ಲಾರಿ ಚಾಲಕನ ಮೇಲೆ ಹಲ್ಲೆ, ಮೂವರಿಗೆ ಜೈಲು ಶಿಕ್ಷೆ

ವಿಜಯವಾಣಿ ಸುದ್ದಿಜಾಲ ಪಾಂಡವಪುರ
ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಲಾರಿ ಜಖಂಗೊಳಿಸಿದ ಆರೋಪಿಗಳಿಗೆ 5 ವರ್ಷ ಜೈಲುಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಬಿ.ಕೆ.ರವಿಕಾಂತ ತೀರ್ಪು ನೀಡಿದ್ದಾರೆ.
ತಾಲೂಕಿನ ಬಿಂಡಹಳ್ಳಿ ಗ್ರಾಮದ ನಿವಾಸಿಗಳಾದ ಚಂದ್ರು, ಶಿವು ಮತ್ತು ಗುರು ಎಂಬುವರೇ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಆಗಸ್ಟ್ 2015 ರಂದು ಬೆಳಗ್ಗೆ 11 ಗಂಟೆಯಲ್ಲಿ ಗ್ರಾಮದ ಸಮಾಧಿ ಹಳ್ಳದ ಬಳಿ ನಾಗೇಶ್ ಲಾರಿ ಚಾಲನೆ ಮಾಡಿಕೊಂಡು ಬರುವ ವೇಳೆ ಬೈಕ್‌ಗೆ ಲಾರಿ ತಗುಲಿದೆ. ಈ ವಿಚಾರದಲ್ಲಿ ಮೂವರ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಆರೋಪಿತ ವ್ಯಕ್ತಿಗಳು ಲಾರಿ ಚಾಲಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಲಾರಿಯನ್ನು ಜಖಂಗೊಳಿಸಿದ ಹಿನ್ನೆಲೆಯಲ್ಲಿ ಕೆ.ಆರ್.ಸಾಗರ ಠಾಣೆಯ ಪೊಲೀಸರು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಗಳು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ಲಾರಿ ಮಾಲೀಕ ಶಂಕರಪ್ಪ ಅವರಿಗೆ 20 ಸಾವಿರ ರೂ. ಪರಿಹಾರ ನೀಡುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಪರಿಹಾರ ನೀಡಲು ವಿಫಲವಾದರೆ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೊಜಕ ಎಸ್.ಶಿವಕುಮಾರ್ ವಾದ ಮಂಡಿಸಿದ್ದರು.
——-

Leave a Reply

Your email address will not be published. Required fields are marked *