ್ವ ಮಾನವ’, ಜಿ.ವಿ. ಹಿರೇಮಠ ರಚಿಸಿದ ‘ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

  ಶಿರೋಳ ಗುರುಬಸವ ಸ್ವಾಮೀಜಿ, ಸಂಡೂರ ವಿರಕ್ತಮಠದ ಪ್ರಭು ಸ್ವಾಮೀಜಿ, ಅರಸೀಕೆರೆ ಕೋಲಶಾಂತೇಶ್ವರಮಠದ ಶಾಂತಲಿಂಗ ಸ್ವಾಮೀಜಿ, ಯಶವಂತನಗರ ಸಿದ್ಧರಾಮೇಶ್ವರಮಠದ ಗಂಗಾಧರ ಸ್ವಾಮೀಜಿ ಇದ್ದರು.

  ಮಾಜಿ ಸಚಿವ ಎಸ್.ಎಸ್ ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ತಾ.ಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ತೊಗಲುಗೊಂಬೆ ಕಲಾವಿದ ವೀರಣ್ಣ ಬೆಳಗಲ್, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಎಂ.ಸಿ ಐಲಿ, ಶಶಿ ಸಾಲಿ, ಶಂಕರ ಹಲಗತ್ತಿ ಉಪಸ್ಥಿತರಿದ್ದರು. ವಿವೇಕಾನಂದಗೌಡ ಪಾಟೀಲ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts