ಕುಮಟಾ: ಲಾಕ್ಡೌನ್ ಉಲ್ಲಂಘಿಸಿ ಭಾನುವಾರ ವಹಿವಾಟು ನಡೆಸುತ್ತಿದ್ದ ಆರೋಪದ ಮೇಲೆ ಮಹಾಸತಿ ವೃತ್ತದ ಬಳಿಯ ಚಿನ್ನಾಭರಣ ಅಂಗಡಿಯನ್ನು ಪೊಲೀಸರು ಬಂದ್ ಮಾಡಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಕುಮಟಾ ದೈವಜ್ಞ ಸಮಾಜದ ಸರಾಫ್ ಸಂಘದವರು ಹಾಗೂ ಸುವರ್ಣಕಾರ ಕುಶಲಕರ್ವಿುಗಳು ತಮ್ಮ ವೃತ್ತಿಯನ್ನು ಸ್ಥಗಿತಗೊಳಿಸಿದ್ದರು. ಆದರೆ, ಪಟ್ಟಣದ ಮಾಸ್ತಿಕಟ್ಟೆ ವೃತ್ತ ಬಳಿಯ ಬೃಹತ್ ಚಿನ್ನಾಭರಣ ಮಳಿಗೆ ’ಆಭರಣ’ ದಲ್ಲಿ ಭಾನುವಾರ ಬಾಗಿಲು ತೆರೆದಿದ್ದು, ಕದ್ದುಮುಚ್ಚಿ ಚಿನ್ನಾಭರಣ ಮಾರಾಟ ನಡೆಸಿದ್ದರು. ಖರೀದಿಸಿದ ಆಭರಣಕ್ಕೆ ಅಂಗಡಿಯವರು ಜಿಎಸ್ಟಿ ಇಲ್ಲದ ರಸೀದಿ ನೀಡಿದ್ದರು.
ಈ ಬಗ್ಗೆ ದೈವಜ್ಞ ಸಮಾಜ ಸರಾಫ್ ಸಂಘದವರು ಹಾಗೂ ಸುವರ್ಣಕಾರ ಕುಶಲಕರ್ವಿುಗಳು ಸಾಕ್ಷಿ ಸಮೇತ ಪೊಲೀಸರಿಗೆ ದೂರಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪಿಎಸ್ಐ ಆನಂದಮೂರ್ತಿ ಅವರು ಪರಿಸ್ಥಿತಿ ಪರಿಶೀಲಿಸಿ ಲಾಕ್ಡೌನ್ ಉಲ್ಲಂಘಿಸಿದ ಆಭರಣ ಅಂಗಡಿ ಬಂದ್ ಮಾಡಿಸಿದರಲ್ಲದೆ, ಘಟನೆಯ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.