ಲಿಂಗದಹಳ್ಳಿಯಲ್ಲಿ ಉಲ್ಬಣಿಸಿದ ಡೆಂಘೆ

ರಾಣೆಬೆನ್ನೂರ: ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಡೆಂಘೆ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮದ ತುಂಬ ಆತಂಕದ ವಾತಾವರಣ ನಿರ್ವಣವಾಗಿದೆ.

ಪ್ರತಿ ಮನೆಯಲ್ಲಿ ಕನಿಷ್ಠ ಇಬ್ಬರು ಡೆಂಘೆ ಮಾರಿಯಿಂದ ಬಳಲುತ್ತಿದ್ದಾರೆ. ಸುಮಾರು 2500 ಜನಸಂಖ್ಯೆಯಳ್ಳ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಮಂದಿಯೇ ಹೆಚ್ಚಾಗಿದ್ದು, ಇಲ್ಲಿಯತನಕ ಆರು ಡೆಂಘೆ ಪ್ರಕರಣಗಳು ದೃಢಪಟ್ಟಿವೆ. ಸುಮಾರು 8 ಮಂದಿಗೆ ಶಂಕಿತ ರೋಗ ಕಾಣಿಸಿಕೊಂಡಿದ್ದು, ಸುಮಾರು 80 ಜನರು ಜ್ವರದಿಂದ ಬಳಲುತ್ತಿದ್ದಾರೆ.

ಸ್ವಚ್ಛತೆ ಮರೀಚಿಕೆ: ಗ್ರಾಮದ ಎಸ್ಸಿ-ಎಸ್ಟಿ ಓಣಿ ಹಾಗೂ ವಿವಿಧೆಡೆ ಚರಂಡಿಗಳಲ್ಲಿ ಕೊಳಚೆ ನೀರು ನಿಂತಲ್ಲೇ ನಿಂತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಅಧಿಕಾರಿಗಳು ಕೊಳಚೆ ನೀರಲ್ಲಿ ಉತ್ಪತ್ತಿಯಾಗುವ ಸೊಳ್ಳೆಗೂ ಡೆಂಘೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ, ದಿನದಿಂದ ದಿನಕ್ಕೆ ಗ್ರಾಮದಲ್ಲಿ ಡೆಂಘೆ ಜ್ವರ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಕುಡಿಯುವ ನೀರಲ್ಲೂ ಲಾರ್ವಾ: ಮನೆಗಳಲ್ಲಿ ಕುಡಿಯುವ ನೀರು ಸಂಗ್ರಹಿಸಿದ ತೊಟ್ಟಿ ಹಾಗೂ ಬಿಂದಿಗೆಗಳಲ್ಲೂ ಲಾರ್ವಾ ಕಂಡುಬಂದಿದ್ದು, ಇವು ಸುಮಾರು 8ದಿನಗಳಲ್ಲಿ ಸೊಳ್ಳೆಗಳಾಗಿ ಪರಿವರ್ತನೆಯಾಗಿ, ಹಗಲಿನ ವೇಳೆಯಲ್ಲಿ ಕಚ್ಚುತ್ತವೆ. ಇದರಿಂದ ಡೆಂಘೆ ಕಾಣಿಸಿಕೊಳ್ಳುತ್ತದೆ. ಗ್ರಾಮದಲ್ಲಿ ಈಗಾಗಲೇ ಈಡೀಸ್ ಸೊಳ್ಳೆಗಳು ಕಂಡುಬಂದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಆಸ್ಪತ್ರೆ ಬಲು ದೂರ: ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದರೆ ತಕ್ಷಣವೇ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ತಾಲೂಕು ಕೇಂದ್ರ ಸುಮಾರು 17 ಕಿ.ಮೀ., ಹಲಗೇರಿ 10 ಕಿ.ಮೀ, ತುಮ್ಮಿನಕಟ್ಟೆ 20 ಕಿ.ಮೀ. ಅಂತರದಲ್ಲಿ ಪ್ರಾಥಮಿಕ ಆಸ್ಪತ್ರೆ ಇದೆ. ಇದರಿಂದ ಗ್ರಾಮಸ್ಥರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುವುದು ಕಷ್ಟ ಸಾಧ್ಯವಾಗಿದೆ. ಸ್ಥಳೀಯ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಫಾಗಿಂಗ್ ಮತ್ತು ಸ್ವಚ್ಛಗೆ ಕುರಿತು ಅರಿವು ಮೂಡಿಸುತ್ತಿದ್ದರೂ ಜ್ವರದ ಪ್ರಕರಣಗಳು ಹತೋಟಿಗೆ ಬಂದಿಲ್ಲ. ಜಿಲ್ಲಾ ವೈದ್ಯಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಇಲ್ಲಿನ ಜನತೆಯ ಸಂಕಷ್ಟವನ್ನು ಅರಿಯಬೇಕು. ರೋಗ ಹತೋಟಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಮಸ್ಥರಾದ ಶಿವಪುತ್ರಪ್ಪ ತಳವಾರ ಹಾಗೂ ಬಸವರಾಜ ಸಾಲಿಮಠ.

ಬಾವಿ ಸ್ವಚ್ಛಗೊಳಿಸಲು ಆಗ್ರಹ: ಲಿಂಗದಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಬಾವಿಯೊಂದು ಹಾಳು ಬಿದ್ದಿದೆ. ಬಾವಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಇತರ ತ್ಯಾಜ್ಯಗಳು ಸಂಗ್ರಹಗೊಂಡಿವೆ. ಇತ್ತೀಚೆಗೆ ಬಾವಿಯಲ್ಲಿ ನಾಯಿಯೊಂದು ಬಿದ್ದು ಮೃತಪಟ್ಟಿತ್ತು. ಸುಮಾರು 6 ದಿನಗಳ ನಂತರ ಗ್ರಾಮದ ಕೆಲ ಯುವಕರು ಬಾವಿಯಿಂದ ಸತ್ತ ನಾಯಿಯನ್ನು ತೆರವು ಮಾಡಿದ್ದಾರೆ. ಸುಮಾರು ಐದು ವರ್ಷಗಳಿಂದ ಸ್ವಚ್ಛತೆಯನ್ನೇ ಕಾಣದ ಬಾವಿಯಲ್ಲಿನ ತ್ಯಾಜ್ಯವನ್ನು ವಿಲೇ ಮಾಡಬೇಕು ಹಾಗೂ ಬಾವಿಗೆ ಸೂಕ್ತ ರಕ್ಷಣಾ ಕವಚ ನಿರ್ವಿುಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಂಕಿತ ಡೆಂಘೆಗೆ ಯುವತಿ ಸಾವು!

ಮೂರ್ನಲ್ಕು ದಿನಗಳಿಂದ ಶಂಕಿತ ಡೆಂಘೆಯಿಂದ ನರಳುತ್ತಿದ್ದ ಯುವತಿಯೊಬ್ಬಳು ಬುಧವಾರ ಸಂಜೆ ಮೃತಪಟ್ಟಿದ್ದಾಳೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ವೈದ್ಯಕೀಯ ವರದಿ ಬಂದ ನಂತರವಷ್ಟೇ ಡೆಂಘೆ ಪ್ರಕರಣ ಹೌದೋ ಅಥವಾ ಅಲ್ಲವೋ ಎಂಬುದನ್ನು ಖಚಿತ ಪಡಿಸುವುದಾಗಿ ತಾಲೂಕು ವೈದ್ಯಾಧಿಕಾರಿ ಸೋಮಶೇಖರ ಸಣ್ಣಮನಿ ತಿಳಿಸಿದ್ದಾರೆ. ಅಲ್ಲದೆ, ಗ್ರಾಮದ ಇಬ್ಬರು ಬಾಲಕರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂತಹ ಪ್ರಕರಣಗಳು ಗ್ರಾಮದಲ್ಲಿ ಹೆಚ್ಚುತ್ತಿದ್ದು, ದಾವಣಗೆರೆ, ರಾಣೆಬೆನ್ನೂರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.