ಲಕ್ಕೊಳ್ಳಿಯ ಚಿರತೆ ‘ಸಿಮಿ’

ಮುಂಡಗೋಡ: ಅದೊಂದು ಪುಟ್ಟ ಗ್ರಾಮ. ಆದರೆ, ಇಲ್ಲಿ ಹುಟ್ಟಿ ಬೆಳೆದ ಬಾಲೆ ತನ್ನ ಪರಿಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದ್ದಾಳೆ. ಹೌದು, ಇದು ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ವಿದ್ಯಾರ್ಥಿನಿ ಎನ್.ಎಸ್. ಸಿಮಿಯ ಯಶೋಗಾಥೆ.

ನಾಲ್ಕು ಬಾರಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿರುವ ಸಿಮಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಮಾರ್ಚ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಅಥ್ಲೆಟಿಕ್ಸ್​ನಲ್ಲಿ ಭಾಗವಹಿಸುತ್ತಿದ್ದಾಳೆ.

ಶೂ ಇಲ್ಲದೆ ಓಟ: ಇಲ್ಲಿನ ಲೊಯೋಲ ಶಾಲೆಯಲ್ಲಿ ಆರನೇ ತರಗತಿಯಲ್ಲಿದ್ದಾಗ ಜಿಲ್ಲಾ ಮಟ್ಟದಲ್ಲಿ 100ಮೀ, 200ಮೀ, 400ಮೀ. ಮತ್ತು ರಿಲೇ ಓಟಗಳ ಸ್ಪರ್ಧೆಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 7ನೇ ತರಗತಿಯಲ್ಲಿದ್ದಾಗ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಿಮಿ ಬಳಿ ಶೂ ಇರಲಿಲ್ಲ. ಬರಿಗಾಲಲ್ಲೇ ಓಡಿದ್ದರು. ನಂತರ ಮೂಡಬಿದ್ರೆ ಆಳ್ವಾಸ್ ಸ್ಪೋರ್ಟ್ಸ್ ಸ್ಕೂಲ್ ಸೇರಿದಾಗ 8ನೇ ತರಗತಿಯಲ್ಲಿ ಶೂ ನೀಡಲಾಯಿತು. 8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಮೂಡಬಿದ್ರೆಯ ಆಳ್ವಾಸ್ ಕಾಲೇಜ್​ನಲ್ಲಿ ಓದುತ್ತಿರುವಾಗ ಅಥ್ಲೆಟಿಕ್ಸ್​ನಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆದರು.

ಈ ವೇಳೆ ರಾಷ್ಟ್ರ ಮಟ್ಟದಲ್ಲಿ ಪಂಜಾಬ್, ಲಖನೌ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹೈದರಾಬಾದ್, ಚೆನೈ, ಕೇರಳ, ಪುಣೆ ಹೀಗೆ 20ರಾಜ್ಯಗಳಲ್ಲಿ ಚಾಂಪಿಯನ್ ಆಗಿ ರಾಜ್ಯದ ಉತ್ತಮ ಕ್ರೀಡಾಪಟು ಎನಿಸಿಕೊಂಡರು. ಆ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡಲಿಲ್ಲ. ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಸ್ಪೋಟರ್Õಮನ್ ಖೋಟಾದಲ್ಲಿ ಕೇರಳದ ಮಹಾತ್ಮಾ ಗಾಂಧಿ ಯೂನಿವರ್​ಸಿಟಿಯಲ್ಲಿ ಪದವಿ ವ್ಯಾಸಂಗದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.

ದೊರೆತ ಬಹುಮಾನ: ಸಿಮಿಗೆ ಅಥ್ಲೆಟಿಕ್ಸ್​ನಲ್ಲಿ 60 ಬಂಗಾರ, 23 ಬೆಳ್ಳಿ ಹಾಗೂ 14ಕಂಚಿನ ಪದಕಗಳು ದೊರೆತಿವೆ.

ಮೂವರು ಹೆಣ್ಣು ಮಕ್ಕಳಿದ್ದಾರೆ. ಬಡತನದ ಪರಿಸ್ಥಿತಿಯಲ್ಲೂ ಕಷ್ಟಪಟ್ಟು ಚಿಕ್ಕ ಹಿಡುವಳಿದಾರನಾಗಿ ಕೃಷಿ, ಕೂಲಿ ಮಾಡಿ ಸಿಮಿಯ ಆಸೆಗೆ ನೀರೆರೆಯುತ್ತಾ ಬಂದೆ. ಶಾಸಕರು ಸಹಾಯ ಮಾಡಿದ್ದಾರೆ. ಅವಳು ಗುರಿ ತಲುಪುವರೆಗೂ ಪ್ರೋತ್ಸಾಹ ನೀಡುತ್ತೇನೆ.

| ಎನ್.ವಿ.ಸ್ಯಾಮುವೆಲ್, ಸಿಮಿ ತಂದೆ

ನನಗೆ ಬಾಲ್ಯದಿಂದಲೂ ಅಥ್ಲೆಟಿಕ್ಸ್​ನಲ್ಲಿ ತುಂಬಾ ಆಸಕ್ತಿ. ನನ್ನ ಆಸಕ್ತಿಗೆ ನನ್ನ ತಂದೆ ಧೈರ್ಯ ತುಂಬಿದರು. 2020ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸುವ ಆಸೆ ಹೊಂದಿದ್ದು, ಯಶ ಕಾಣುವ ಎಲ್ಲ ಪ್ರಯತ್ನ ಮಾಡುತ್ತೇನೆ.

| ಎನ್.ಎಸ್. ಸಿಮಿ