ಎಚ್.ಡಿ.ಕೋಟೆ: ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿ ಕೈ ಸುಟ್ಟುಕೊಳ್ಳುವ ರೈತರ ನಡುವೆ ಇಲ್ಲೊಬ್ಬ ರೈತ ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಹಾರಪುರ ಗ್ರಾಮದ ರೈತ ಮಂಜುನಾಥ್ ಸ್ವಂತ ಜಮೀನಿನ ಜತೆಗೆ ಸುಮಾರು 40 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಅದರಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಸುತ್ತಮುತ್ತಲಿನ ಹಲವಾರು ಜನರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಂಡಿದ್ದಾರೆ. ತಾಲೂಕು ಕೇಂದ್ರದಿಂದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಈ ಗ್ರಾಮವಿದ್ದು, ಏಳು ಎಕರೆ ಜಮೀನಿನಲ್ಲಿ ತೆಂಗು, ಅಡಕೆ ಬೆಳೆಯಲಾಗುತ್ತಿದೆ. ತೋಟದಲ್ಲಿ ಮನೆ ಮಾಡಿ ವ್ಯವಸಾಯದಲ್ಲಿ ಯಶ ಕಾಣುತ್ತಿದ್ದಾರೆ ರೈತ ಮಂಜುನಾಥ್.
ತಮಿಳುನಾಡಿನಿಂದ ತಂದೆ ಕಾಲದಲ್ಲಿ ಇಲ್ಲಿಗೆ ಬಂದಿರುವ ಮಂಜುನಾಥ್, ಏಳನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ತಂದೆಯಿಂದ ಬಳುವಳಿಯಾಗಿ ಬಂದ ಏಳು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ತೆಂಗು, ಅಡಕೆ, ಕಾಫಿ, ಮೆಣಸು, ಅರಿಶಿಣ ಬೆಳೆಯನ್ನು ಸಮೃದ್ಧಿಯಾಗಿ ಬೆಳೆದಿದ್ದಾರೆ. ಇದಲ್ಲದೆ ಅಕ್ಕಪಕ್ಕದ ಸುಮಾರು ನಲವತ್ತು ಎಕರೆ ಜಮೀನನ್ನು ವರ್ಷಕ್ಕೆ 30 ಸಾವಿರ ಗುತ್ತಿಗೆಗೆ ಪಡೆದು ಅದರಲ್ಲಿ ಬಾಳೆ, ಶುಂಠಿ ಸೇರಿದಂತೆ ತರಕಾರಿ ಬೆಳೆ ಬೆಳೆದು ಸಫಲತೆ ಕಂಡಿದ್ದಾರೆ. ಪ್ರತಿ ಮೂರು ಎಕರೆಗೆ ಒಂದರಂತೆ ಬೋರ್‌ವೆಲ್ ಕೊರೆಸಿ ಹನಿ ನೀರಾವರಿ ಮೂಲಕ ಪ್ರತಿ ಗಿಡಕ್ಕೂ ನೀರು ತಲುಪುವಂತೆ ಮಾಡಿದ್ದಾರೆ. 24 ಗಂಟೆ ನೀರು ಸರಬರಾಜು ಮಾಡಲಾಗುತ್ತಿದ್ದು, ಅದಕ್ಕಾಗಿ ವಿದ್ಯುತ್ ಜನರೇಟರ್ ಅಳವಡಿಸಿದ್ದಾರೆ. ಕೊಟ್ಟಿಗೆ ಗೊಬ್ಬರದೊಂದಿಗೆ ಮಿತಿಯಾಗಿ ರಸಗೊಬ್ಬರ ಬಳಕೆ ಮಾಡುವ ಮೂಲಕ ಸಾವಯುವ ಕೃಷಿಗೆ ಒತ್ತು ನೀಡುತ್ತಿದ್ದಾರೆ.
ಹಾರೋಪುರ, ಬೆಳಗನಹಳ್ಳಿ ಹಾಗೂ ಹೊಸ ತೊರವಳ್ಳಿ ಗ್ರಾಮದ ಸುಮಾರು ಇಪ್ಪತೈದರಿಂದ ಮೂವತ್ತು ಜನ ಕೂಲಿ ಕಾರ್ಮಿಕರಿಗೆ ಪ್ರತಿನಿತ್ಯ ಉದ್ಯೋಗ ನೀಡಿ ಅವರ ಕುಟುಂಬ ನಿರ್ವಹಣೆಗೆ ನೆರವಾಗಿದ್ದಾರೆ.
ಹೆಂಡತಿ ಇಂದಿರಾ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರೆ, ಮಗ ಸಂತೋಷ ಕುಮಾರ್ ಪದವಿ ಮುಗಿಸಿ, ಎಂಬಿಎನಲ್ಲಿ ಶೇರ್ ಮಾರ್ಕೆಟಿಂಗ್ ವಿದ್ಯಾಭ್ಯಾಸ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪುತ್ರಿ ನಂದಿನಿ ಕಂಪ್ಯೂಟರ್ ಸೈನ್ಸ್ ಪದವಿ ಮಾಡುತ್ತಿದ್ದು, ಬಿಡುವಿನ ವೇಳೆ ತಂದೆಗೆ ಸಹಾಯ ಮಾಡುತ್ತಾರೆ.
ಏಳು ಎಕರೆ ಜಮೀನಿನಲ್ಲಿ 200 ತೆಂಗು, 4 ಸಾವಿರ ಅಡಕೆ, 2 ಸಾವಿರ ಕಾಫಿ, 2 ಸಾವಿರ ಮೆಣಸು ಹಾಕಿದ್ದಾರೆ. ತೆಂಗು ಮತ್ತು ಅಡಕೆಯಿಂದ ಪ್ರತಿ ವರ್ಷ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಅಂತೆಯೇ ಕಾಫಿ ಮತ್ತು ಮೆಣಸಿನಿಂದ ಐದರಿಂದ ಏಳು ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಗುತ್ತಿಗೆ ಪಡೆದ ನಲವತ್ತು ಎಕರೆ ಜಮೀನಿನಲ್ಲಿ ಬಾಳೆ, ಅರಿಶಿಣ, ಮರಗೆಣಸು, ಟೊಮ್ಯಾಟೊ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ವರ್ಷಕ್ಕೆ ನಲವತ್ತರಿಂದ ಐವತ್ತು ಲಕ್ಷ ರೂ.ಆದಾಯ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಇಪ್ಪತ್ತೈದರಿಂದ ಮೂವತ್ತು ಲಕ್ಷ ರೂ. ವ್ಯವಸಾಯಕ್ಕೆ ಖರ್ಚು ಮಾಡುತ್ತಿದ್ದು, ಒಂದು ಕೋಟಿಗೂ ಹೆಚ್ಚು ಆದಾಯ ಪಡೆಯುತ್ತೇನೆ ಎನ್ನುತ್ತಾರೆ ಮಂಜುನಾಥ್.
ಟ್ರಾೃಕ್ಟರ್, ಟಿಲ್ಲರ್ ಸೇರಿದಂತೆ ಇತರ ಯಂತ್ರೋಪಕರಣಗಳನ್ನು ಬಳಸುತ್ತಿದ್ದು, ಹೊಸ ಮಾದರಿಯ ಯಂತ್ರಗಳು ಬಂದರೆ ಅವುಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿಕೊಂಡು ವ್ಯವಸಾಯ ಮಾಡುವುದು ಇವರ ಹವ್ಯಾಸ. ತೋಟದಲ್ಲಿ ಉದುರಿದ ತೆಂಗು ಹಾಗೂ ಅಡಕೆ ಗರಿಗಳನ್ನು ಕೊಳೆಯುವಂತೆ ಮಾಡಿ ಗೊಬ್ಬರ ಮಾಡಿ ಬಳಸಲಾಗುತ್ತಿದೆ. ರೈತ ಮಂಜುನಾಥ್ ಅವರಿಗೆ ಎರಡು ಬಾರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಉತ್ತಮ ರೈತ ಪ್ರಶಸ್ತಿ ದೊರೆತಿದೆ. ಅವರಿಂದ ಕೃಷಿ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಲು ಮೊ.9164126058 ಗೆ ಸಂಪರ್ಕ ಮಾಡಬಹುದು.
ವ್ಯವಸಾಯದ ಬಗ್ಗೆ ದೂರದೃಷ್ಟಿಯೊಂದಿಗೆ ಧೈರ್ಯ ಇರಬೇಕು. ಸಮಗ್ರ ಬೇಸಾಯದಿಂದ ಲಾಭ ಕಾಣಬಹುದಾಗಿದ್ದು, ಕಷ್ಟಪಟ್ಟು ಜಮೀನಿನಲ್ಲಿ ಪ್ರಾಮಾಣಿಕವಾಗಿ ವ್ಯವಸಾಯ ಮಾಡಿದರೆ ನಷ್ಟ ಉಂಟಾಗುವುದಿಲ್ಲ. ಬಹುತೇಕ ರೈತರು ವ್ಯವಸಾಯವನ್ನು ಪಾರ್ಟ್ ಟೈಮ್ ಆಗಿ ಮಾಡುವುದರಿಂದ ಕೃಷಿಯಲ್ಲಿ ಯಶ ಕಾಣಲು ಸಾಧ್ಯ ಆಗುತ್ತಿಲ್ಲ. ಸರ್ಕಾರ ಮತ್ತು ಇಲಾಖೆಯಿಂದ ಆಯೋಜಿಸುವ ಕಾರ್ಯಾಗಾರಗಳ ಸದುಪಯೋಗ ಪಡೆಯುವಂತಾಗಬೇಕು.
ಮಂಜುನಾಥ್ ರೈತ, ಹಾರೋಪುರ
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಹಾರೋಪುರ ಗ್ರಾಮದ ರೈತ ಮಂಜುನಾಥ್ ಅವರು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಅದೇ ರೀತಿ ತಾಲೂಕಿನಲ್ಲಿರುವ ರೈತರು ನಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸಮಗ್ರ ಬೇಸಾಯ ಮಾಡುವ ಮೂಲಕ ಹೆಚ್ಚು ಲಾಭದಾಯಕ ಬೆಳೆಗಳನ್ನು ಬೆಳೆದು ಉತ್ತಮ ಜೀವನ ರೂಪಿಸಿಕೊಳ್ಳಲಿ.
ಜಯರಾಮಯ್ಯ ತಾಲೂಕು ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಎಚ್.ಡಿ.ಕೋಟೆ
ರೈತರಿಗೆ ಮೊದಲು ಯಾವ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ಅರಿವಿರಬೇಕು. ಬೆಳೆ ಬೆಳೆಯಲು ಹಾಕಿರುವ ಬಂಡವಾಳ ಮೊದಲು ತೆಗೆದುಕೊಳ್ಳಬೇಕು ಎಂಬುದನ್ನೂ ತಿಳಿಯಬೇಕು. ಮಿಶ್ರ ಬೇಸಾಯ ಮಾಡುವುದರಿಂದ ಹೆಚ್ಚು ಲಾಭವಿದ್ದು, ಅದನ್ನು ನಮ್ಮ ರೈತರು ಅಳವಡಿಸಿಕೊಳ್ಳಬೇಕು. ಉದ್ಯೋಗಕ್ಕಾಗಿ ನಾನು ಶಿಕ್ಷಣ ಪಡೆಯುತ್ತಿಲ್ಲ. ಬದಲಿಗೆ ಪದವಿಗಾಗಿ ಶಿಕ್ಷಣ ಪಡೆಯುತ್ತಿದ್ದೇನೆ.
ಸಂತೋಷ ಕುಮಾರ್ ರೈತ ಮಂಜುನಾಥ್ ಪುತ್ರ