More

    ಲಾವಣಿ ಕಲಾವಿದೆ ರುದ್ರಾಂಬಿಕಾಗೆ ಜಾನಪದ ಅಕಾಡೆಮಿ ಪ್ರಶಸ್ತಿ

    ಬೆಳಗಾವಿ: ಜಾಗತೀಕರಣದ ಪ್ರಭಾವದಿಂದಾಗಿ ಜಾನಪದ ಸಾಹಿತ್ಯದ ಅನೇಕ ಪ್ರಕಾರಗಳು ನಶಿಸಿಹೋಗುತ್ತಿವೆ. ಇಂತಹ ಸಂದರ್ಭದಲ್ಲಿಯೇ ಜಾನಪದ ಸಾಹಿತ್ಯವನ್ನು ಉಳಿಸಿ, ಬೆಳೆಸುವಲ್ಲಿ ಅವಿರತ ಶ್ರಮ ಹಾಕುತ್ತಿದ್ದಾರೆ. ಅಂತಹವರಲ್ಲಿ ಬೆಳಗಾವಿಯ ‘ರುದ್ರಾಂಬಿಕಾ ಮಹಾಂತೇಶ ಯಾಳಗಿ’ ಅವರೂ ಪ್ರಮುಖರಾಗಿದ್ದಾರೆ.

    ಜಾನಪದದ ಪ್ರಾಕಾರಗಳಲ್ಲಿ ಒಂದಾಗಿರುವ ಲಾವಣಿ ಕಲೆಯನ್ನು ಉಳಿಸಿ, ಬೆಳೆಸುತ್ತಿರುವ ಅವರ ಶ್ರಮಕ್ಕೆ 2021-22ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.
    ಲಾವಣಿ ಕಲೆಯು ಉತ್ತರ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಕಲಬುರ್ಗಿ, ಬೀದರ, ರಾಯಚೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳೊಂದಿಗೆ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಲಾವಣಿ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸಂಗೀತ, ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ.

    ಬಹುಭಾಷೆಯಲ್ಲಿ ಗಾಯನ: ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಹುಟ್ಟಿ ಬೆಳೆದು, ಬೆಳಗಾವಿ ನಗರದಲ್ಲಿ ವಾಸಿಸುತ್ತಿರುವ 60 ವರ್ಷದ ರುದ್ರಾಂಬಿಕಾ ಯಾಳಗಿ ಅವರು, ಪ್ರಾಥಮಿಕ ಶಾಲಾ ಹಂತದಲ್ಲಿಯೇ ಲಾವಣಿ ಪದಗಳನ್ನು ಹಾಡುತ್ತಿದ್ದರು. ನಂತರದ ದಿನಗಳಲ್ಲಿ ಅವರು, ವಿವಿಧ ಲಾವಣಿ ಪದಗಳನ್ನು ಸಂಗ್ರಹಿಸತೊಡಗಿದರು. 1986ರಿಂದ ಆ ಎಲ್ಲ ಲಾವಣಿ ಪದಗಳಿಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹಾಡುತ್ತ ಜನಪ್ರಿಯಗೊಳಿಸಿದರು. ಕಳೆದ 30 ವರ್ಷಗಳಿಂದ ಲಾವಣಿ ಜನಪದ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ರುದ್ರಾಂಬಿಕಾ, ಕನ್ನಡ ಭಾಷೆಯಲ್ಲಷ್ಟೇ ಅಲ್ಲದೆ ಕೊಂಕಣಿ, ಮರಾಠಿ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲೂ ಲಾವಣಿ ಪದಗಳನ್ನು ಹಾಡುತ್ತಾರೆ. ಇದೇ ಅವರ ವಿಶೇಷತೆ.

    ಹಾಡುವ ಶೈಲಿಗೂ ನವಸ್ಪರ್ಶ: ಲಾವಣಿ ಕಲೆಯನ್ನು ಜನಮಾನಸಕ್ಕೆ ತಲುಪಿಸುತ್ತಿರುವ ರುದ್ರಾಂಬಿಕಾ ಯಾಳಗಿ ಅವರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಕಾರ್ಯಕ್ರಮ ನೀಡುತ್ತಿದ್ದಾರೆ. ಜತೆಗೆ ವಿವಿಧ ಸಂಗೀತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಲಾವಣಿ ಪದದ ವಿಶೇಷತೆ ತಿಳಿಸಿ, ಅವರಿಂದ ಹಾಡಿಸಿ ಈ ಕಲೆಯನ್ನು ಬೆಳೆಸುತ್ತಿದ್ದಾರೆ. 1980ರ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿದ್ದ ಲಾವಣಿ ಪದಗಳನ್ನು ಅವರು ಶಾಶ್ವತವಾಗಿ ಉಳಿಸಿದ್ದಾರೆ. ಅವುಗಳನ್ನು ಮತ್ತೆ ಜನಸಮುದಾಯಕ್ಕೆ ಪರಿಚಯಿಸಲು ಎಫ್‌ಎಂ ರೇಡಿಯೋಗಳಲ್ಲಿ , ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ಲಾವಣಿ ಪದಗಳಿಗೆ ಜೀವಂತಿಕೆ ಇಡುತ್ತಿದ್ದಾರೆ. ಇಂದಿನ ಯುವ ಸಮುದಾಯಕ್ಕೂ ಇಷ್ಟವಾಗುವ ಶೈಲಿಯಲ್ಲಿಯೇ ಲಾವಣಿ ಪದಗಳಿಗೂ ಹೊಸಸ್ಪರ್ಶ ನೀಡಿ ಈ ಕಲೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ.

    ‘ನಮ್ಮ ನಾಡಿನ ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಜಾನಪದ ಸಾಹಿತ್ಯ ಪರಿಚಯಿಸುವ ಕೆಲಸವೂ ಆಗಬೇಕು. ಸರ್ಕಾರ ನನಗೆ ಪ್ರಶಸ್ತಿ ನೀಡುತ್ತಿರುವುದು ಖುಷಿ ತಂದಿದೆ. ಲಾವಣಿ ಕಲೆಯನ್ನು ಉಳಿಸಲು ಪ್ರೋತ್ಸಾಹಿಸಿದಂತಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಲಾವಣಿ ಕಲಾವಿದೆ ರುದ್ರಾಂಬಿಕಾ ಯಾಳಗಿ.

    ಬೆಳೆದ ನಿಂತೈತಿ ಬಿಳಿ ಜೋಳದ ನಿಲ
    ಬುತ್ತಿ ತೋಗೊಂಡು ಹೋಗತ್ತಿನಿ ಹೊಲಕ್ಕ…
    ನಾ ಬರ‌್ತಿನಿ, ಸಂತಸ ಹೊತ್ತಮುಳುಗುದಕ
    ಹೊಳೆಯ ದಂಡಿ ಮ್ಯಾಲ ನಮ್ಮ ಹೊಲ
    ಬೆಳೆದ ನಿಂತೈತಿ ಬಿಳಿ ಜೋಳದ ನಿಲ…
    ತೆನೆಕಾಳು ಮುತ್ತಿನ ಗೊಂಚಲ
    ಅದ್ರ ನೋಡ್ತೇನಿ ಹಿಗ್ಗಿ ಹಾಡುದಕ…


    ಹೀಗೆ, ಮಧುರ ಕಂಠದಲ್ಲಿ, ಜಾನಪದ ಶೈಲಿಯಲ್ಲಿ ರುದ್ರಾಂಬಿಕಾ ಯಾಳಗಿ ಅವರು ವಿವಿಧ ಲಾವಣಿ ಹಾಡುತ್ತಿದ್ದರೆ ಪ್ರೇಕ್ಷಕರ ಎದುರು ಗ್ರಾಮೀಣ ಸೊಗಡು ಅನಾವರಣಗೊಂಡಿರುತ್ತದೆ. ಜಾನಪದ ಹಾಡಿನ ಮೂಲಕವೇ ಅಪಾರ ಮಾಹಿತಿ ಅರುಹುತ್ತಿರುವ ಅವರು, ಜಾನಪದ ಕ್ಷೇತ್ರದ ಮಹತ್ವ ಎಂದೆಂದಿಗೂ ನೆಲೆಯೂರಲು ಜೀವನ ಮುಡಿಪಾಗಿಟ್ಟಿದ್ದಾರೆ.ಜಾನಪದದಲ್ಲಿ 50ಕ್ಕೂ ಹೆಚ್ಚು ಪ್ರಾಕಾರಗಳಿದ್ದು, ಅದರಲ್ಲಿ ಲಾವಣಿಯೂ ಒಂದು. ನನ್ನ ಬಳಿ ಜನಪದೀಯರ ಜೀವನ ಬಿಂಬಿಸುವ ಹಾಡು, ಬೀಸಣಿಕೆ ಮಹತ್ವ, ಧಾನ್ಯ ಕುಟ್ಟುವ, ರಾಶಿ ಮಾಡುವ ಹೀಗೆ ಅನೇಕ ರೀತಿಯ ಲಾವಣಿ ಹಾಡುಗಳಿವೆ. ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ ಸೇರಿದಂತೆ ವಿವಿಧ ನಾಟಕ ಕಂಪನಿಗಳಲ್ಲೂ ಲಾವಣಿ ಹಾಡಿದ್ದೇನೆ. ಲಾವಣಿ ಪದ ನಶಿಸಿ ಹೋಗಬಾರದು. ಈ ಹಿನ್ನೆಲೆಯಲ್ಲಿಯೇ ವಾರದಲ್ಲಿ ಎರಡು ಲಾವಣಿ ಪದ ಹಾಡಿ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದೇನೆ.
    | ರುದ್ರಾಂಬಿಕಾ ಮಹಾಂತೇಶ ಯಾಳಗಿ
    ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts