ಲಂಡನ್​ನಲ್ಲಿ ರಮೇಶ್

‘ವೀಕೆಂಡ್ ವಿತ್ ರಮೇಶ್’, ‘ಪ್ರೀತಿಯಿಂದ ರಮೇಶ್’ ಮುಂತಾದ ಕಾರ್ಯಕ್ರಮಗಳ ಮೂಲಕ ಜನರ ಮನ ಸೆಳೆದಿದ್ದ ರಮೇಶ್ ಅರವಿಂದ್ ಮುಂದೇನು ಮಾಡಬಹುದು ಎಂಬ ಕುತೂಹಲ ಅನೇಕರದ್ದು. ಅದಕ್ಕೆ ಉತ್ತರ ಎಂಬಂತೆ ಈಗ ರಮೇಶ್ ಮತ್ತೊಂದು ಕಾರ್ಯಕ್ರಮ ಕೈಗೆತ್ತಿಕೊಂಡಿದ್ದಾರೆ, ಅದೂ ದೂರದ ಲಂಡನ್ನಲ್ಲಿ. ಹೌದು.. ‘ರಮೇಶ್ ಅರವಿಂದ್ ಲೈಫ್ಸೈಕಲ್’ ಎಂಬ ವಿನೂತನ ಕಾರ್ಯಕ್ರಮವೊಂದನ್ನು ಅವರು ರೂಪಿಸಿದ್ದು, ನ. 27ರಂದು ಲಂಡನ್ನ ವಿಂಬ್ಲೆನಲ್ಲಿರುವ ಲಂಡನ್ ಓಕಿಂಗ್ಟನ್ ಮ್ಯಾನರ್ ಹಾಲ್ನಲ್ಲಿ ಅದು ನಡೆಯಲಿದೆ. ‘ಕನ್ನಡಿಗರು ಯುಕೆ’ ಎಂಬ ಸಂಘಟನೆ ಹಮ್ಮಿಕೊಂಡಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ಗೆ ಸನ್ಮಾನ ಇರಲಿದ್ದು, ಇದೇ ಸಂದರ್ಭದಲ್ಲಿ ಈ ‘ಲೈಫ್ಸೈಕಲ್’ಗೂ ಚಾಲನೆ ಸಿಗಲಿದೆ. ತಮ್ಮ ಜೀವನದ ಘಟನಾವಳಿ, ಅನುಭವಗಳನ್ನು ಆಧರಿಸಿ ರಮೇಶ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

‘ಸೈಕಲ್ ಎಂದರೆ ಬ್ಯಾಲೆನ್ಸ್. ಬ್ಯಾಲೆನ್ಸ್ ತಪ್ಪಿದರೆ ಸೈಕಲ್ನಿಂದ ಬೀಳುತ್ತೇವೆ. ಎಡ-ಬಲ ಯಾವ ಕಡೆಗೂ ಹೆಚ್ಚು ವಾಲದೆ ಓಡಿಸುವಂಥದ್ದೇ ಸೈಕಲ್ ಸವಾರಿ. ಹಾಗೆಯೇ ಜೀವನ ಕೂಡ ಒಂದು ರೀತಿಯ ಸೈಕಲ್. ಇಲ್ಲಿ ದುಡ್ಡು ಕೀರ್ತಿ ನೆಮ್ಮದಿ ಎಲ್ಲವೂ ಮುಖ್ಯ. ಯಾವುದೋ ಒಂದರ ಕಡೆಗೆ ವಾಲಿದರೆ ಲೈಫ್ಸೈಕಲ್ ಬ್ಯಾಲೆನ್ಸ್ ತಪ್ಪುತ್ತದೆ ಎಂಬುದೇ ಈ ಕಾರ್ಯಕ್ರಮದ ಸಂದೇಶ’ ಎನ್ನುತ್ತಾರೆ ರಮೇಶ್.

ಈ ‘ಲೈಫ್ ಸೈಕಲ್’ ಕಾರ್ಯಕ್ರಮದಲ್ಲಿ ರಮೇಶ್ ಅವರ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳು, ಅವರ ಬಹಳ ಮುಖ್ಯವಾದ ಚಿತ್ರಗಳು ಹೇಗೆ ಆರಂಭವಾದವು, ಶೂಟಿಂಗ್ನಲ್ಲಿ ಸೆಟ್ನಲ್ಲಿ ನಡೆದ ಸಂಗತಿಗಳು, ವಿಷ್ಣುವರ್ಧನ್, ಶಂಕರ್ನಾಗ್, ಕಮಲ್ಹಾಸನ್ ಅವರನ್ನು ಭೇಟಿ ಮಾಡಿದಾಗಿನ ಅನುಭವ, ‘ವೀಕೆಂಡ್ ವಿದ್ ರಮೇಶ್’, ‘ಪ್ರೀತಿಯಿಂದ ರಮೇಶ್’ ಕಾರ್ಯಕ್ರಮಗಳಿಂದ ಅವರು ಕಲಿತಿದ್ದೇನು, ಅವರ ಪ್ರಕಾರ ಯಶಸ್ಸು ಎಂದರೇನು.. ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ಇದಕ್ಕೆಂದೇ ಪ್ರತ್ಯೇಕವಾದ ಆನಿಮೇಷನ್ ಕೂಡ ಅವರು ಮಾಡಿಸಿದ್ದಾರೆ. ಜತೆಗೆ 25 ವರ್ಷದ ರಮೇಶ್ ಕೇಳುವ ಪ್ರಶ್ನೆಗಳಿಗೆ 52 ವರ್ಷದ ರಮೇಶ್ ಉತ್ತರ ಹೇಳುವ ವಿಶೇಷ ಸಂವಾದ ಕೂಡ ಇದರಲ್ಲಿರಲಿದೆ. ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ 25 ವರ್ಷದ ರಮೇಶ್ ತಮ್ಮ ಅನಿಸಿಕೆ-ಗೊಂದಲಗಳ ಬಗ್ಗೆ ಕೇಳುತ್ತಾರೆ. ಅದಕ್ಕೆ ವೇದಿಕೆ ಮೇಲಿರುವ ಪ್ರಬುದ್ಧ ರಮೇಶ್ ಉತ್ತರಿಸುತ್ತಾರೆ. ಅಲ್ಲದೆ ಒಂದೂವರೆ ಗಂಟೆಯ ಈ ಕಾರ್ಯಕ್ರಮದಲ್ಲಿ ಜನರೊಂದಿಗೆ ಸಂವಾದವೂ ಇರಲಿದೆ.

ವಿಶ್ವಾದ್ಯಂತ ಸಾಧ್ಯವಾದಾಗೆಲ್ಲ ಈ ಕಾರ್ಯಕ್ರಮ ಮಾಡುವ ಉದ್ದೇಶ ಇರಿಸಿಕೊಂಡಿರುವ ರಮೇಶ್, ‘ಪುಷ್ಪಕ ವಿಮಾನ’ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅಮೆರಿಕದಲ್ಲೂ ‘ಲೈಫ್ಸೈಕಲ್’ ನಡೆಸಲಿದ್ದಾರೆ. ಬಳಿಕ ಮಧ್ಯಪ್ರಾಚ್ಯ ಹಾಗೂ ಆಸ್ಟ್ರೇಲಿಯಾದಲ್ಲೂ ನಡೆಸುವ ಗುರಿ ಇರಿಸಿಕೊಂಡಿದ್ದಾರೆ. ‘ಸಮಯ ಹಾಗೂ ಅವಕಾಶ ಸಿಕ್ಕಾಗೆಲ್ಲ ಲೈಫ್ಸೈಕಲ್ ನಡೆಯಲಿದೆ’ ಎನ್ನುತ್ತಾರೆ ರಮೇಶ್.

Leave a Reply

Your email address will not be published. Required fields are marked *