ಲಂಚ ಕೊಟ್ಟು ಟ್ರೇನ್ ಏರಿದ ಪೂಜಾರಿ ಬ್ರದರ್ಸ್!

2 Min Read
ಲಂಚ ಕೊಟ್ಟು ಟ್ರೇನ್ ಏರಿದ ಪೂಜಾರಿ ಬ್ರದರ್ಸ್!

ತೆಲಸಂಗ: ರಷ್ಯಾ-ಯೂಕ್ರೇನ್ ಯುದ್ಧ ಜಗತ್ತನ್ನೇ ತಲ್ಲಣದತ್ತ ದೂಡಿದ್ದರೆ ಯೂಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರೋದನೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯಾವಾಗ ಏನಾಗುತ್ತದೋ ಎಂಬ ಆತಂಕದಲ್ಲಿ ಉಸಿರು ಬಿಗಿ ಹಿಡಿದು ಕಾದಿರುವ ವಿದ್ಯಾರ್ಥಿಗಳು ತಾಯ್ನಡಿಗೆ ಮರಳಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ, ಅಲ್ಲಿಂದ ಪಾರಾಗಿ ಬರುವುದು ಅಷ್ಟು ಸುಲಭವಾಗಿಲ್ಲ ಎಂಬುದನ್ನೂ ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್ ಕರೆ ಮೂಲಕ ಸ್ಪಷ್ಟಪಡಿಸುತ್ತಿದ್ದಾರೆ.

ಯೂಕ್ರೇನ್ ನಗರದಲ್ಲಿ ಒಂದು ವಾರದಿಂದ ಸಿಲುಕಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಸಹೋದರರರಾದ ನಾಗೇಶ ಪೂಜಾರಿ, ರಾಖೇಶ ಪೂಜಾರಿ ಖಾರ್ಕಿವ್‌ನಿಂದ ರೈಲ್ವೆ ಮೂಲಕ ರಾಖಿವ್ ನಗರಕ್ಕೆ ಮಂಗಳವಾರ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ಸಂಜೆ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮೂಲಕ ಮಾತನಾಡಿದ ಸಹೋದರರು, ‘ಸುಮಾರು 15 ಜನ ಒಟ್ಟಿಗೆ ಹೊರಟಿದ್ದೇವೆ. ಟ್ರೇನ್ ಹತ್ತಲು ಪೊಲೀಸರು ಬಿಡುತ್ತಿಲ್ಲ.

ಉಕ್ರೇನ್ ಪೊಲೀಸರಿಗೆ ನಾವು ತಲಾ ನೂರು ಡಾಲರ್ ಲಂಚ ಕೊಟ್ಟು ಟ್ರೇನ್ ಏರಿದ್ದೇವೆ. ಇಲ್ಲಿಯ ಪೊಲೀಸರು ಪ್ರತಿಯೊಂದಕ್ಕೂ ಹಣ ಕಿತ್ತುಕೊಳ್ಳುತ್ತಿರುವುದರಿಂದ ಎಲ್ಲೆಲ್ಲಿ ಪೊಲೀಸರು ತೊಂದರೆ ಮಾಡುತ್ತಾರೋ ಅಲ್ಲಲ್ಲಿ ಹಣ ಕೊಟ್ಟು ಪಾರಾಗುವ ಸುಲಭ ಮಾರ್ಗ ಹುಡುಕಿ ಮುಂದೆ ಸಾಗುವ ನಿರ್ಧಾರ ಮಾಡಿದ್ದೇವೆ. ರಾಖಿವ್ ತಲುಪಿದ ನಂತರ ಭಾರತಕ್ಕೆ ಬರಲು ವ್ಯವಸ್ಥೆ ಇದೆ ಎನ್ನಲಾಗುತ್ತಿದೆ. ಮೊದಲು ಖಾರ್ಕಿವ್‌ನಿಂದ ಪಾರಾಗಬೇಕಿತ್ತು. ಈಗ ಪಾರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

ಜನರೇ ಯುದ್ಧಕ್ಕೆ ನಿಂತಾಗ!: ‘ನಾಲ್ಕು ದಿನಗಳಿಂದ ಖಾರ್ಕಿವ್‌ನಲ್ಲಿ ಸುರಕ್ಷತೆಗಾಗಿ ನೆಲಮಳಿಗೆಯಲ್ಲಿ ವಾಸವಾಗಿದ್ದರೂ ದಿನದಿಂದ ದಿನಕ್ಕೆ ಆಹಾರ ಮತ್ತು ನೀರಿನ ಸಮಸ್ಯೆ ಬಿಗಡಾಯಿಸುತ್ತ ಹೋಯಿತು. ಖಾರ್ಕಿವ್‌ನ ಜನ ಸ್ವತಃ ಬಂದೂಕು ಎತ್ತಿಕೊಂಡು ಯುದ್ಧಕ್ಕೆ ನಿಂತಾಗ ನಾವು ಹೊರಗಡೆ ಹೋಗುವುದೂ ದುಸ್ತರವಾಯಿತು.

See also  ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕಿಯರಿಂದ ಕಿರುಕುಳ! ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟ ಶಿಕ್ಷಕಿ

ಖಾರ್ಕಿವ್‌ನಲ್ಲಿ ಭಯಾನಕ ಸ್ಥಿತಿ ಇದೆ. ಪರಿಸ್ಥಿತಿ ತಿಳಿಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಸ್ನೇಹಿತ ನವೀನ ಮೃತಪಟ್ಟಿದ್ದು ಕೇಳಿ ತುಂಬ ನೋವಾಯಿತು. ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ತಾಳಿದ್ದು, ಹೇಗಾದರೂ ಮಾಡಿ ಖಾರ್ಕಿವ್ ತೊರೆಯಬೇಕೆಂಬ ನಿರ್ಧಾರ ಮಾಡಿ 700 ಕಿ.ಮೀ. ಪ್ರಯಾಣ ಬೆಳೆಸಿದ್ದೇವೆ. ನಮ್ಮ ಜತೆ ಯುವತಿಯರೂ ಇದ್ದಾರೆ. ಅವರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬರುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಪೂಜಾರಿ ಸಹೋದರರು ತಿಳಿಸಿದ್ದಾರೆ.

ಸಂಪರ್ಕ ಕಡಿತ ತಂದ ಆತಂಕ: ನಾಲ್ಕು ವರ್ಷದಿಂದ ನಾಗೇಶ ಮತ್ತು ರಾಕೇಶ ಸಹೋದರರು ವೈದ್ಯಕೀಯ ಓದಲು ಖಾರ್ಕಿವ್‌ನಲ್ಲಿ ಇದ್ದರು. ಸೋಮವಾರ ಸಂಜೆಯವರೆಗೂ ಸಂಪರ್ಕದಲ್ಲಿದ್ದವರು ಮಂಗಳವಾರ ಸಂಜೆ 5 ಗಂಟೆಯವರೆಗೂ ಸಂಪರ್ಕ ಕಳೆದುಕೊಂಡಿದ್ದರು. ಇದರಿಂದ ಗ್ರಾಮಸ್ಥರಲ್ಲಿ ಮತ್ತು ಕುಟುಂಬಸ್ಥರಲ್ಲಿ ಭಯವಾಗಿತ್ತು. ‘ಟ್ರೇನ್ ಹತ್ತಿ ಖಾರ್ಕಿವ್ ತೊರೆಯುವ ತಯಾರಿಯಲ್ಲಿದ್ದೆವು. ಹಾಗಾಗಿ, ಫೋನ್ ಬಂದ್ ಇತ್ತು’ ಎಂದು ರಾಕೇಶ, ನಾಗೇಶ ತಿಳಿಸಿದರು.

ಯುದ್ಧ ಆರಂಭವಾದಾಗಿನಿಂದ ನಮ್ಮ ಮಕ್ಕಳು ಪ್ರತಿದಿನ ಫೋನ್ ಮಾಡಿ ಸುರಕ್ಷಿತವಾಗಿ ಇದ್ದೇವೆ ಎಂದಾಗ ಸಮಾಧಾನವಾಗುತ್ತಿತ್ತು. ಹಾವೇರಿ ಮೂಲದ ನವೀನ ಎಂಬ ವಿದ್ಯಾರ್ಥಿ ಮೃತಪಟ್ಟ ಸುದ್ದಿ ಕೇಳಿ ಭಯವಾಗಿದೆ. ನಮ್ಮ ಮಕ್ಕಳು ಸುರಕ್ಷಿತವಾಗಿ ಮನೆ ಸೇರಲಿ ಎಂದು ಪ್ರಾರ್ಥಿಸುತ್ತೇನೆ.
| ಮಹಾದೇವ ಪೂಜಾರಿ, ನಾಗೇಶ, ರಾಕೇಶ ಅವರ ತಂದೆ

| ಜಗದೀಶ ಖೊಬ್ರಿ

Share This Article