ಲಕ್ಷ್ಮೇಶ್ವರ ತಾಲೂಕಿಗೆ ಬಿಡದ ಗ್ರಹಣ!

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೊಷಣೆಯಾಗಿ ವರ್ಷ ಕಳೆಯುತ್ತ ಬಂದರೂ ನಾಮಕಾವಾಸ್ತೆ ಎನ್ನುವಂತೆ ತಹಸೀಲ್ದಾರ್ ಕಚೇರಿ ಹೊರತುಪಡಿಸಿ ಯಾವುದೇ ಪ್ರಮುಖ ಇಲಾಖೆಗಳು ಕಾರ್ಯಾರಂಭಗೊಂಡಿಲ್ಲ.

ಅನೇಕ ಮಹನೀಯರ ಹೋರಾಟದ ಫಲವಾಗಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಲಕ್ಷ್ಮೇಶ್ವರದಲ್ಲಿ ವಿಶೇಷ ತಹಸೀಲ್ದಾರ್ ಕಚೇರಿ ಮತ್ತು ಬಿಜೆಪಿ/ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ ಆರಂಭಗೊಂಡಿತು. 2013ರಲ್ಲಿ ಸಿಎಂ ಜಗದೀಶ ಶೆಟ್ಟರ್ ಲಕ್ಷ್ಮೇಶ್ವರ ಸೇರಿ 43 ತಾಲೂಕುಗಳನ್ನು ಘೊಷಿಸಿ ಇಲ್ಲಿನ ಜನರ 6 ದಶಕಗಳ ಹೋರಾಟಕ್ಕೆ ತುಪ್ಪ ಸವರಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಲಕ್ಷ್ಮೇಶ್ವರ ಸೇರಿ 50 ಹೊಸ ತಾಲೂಕುಗಳ ಘೊಷಣೆ ಮಾಡಿ ಕಳೆದ ಡಿ.25 ರಂದು ಸ್ವತಃ ಪಟ್ಟಣಕ್ಕೆ ಆಗಮಿಸಿ ತಾಲೂಕು ಕೇಂದ್ರದ ಉದ್ಘಾಟನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 2018ರ ಜ. 25ರಂದೇ ತಹಸೀಲ್ದಾರ್ ಕಚೇರಿ ಉದ್ಘಾಟನೆಗೊಂಡು ಜ.26ರಂದು ತಾಲೂಕು ಕೇಂದ್ರದ ಪ್ರಥಮ ಗಣರಾಜ್ಯೋತ್ಸವವನ್ನು ತಾಲೂಕಿನ ಜನರ ಜೊತೆ ಆಚರಿಸಿ ಸಂಭ್ರಮಿಸಿತ್ತು. ಇಷ್ಟೆಲ್ಲಾ ಆದರೂ ಹೊಸ ತಾಲೂಕಿಗೆ ಹಿಡಿದ ಗ್ರಹಣ ಬಿಟ್ಟಿಲ್ಲ.

ಹೊಸ ತಾಲೂಕಿಗೆ ಸಂಬಂಧಿಸಿದಂತೆ ಇದುವರೆಗೂ ಆಯಾ ಇಲಾಖೆಯ ಕಾರ್ಯದರ್ಶಿ ಅಥವಾ ಅಧೀನ ಕಾರ್ಯದರ್ಶಿಗಳಾಗಲಿ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಕಂದಾಯ ಇಲಾಖೆಯ ಮೂಲ ದಾಖಲೆಗಳು, ಪ್ರಮುಖ 14 ಇಲಾಖೆಗಳ ಕಾರ್ಯಗಳಿಗೆ ಶಿರಹಟ್ಟಿಗೆ ಹೋಗಬೇಕಾಗಿದೆ. ಕಂದಾಯ ಮತ್ತು ಭೂಮಿ ತಂತ್ರಾಂಶದಲ್ಲಿ ನೂತನ ತಾಲೂಕಿನ ಬಗೆಗೆ ಉಲ್ಲೇಖವೇ ಇಲ್ಲ.

ಹೊಸ ತಾಲೂಕು ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ಮಾಡುವ ಬಗೆಗೆ ಆಡಳಿತಕ್ಕೆ ಬಂದು 6 ತಿಂಗಳಾದರೂ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ಇದುವರೆಗೂ ಯಾವುದೇ ಸ್ಪಷ್ಟ ಸಂದೇಶ ನೀಡಿಲ್ಲ. ಇದೀಗ ರಾಜಕೀಯ ಉದ್ದೇಶಕ್ಕಾಗಿ ಹೊಸ ತಾಲೂಕು ಘೊಷಣೆ ಮಾಡಿ ಕೈ ತೊಳೆದುಕೊಂಡಿರುವ ವಿರೋಧಪಕ್ಷ ಮತ್ತು ಮಿತ್ರ ಪಕ್ಷದವರು ಹಾಗೂ ಆಯಾ ಕ್ಷೇತ್ರದ ಶಾಸಕರು ಸರ್ಕಾರದ ಗಮನ ಸೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಕೇಂದ್ರದ ಉದ್ಘಾಟನೆಯ ವರ್ಷಾಚರಣೆ ದಿನವಾದ ಜ.26ರಂದು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳುವಂತೆ ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಉತ್ತರ ಕರ್ನಾಟಕ 33 ತಾಲೂಕುಗಳನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ಘೊಷಿಸಲಾಗಿತ್ತು. ಸರ್ಕಾರದ ಬದಲಾವಣೆಯಾದ ಬಳಿಕ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ತಾಲೂಕು ಕೇಂದ್ರಕ್ಕೆ ಅನುದಾನ, ಅಧಿಕಾರಿಗಳ ನೇಮಕ, ಅನುದಾನ ಬಿಡುಗಡೆಗಾಗಿ ಒತ್ತಾಯಿಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ರಾಜಕೀಯ ಉದ್ದೇಶದಿಂದ ನಾವು ಘೊಷಿಸಿದ ತಾಲೂಕುಗಳ ಪಟ್ಟಿಗೆ ಮತ್ತಷ್ಟು ಹೆಸರು ಸೇರಿಸಿ ಕೈ ತೊಳೆದುಕೊಂಡಿತು. ಇದೀಗ ಹೊಸ ತಾಲೂಕು ಕೇಂದ್ರಗಳು ನಾಮಕಾವಸ್ತೆಯಾಗಿದ್ದು, ರಾಜ್ಯದ ಎಲ್ಲ 50 ಹೊಸ ತಾಲೂಕಿನ ಜನತೆ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವ ಮೊದಲೇ ಜ.26ರೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ತಾವು ಬೆಳಗಾವಿ ಅಧಿವೇಶನದಲ್ಲಿ ಮತ್ತೇ ಸರ್ಕಾರದ ಗಮನ ಸೆಳೆಯುತ್ತೇನೆ.

| ಜಗದೀಶ ಶೆಟ್ಟರ್ ಮಾಜಿ ಸಿಎಂ