ಕೊಟ್ಟೂರು: ನೀರಿಲ್ಲದಿದ್ದರೆ ಯಾವ ಜೀವಿಯೂ ಜೀವಿಸಲಾಗದು. ಆದ್ದರಿಂದ ರಾಜರು, ಪಾಳೇಗಾರರು ಕೆರೆಗಳನ್ನು ಕಟ್ಟಿಸಿದ್ದರು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ ಹೇಳಿದರು.
ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ 10 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಿದ ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾಮಜ್ಜಿ ಕಟ್ಟೆ (ಕೆರೆ) ಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಭಾನುವಾರ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ತಮ್ಮ ಸಂಸ್ಥೆಯ ಹಣ ವಿನಿಯೋಗಿಸಿ ನಮ್ಮ ಊರು, ನಮ್ಮ ಕೆರೆ ಯೋಜನೆಯಡಿ ರಾಜ್ಯದ 889 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೂಲಕ ಸಾಲ ನೀಡಿ ಲಕ್ಷಾಂತರ ಜನರ ಸ್ವಾವಲಂಬಿ ಬದುಕಿಗೆ ಕಾರಣರಾಗಿದ್ದಾರೆ ಎಂದರು.
ಕೊಟ್ಟೂರು ತಾಲೂಕಿನಲ್ಲಿ ಈಗಾಗಲೇ ನಾಲ್ಕು ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು, ದ್ಯಾಮಜ್ಜಿ ಕಟ್ಟೆ ಐದನೇ ಕೆರೆಯಾಗಿದೆ. ರಾಜ್ಯಾದ್ಯಂತ 2024-25ನೇ ಸಾಲಿನಲ್ಲಿ ನಮ್ಮ ಊರು ನಮ್ಮ ಕೆರೆ ಯೋಜನೆಯಡಿ 160 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಸಂಘದಿಂದ ಅನೇಕ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದನ್ನು ಸಹಿಸದವರು ಇಲ್ಲ ಸಲ್ಲದ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ಕೆರೆ ಪುನಶ್ಚೇತನದ ನಾಮ ಫಲಕ ಅನಾವರಣ ಮಾಡಿ ಮಾತನಾಡಿದರು. ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುವವರ ಬಗ್ಗೆ ನಿಂದನೆಗಳು ಯಾವಾಗಲೂ ಇರತ್ತವೆ. ಕ್ರಾಂತಿಯೋಗಿ ಬಸವಣ್ಣಅವರನ್ನೇ ನಿಂದಿಸಲಾಗಿದ್ದು, ವೀರೇಂದ್ರ ಹೆಗ್ಗಡೆ ಅವರು ಇದಕ್ಕೆ ಹೊರತಲ್ಲ. ಇಂಥದಕ್ಕೆಲ್ಲ ಹೆದರದೆ ಸೇವಾ ಕಾರ್ಯ ಮುಂದುವರಿಸಬೇಕು. ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘಕ್ಕೆ ಯಾವಾಗಲೂ ನನ್ನ ಬೆಂಬಲವಿದೆ ಎಂದರು.
ಕೆರೆ ಪುನಶ್ಚೇತನ ಸಂಘದ ಅಧ್ಯಕ್ಷ ಕಲ್ಲೇಶ, ಗೌರವಾಧ್ಯಕ್ಷ ಮರೇಗೌಡ, ಗ್ರಾಪಂ ಸದಸ್ಯ ಮಂಜುನಾಥ್, ಪತ್ರಕರ್ತ ಉಜ್ಜಿನಿ ರುದ್ರಪ್ಪ, ರೈತ ಸಂಘದ ಕೊಟ್ರಪ್ಪ, ಮರುಳಸಿದ್ದಪ್ಪ, ಕಾಳಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೊಟ್ರಮ್ಮ, ಇಂಜಿನಿಯರ್ ಸತೀಶ, ಸಂಘದ ಯೋಜನಾಧಿಕಾರಿ ನವೀನ್ ಕುಮಾರ್ ಇತರರಿದ್ದರು.