ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ದೊಡ್ಡಬಳ್ಳಾಪುರ: ತಾಲೂಕಿನ ಉಜ್ಜನಿ ಹೊಸಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಅದ್ದೂರಿಯಾಗಿ ನೆರವೇರಿತು.

ಬ್ರಹ್ಮರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗಿನಿಂದಲೂ ಅಭಿಷೇಕ, ಅರ್ಚನೆ ನೆರವೇರಿಸಲಾಯಿತು. ಲಕ್ಷ್ಮೀನರಸಿಂಹಸ್ವಾಮಿಯನ್ನು ದೇವಾಲಯದಿಂದ ತಂದು ಪಂಚ ಕಳಸದೊಂದಿಗೆ ರಥದಲ್ಲಿ ಪ್ರತಿಷ್ಠಾಪಿ, ಪೂಜಾ ವಿಧಿ-ವಿಧಾನ ನೆರವೇರಿಸಲಾಯಿತು. ಮಧ್ಯಾಹ್ನ 3 ಗಂಟೆಗೆ ವೇದಬ್ರಹ್ಮ ಶ್ರೀ ನರಸಿಂಹ ಶರ್ಮ ನೇತೃತ್ವದಲ್ಲಿ ಮಂತ್ರ ಘೊಷಗಳೊಂದಿಗೆ ಗ್ರಾಮದ ಮುಖ್ಯ ಬೀದಿಯಿಂದ ಗೊಡ್ಡರಾಯಿಕಲ್ಲಿನವರೆಗೆ ರಥೋತ್ಸವ ಜರುಗಿತು. ಭಕ್ತರು ಬಾಳೆಹಣ್ಣು, ದವನ ಬೀರಿದರು.

ರಥ ಹಾಗೂ ಗರ್ಭಗುಡಿಯಲ್ಲಿನ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಪಾನಕ, ಮಜ್ಜಿಗೆ, ಹೆಸರುಬೇಳೆ ಹಾಗೂ ಪ್ರಸಾದ ವಿತರಿಸಲು ರಸ್ತೆ ಬದಿ ಶಾಮಿಯಾನ, ಟೆಂಟ್ ಮತ್ತು ಅರವಂಟಿಕೆ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಡೊಳ್ಳು ಕುಣಿತ, ಪಲ್ಲಕ್ಕಿ ಉತ್ಸವ ನಡೆಯಿತು.

ಮಳೆ ಅಡ್ಡಿ: ಪೂರ್ವ ನಿಯೋಜನೆಯಂತೆ ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ನಡೆಯಬೇಕಿದ್ದ ಬ್ರಹ್ಮ ರಥೋತ್ಸವಕ್ಕೆ ಮಳೆ ಅಡ್ಡಿಪಡಿಸಿತು. ಸುಮಾರು 30 ನಿಮಿಷ ಮಳೆ ಸುರಿಯಿತು. ಆದ್ದರಿಂದ ರಥೋತ್ಸವ ಮಧ್ಯಾಹ್ನ 3 ಗಂಟೆಗೆ ಜರುಗಿತು.

Leave a Reply

Your email address will not be published. Required fields are marked *