ಲಂಬೋದರನ ಪೋಲಿ ವಿನೋದಾವಳಿ

| ಮಂಜು ಕೊಟಗುಣಸಿ

ಬೆಂಗಳೂರು: ‘ಲಂಬೋದರ’ – ಈತ ಒಬ್ಬ ಮಹಾನ್ ರಸಿಕ. ಕಣ್ಣಿಗೆ ಕಂಡ ಹುಡುಗಿಯರ ಮೇಲೆ ಕಣ್ಣು ಹಾಕುವುದೇ ಆತನ ಜೀವನದ ಪರಮ ಗುರಿ. ತಾಯಿಗೆ ಮುದ್ದಿನ ಮಗ. ಆದರೆ, ಮನೆಯವರ ಪಾಲಿಗೆ ಕೇಡಿ ನಂ.1. ಹುಡುಗಿಯರ ಪಾಲಿಗೆ ಅಪ್ಪಟ ಬಂಗಾರ! ಇಂಥ ಎಡಬಿಡಂಗಿ ಪೋಲಿ ಕಣ್ಣಿಗೆ ಬೀಳುವವಳೇ ನಿತ್ಯಾ (ಆಕಾಂಕ್ಷಾ). ಎನ್​ಜಿಒ ಮೂಲಕ ಸಮಾಜಸೇವೆ ಮಾಡುವುದು ಆಕೆಯ ಕಾಯಕ. ಇಂಥ ಮಹಾನ್ ಸುಳ್ಳುಗಾರ ನಾಯಕಿಯನ್ನು ಹೇಗೆ ಒಲಿಸಿಕೊಳ್ಳುತ್ತಾನೆ? ಬೇಜವಾಬ್ದಾರಿಯನ್ನೇ ಮೈಗೂಡಿಸಿಕೊಂಡ ಆತ ಜವಾಬ್ದಾರಿಯುತ ಮನುಷ್ಯ ಆಗುತ್ತಾನಾ ಎಂಬುದೇ ‘ಲಂಬೋದರ’ ಚಿತ್ರದ ಎಳೆ.

ಯುವಜನತೆಯನ್ನೇ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಕೃಷ್ಣರಾಜ್ ‘ಲಂಬೋದರ’ನನ್ನು ಸೃಷ್ಟಿ ಮಾಡಿದಂತಿದೆ. ಹಾಗಾಗಿ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಮತ್ತು ಮನತಟ್ಟುವ ಭಾವನೆಗಳ ಸರಕನ್ನು ‘ಲಂಬೋದರ’ನ ಒಡಲಲ್ಲಿ ಹುದುಗಿಸಿಟ್ಟಿದ್ದಾರೆ ನಿರ್ದೇಶಕರು. ಚಿತ್ರದ ಮೊದಲಾರ್ಧ ಹುಡುಗಿಯರನ್ನು ಪಟಾಯಿಸುವುದರಲ್ಲೇ ಲಂಬೋದರ ಕಾಲಕಳೆಯುತ್ತಾನೆ. ಆ ಅವಧಿಯಲ್ಲಿ ಆತನ ಹಲವು ಲೀಲಾವಳಿಗಳನ್ನೇ ತೋರಿಸುವ ನಿರ್ದೇಶಕರು ಎರಡನೇ ಭಾಗದ ಅಂಚಿನಲ್ಲಿ ಭಾವನೆಗಳ ಜತೆಗೆ ಆಟವಾಡುತ್ತಾರೆ. ಕಚಗುಳಿ ಇಡುತ್ತಲೇ ವಿನೋದವಾಗಿಯೇ ‘ಲಂಬೋದರ’ ನೋಡಿಸಿಕೊಂಡು ಹೋಗುತ್ತಾನೆ.

ಪ್ರೇಕ್ಷಕರನ್ನು ನಗಿಸುವ ಉದ್ದೇಶದಿಂದಲೇ ದ್ವಂದ್ವಾರ್ಥದ ಪೋಲಿ ಸಂಭಾಷಣೆಗಳನ್ನು ತುರುಕಿರುವುದು ಬೇಸರ ಮೂಡಿಸುತ್ತದೆ. ಮಧ್ಯಂತರದ ನಂತರ ಕಥಾನಾಯಕನ ಹದಿಹರೆಯದ ಫ್ಲ್ಯಾಶ್​ಬ್ಯಾಕ್​ಗೆ ಜಾರುವ ಕಥೆ, ಪೋಲಿ ಲಂಬೋದರನ ತರಲೆಗಳನ್ನು ಬಿಚ್ಚಿಡುತ್ತದೆ. ಕೆಲ ದೃಶ್ಯಗಳಂತೂ ಪ್ರೇಕ್ಷಕನನ್ನು ಮುಜುಗರಕ್ಕೀಡು ಮಾಡುತ್ತವೆ. ಇನ್ನೇನು ಕ್ಲೈಮ್ಯಾಕ್ಸ್​ಗೆ ಹತ್ತಿರ ಬರುತ್ತಿದೆ ಎಂದಾಗ ಕಾಮಿಡಿಯ ವರಸೆ ತಗ್ಗಿಸಿ ಭಾವನೆಗಳ ಹಳಿ ಮೇಲೆ ಸಿನಿಮಾ ಓಡಿಸಿದ್ದಾರೆ ನಿರ್ದೇಶಕ ಕೃಷ್ಣರಾಜ್.

ಸಿನಿಮಾ ಶೀರ್ಷಿಕೆ ಕೆಳಗೆ ‘ಬಸವನಗುಡಿ ಬೆಂಗಳೂರು’ ಎಂಬ ಅಡಿಬರಹವಿದೆ. ಆ ಅಡಿಬರಹಕ್ಕೆ ತಕ್ಕಂತೆ ಬಸವನಗುಡಿಯನ್ನು ಕ್ಯಾಮರಾ ಕಣ್ಣಿನಲ್ಲಿ ಸೊಗಸಾಗಿ ತೋರಿಸುವ ಕೆಲಸ ಆಗಿಲ್ಲ ಎಂಬುದು ವಿಪರ್ಯಾಸ. ನಟನೆ ವಿಷಯಕ್ಕೆ ಬಂದರೆ ಯೋಗಿಯ ಕಾಮಿಡಿ ಮ್ಯಾನರಿಸಂ ಅನ್ನು ನಿರ್ದೇಶಕರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ನಾಯಕನ ಎಂಟ್ರಿ ಹಾಡನ್ನು ಹೊರತುಪಡಿಸಿದರೆ, ಇನ್ನುಳಿದ ಗೀತೆಗಳು ನೆನಪಿನಲ್ಲಿ ಉಳಿಯುವುದಿಲ್ಲ. ಎರಡೇ ಭೇಟಿಗೆ ಪ್ರೀತಿ ಚಿಗುರುವ ನಾಯಕ-ನಾಯಕಿ ನಡುವಿನ ಲವ್​ನಲ್ಲಿ ಹೊಸತನವಿಲ್ಲ. ನಾಯಕನನ್ನು ಸದಾ ಒಂದಲ್ಲ ಒಂದು ಪೇಚಿಗೆ ಸಿಲುಕಿಸುವ ಕೆಲಸವನ್ನು ಸ್ನೇಹಿತರಾಗಿ ಧರ್ಮಣ್ಣ ಮತ್ತು ಸಿದ್ದು ಮೂಲಿಮನಿ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್ ಮತ್ತು ಅರುಣಾ ಬಾಲರಾಜ್ ಅವರದ್ದು ಅಚ್ಚುಕಟ್ಟು ನಟನೆ.