ರ‍್ಯಾಂಕಿಂಗ್​​ನಲ್ಲಿ ಅನ್ಯಾಯ: ಪಿಇಎಸ್ ವಿವಿ ಕುಲಾಧಿಪತಿ ಅಸಮಾಧಾನ

ಬೆಂಗಳೂರು: ಅಂಕಿ-ಅಂಶಗಳನ್ನು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ರ‍್ಯಾಂಕಿಂಗ್ ಫ್ರೇಮ್ರ್ಕ್ (ಎನ್​ಐಆರ್​ಎಫ್) ತಪ್ಪಾಗಿ ಅರ್ಥೈಸಿದ್ದರಿಂದ ಉತ್ತಮ ರ‍್ಯಾಂಕಿಂಗ್ ಕೈತಪ್ಪಿದ್ದು, ಹೈಕೋರ್ಟ್​ನಲ್ಲಿ ಪ್ರಶ್ನಿಸಲು ಪಿಇಎಸ್ ವಿಶ್ವವಿದ್ಯಾಲಯ ನಿರ್ಧರಿಸಿದೆ.

ವಾರದ ಹಿಂದೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಎನ್​ಐಆರ್​ಎಫ್ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದಾರೆ. ಆ ಪ್ರಕಾರವಾಗಿ ನಮ್ಮ ವಿಶ್ವವಿದ್ಯಾಲಯಕ್ಕೆ 149ನೇ ಸ್ಥಾನ ಸಿಕ್ಕಿದೆ. ರ‍್ಯಾಂಕಿಂಗ್ ನೀಡುವಾಗ ವಿವಿ ಪ್ಲೇಸ್​ವೆುಂಟ್, ವಿದ್ಯಾರ್ಥಿಗಳಿಗೆ ಸಿಕ್ಕಿರುವ ವೇತನವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. 2017-18ನೇ ಸಾಲಿನಲ್ಲಿ ಒಟ್ಟಾರೆ 973 ವಿದ್ಯಾರ್ಥಿಗಳು ಪ್ಲೇಸ್​ವೆುಂಟ್ ಪಡೆದಿದ್ದು, ವಾರ್ಷಿಕ ಸರಾಸರಿ ವೇತನ 9.71 ಲಕ್ಷ ರೂ. ಇದೆ. ಆದರೆ, 4 ಲಕ್ಷ ರೂ. ಎಂದು ಪರಿಗಣಿಸಿರುವುದೇ ರ್ಯಾಂಕ್ ಕುಸಿತಕ್ಕೆ ಕಾರಣವಾಗಿದೆ ಎಂದು ಪಿಇಎಸ್ ವಿವಿ ಕುಲಾಧಿಪತಿ ಡಾ. ಎಂ.ಆರ್. ದೊರೆಸ್ವಾಮಿ ತಿಳಿಸಿದ್ದಾರೆ.

ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾದ ಮರುದಿನವೇ ಎನ್​ಐಆರ್​ಎಫ್ ಸದಸ್ಯರಿಗೆ ಇಮೇಲ್ ಮಾಡಿ ಪರಿಷ್ಕೃತ ಪಟ್ಟಿ ಬಿಡುಗಡೆಗೆ ಮನವಿ ಮಾಡಿದ್ದೇವೆ. ಅಲ್ಲದೆ, ಅಧಿಕಾರಿಗಳ ಜತೆಗೆ ದೂರವಾಣಿಯಲ್ಲೂ ಮಾತನಾಡಿದ್ದೇನೆ. ಆದರೆ, ಒಂದು ವಾರ ಬಿಟ್ಟು ದಾಖಲೆ ಸಹಿತ ದೆಹಲಿಗೆ ಬರುವಂತೆ ಹೇಳಿದ್ದಾರೆ. ಇದು ಎನ್​ಐಆರ್​ಎಫ್ ಮಾಡಿದ ತಪ್ಪು. ಪ್ರತಿವರ್ಷ ನೂರರೊಳಗೆ ಸ್ಥಾನ ಪಡೆಯುತ್ತಿದ್ದ ನಮ್ಮ ವಿವಿಗೆ ಅಂಕಿ-ಅಂಶಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಕಡಿಮೆ ಸ್ಥಾನ ನೀಡಿರುವುದು ಸರಿಯಲ್ಲ ಎಂದು ದೂರಿದರು. ಅಂಕಿ-ಅಂಶಗಳನ್ನು ಸರಿಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಹೇಳಿದ್ದಾರೆ.

2016, 2017 ಮತ್ತು 2018ರಲ್ಲಿ ವಿವಿ ಕ್ರಮವಾಗಿ 98, 94 ಮತ್ತು 99ನೇ ರ್ಯಾಂಕ್ ಪಡೆದಿತ್ತು. ಅಂಕಿ-ಅಂಶಗಳನ್ನು ಸರಿಪಡಿಸುವಂತೆ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಮಾಡಲಾಗಿದೆ ಎಂದು ದೊರೆಸ್ವಾಮಿ ತಿಳಿಸಿದ್ದಾರೆ.