ಲಕ್ಷಾಂತರ ರೂ. ಗೋಲ್‍ಮಾಲ್

ಮುಳಗುಂದ: ರಸ್ತೆ ಕಾಮಗಾರಿಯ ಮೊದಲಿನ ಖಡಿಯನ್ನೇ ತೆಗೆದು ಒಂದೆಡೆ ಗುಡ್ಡೆ ಹಾಕಿ ಮತ್ತೇ ಅದನ್ನೇ ಬಳಸಿ ನೂತನ ರಸ್ತೆ ಕಾಮಗಾರಿ ಕೈಗೊಂಡ ಘಟನೆ ಪಟ್ಟಣದ ಮುಳಗುಂದ-ನೀಲಗುಂದ ರಸ್ತೆಯಲ್ಲಿ ನಡೆದಿದೆ.

ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಲಂಚಗುಳಿತನಕ್ಕೆ ಬಲಿಯಾಗಿ ಸರ್ಕಾರದ ಯೋಜನೆಗಳು ಹಾಗೂ ದುಡ್ಡು ಹಳ್ಳ ಹಿಡಿಯುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದಿಂದ ಗ್ರಾಮಕ್ಕೆ ಸಂಪರ್ಕ: ಮುಳಗುಂದ ಪಟ್ಟಣದಿಂದ ಪಕ್ಕದ ನೀಲಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಗ್ರಾಮೀಣಾಭಿವೃದ್ಧಿ, ಪಂಚಾಯತ್​ರಾಜ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ವತಿಯಿಂದ ಯೋಜನಾ ಅನುಷ್ಠಾನ ಘಟಕದ 4ನೇ ಹಂತದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಉದ್ದ 3.72 ಕಿಮೀ ಇದ್ದು, ಕಾಮಗಾರಿಯ ಅಂದಾಜು ಮೊತ್ತ 3.25 ಕೋಟಿ ರೂ.ಗಳು. ಕಾಮಗಾರಿ ಪ್ರಾರಂಭ ದಿನಾಂಕ 28.7.2017, ಪೂರ್ಣಗೊಳಿಸುವ ದಿನಾಂಕ 27.6. 2018 ಇದ್ದು ಅವಧಿ ಮುಗಿದು ಆರು ತಿಂಗಳು ಗತಿಸಿದರೂ ಕಾಮಗಾರಿ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಶೇ. 50 ರಷ್ಟು ಕಾಮಗಾರಿ ಆಗಿಲ್ಲ.

ಹಳೇ ರಸ್ತೆಯ ಖಡಿಯನ್ನೇ ಇದೀಗ ರಸ್ತೆ ನಿರ್ವಣಕ್ಕೆ ಬಳಸಲಾಗುತ್ತಿದೆ. ಕಾಮಗಾರಿಯಲ್ಲಿ ಎರಡು ಸೇತುವೆಗಳಿದ್ದು, ಅದಕ್ಕೆ ಕಡಿಮೆ ಗುಣಮಟ್ಟದ ಹಳ್ಳದ ಎರಿ ಮಿಶ್ರಿತ ಉಸುಕು ಬಳಸಲಾಗುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ತಾವು ಮಾಡಿದ್ದೇ ಸರಿ ಎನ್ನುತ್ತಿದ್ದು, ಗುತ್ತಿಗೆದಾರನೊಂದಿಗೆ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಷ್ಟೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಗುಣಮಟ್ಟ ಮತ್ತು ಅವುಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಗ್ರಾಮೀಣ ಜನರ ಸುಗಮ ಸಂಚಾರಕ್ಕೆ ತೊಂದರೆ ತಾಪತ್ರಯ ತಪ್ಪದಂತಾಗಿದೆ. ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೊದಲಿನ ರಸ್ತೆಗೆ ಬಳಸಿದ್ದ ಹಳೆಯ ಖಡಿಯನ್ನೇ ಹೊಸ ರಸ್ತೆಗೂ ಬಳಸಿದ್ದಾರೆ. ಸ್ಥಳೀಯ ಹಳ್ಳದ ಮರಳನ್ನೂ ಬಳಸಲಾಗಿದೆ. ಈ ರಸ್ತೆಗೆ ಗುಣಮಟ್ಟದ ಮೋರಂ ಬಳಸಿಲ್ಲ. ಮುಳಗುಂದ- ನೀಲಗುಂದ ರಸ್ತೆ ಸಂಪೂರ್ಣ ಕಳಪೆಯಾಗಿದೆ. ಈ ಕುರಿತು ಲಿಖಿತ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಮಾತ್ರ ಗುತ್ತಿಗೆದಾರನ ಪರವಾಗಿದ್ದಾರೆ. ಈ ಬಗೆಗೆ ಪಂಚಾಯತ್​ರಾಜ್ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಮೇಲೆ ಕ್ರಮ ಜರುಗಿಸಬೇಕು.

| ರವಿ ವಗ್ಗನವರ ಸಾಮಾಜಿಕ ಕಾರ್ಯಕರ್ತ, ನೀಲಗುಂದ

ಈ ಬಗ್ಗೆ ನನಗೂ ಮಾಹಿತಿ ಇದೆ. ಈ ರಸ್ತೆ ಕಾಮಗಾರಿ ಬಿಲ್ ಮಾಡವಾಗ ಇವರು ಬಳಸಿದ ಹಳೆಯ ಖಡಿಯ ಹಣವನ್ನು ಕಡಿತಗೊಳಿಸಿ ಬಿಲ್ ಪಾವತಿಸುವಂತೆ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ.

| ಆರ್.ಜಿ. ಪಾಟೀಲ ಸಹಾಯಕ ಇಂಜಿನಿಯರ್, ಗದಗ ಜಿಲ್ಲಾ ಯೋಜನಾ ಅನುಷ್ಠಾನ ವಿಭಾಗ