ರೌಡಿಗಳ ಮನೆ ಮೇಲೆ ಮತ್ತೆ ದಾಳಿ

ಹುಬ್ಬಳ್ಳಿ: ಮಂಗಳವಾರ ಬೆಳ್ಳಂಬೆಳಗ್ಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಹಲವೆಡೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಎಂಟು ರೌಡಿಗಳನ್ನು ಬಂಧಿಸಿ, ಏರ್ ಗನ್, ತಲ್ವಾರ್ ಮತ್ತಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆ ಮೂಲಕ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಮನೆಯಲ್ಲಿ ಅಕ್ರಮವಾಗಿ ಮಾರಕಾಸ್ತ್ರ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಆನಂದ ನಗರ, ಹೊಸೂರು, ಗುಡಿಹಾಳ ರಸ್ತೆ, ಗಿರಣಿ ಚಾಳ ಸೇರಿ ಹಲವೆಡೆ ಏಕ ಕಾಲದಲ್ಲಿ ದಾಳಿ ನಡೆಸಿದರು. ಡಿಸಿಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳಾಗಿ ಪೊಲೀಸರು ದಾಳಿ ಮಾಡಿದರು. ಮನೆಯಲ್ಲಿದ್ದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು. ಸಂದಿ ಗೊಂದಿಗಳ ಮನೆಗಳಿಗೆ ನುಗ್ಗಿದ ಪೊಲೀಸರು ಮೂಲೆ ಮೂಲೆಯಲ್ಲೂ ತಪಾಸಣೆ ಕೈಗೊಂಡರು.

ಹುಬ್ಬಳ್ಳಿಯ 43 ರೌಡಿಗಳ ಮನೆ ಮೇಲೆ ದಾಳಿ ನಡೆಸಿದರು. ಎರಡು ದ್ವಿಚಕ್ರ ವಾಹನ, 4 ಚಾಕು, 4 ತಲ್ವಾರ್, 7 ಕಂದಲಿಗಳು, 3 ಏರ್​ಗನ್ ವಶಪಡಿಸಿಕೊಂಡರು.

ಉತ್ತರ ಉಪ ವಿಭಾಗದ ಎಸಿಪಿ ಎಚ್.ಕೆ. ಪಠಾಣ, ದಕ್ಷಿಣ ಉಪ ವಿಭಾಗದ ಎಸಿಪಿ ಎನ್.ಬಿ. ಸಕ್ರಿ, ಇನ್ಸ್​ಪೆಕ್ಟರ್​ಗಳಾದ ವಿನೋದ ಮುಕ್ತೇದಾರ, ಸಂತೋಷಕುಮಾರ, ಸುರೇಶ ಕುಂಬಾರ, ಮಾರುತಿ ಗುಳ್ಳಾರಿ ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.

21 ಜನರ ವಿಚಾರಣೆ: ಹುಬ್ಬಳ್ಳಿ ಹೊಸೂರಿನ ನಿಖಿಲ್ ದಾಂಡೇಲಿ, ರಾಹುಲ್ ದಾಂಡೇಲಿ, ಶೈಲೇಶ ಹರಿವಾಣ, ಜಗದೀಶ ನಗರದ ಕಿರಣ ನಾಯ್ಕ, ಉಣಕಲ್ಲನ ರಮೇಶ ಪವಾಡೆ, ಕಿರಣ ಪವಾಡೆ, ಕಿರಣ ಪವಾರ, ಕೋಳೇಕರ ಪ್ಲಾಟ್​ನ ಜುನೇದ ಇರ್ಫಾನ ಮುಲ್ಲಾ, ಹಳೇ ಹುಬ್ಬಳ್ಳಿ ಗುಡಿಹಾಳ ರಸ್ತೆಯ ಮಹಮ್ಮದ ಗೌಸ್ ಮೊರಬ, ಆನಂದನಗರದ ಮಹಮ್ಮದ ಶರೀಫ ಹೆಬ್ಬಳ್ಳಿ ಮತ್ತಿತರರ ವಿಚಾರಣೆ ನಡೆಸಿದರು.

ತಲ್ವಾರ್ ತಯಾರಿಸುತ್ತಿದ್ದವರು ವಶಕ್ಕೆ: ಮಂಟೂರು ರಸ್ತೆಯ ಮನೆಯೊಂದರಲ್ಲಿ ತಲ್ವಾರ್ ತಯಾರಿಸುತ್ತಿದ್ದ ಪಂಜಾಬ್ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಖ್ ಸಮುದಾಯಕ್ಕೆ ಸೇರಿದ ಮೂವರು ತಲ್ವಾರ್ ಮತ್ತಿತರ ಮಾರಕಾಸ್ತ್ರ ತಯಾರಿಸುತ್ತಿದ್ದರು. ಹಾಗಾಗಿ, ಇವರನ್ನು ಬೆಂಡಿಗೇರಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪತಿಗಾಗಿ ಪತ್ನಿಯರ ಜಗಳ

ಧಾರವಾಡ: ಎರಡನೇ ಮದುವೆ ಮಾಡಿಕೊಂಡಿರುವ ಪತಿ ವಿರುದ್ಧ ಆಕ್ರೋಶಗೊಂಡ ಮಹಿಳೆ, ಪತಿ ಹಾಗೂ ಆತನ ಎರಡನೇ ಪತ್ನಿಯನ್ನು ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ವಿಜಯಾ ಟಾಕೀಸ್ ಬಳಿಯ ಕಂಪ್ಯೂಟರ್ ಸೆಂಟರ್​ನಲ್ಲಿ ವಾರದ ಹಿಂದೆ ಈ ಘಟನೆ ನಡೆದಿದೆ. ಪತಿ ಹಾಗೂ ಪತ್ನಿಯರ ಜಗಳ, ಅಂಗಡಿಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯಾವಳಿ ವೈರಲ್ ಆಗಿದೆ.

ಬಸವನಗರ ನಿವಾಸಿ ಅಲ್ಲಾವುದ್ದೀನ್ ಬಳೆಗಾರ ಎಂಬಾತ ಹಲ್ಲೆಗೆ ಒಳಗಾದವನು. ಈತ 5 ವರ್ಷದ ಹಿಂದೆ ಧಾರವಾಡ ಮನಕಿಲ್ಲಾ ಬಡಾವಣೆಯ ಜಾಹೀದಾ ಎಂಬುವರನ್ನು ಮದುವೆಯಾಗಿದ್ದಾನೆ. ದಂಪತಿಗೆ ಮಗು ಕೂಡ ಇದೆ. ಇಬ್ಬರ ಮಧ್ಯೆ ಜಗಳ ಬಂದು ಬೇರ್ಪಟ್ಟಿದ್ದರು. ಈ ಮಧ್ಯೆ ಅಲ್ಲಾವುದ್ದೀನ್ ವಾರದ ಹಿಂದೆ ಮುಬಿನ್ ಎಂಬುವರನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ. ಇಬ್ಬರೂ ಕಂಪ್ಯೂಟರ್ ಸೆಂಟರ್​ನಲ್ಲಿ ಇರುವುದು ಗೊತ್ತಾಗಿ ತನ್ನ ಸಂಬಂಧಿಕರೊಂದಿಗೆ ಸ್ಥಳಕ್ಕೆ ಬಂದ ಮೊದಲ ಪತ್ನಿ, ಇಬ್ಬರನ್ನೂ ತರಾಟೆಗೆ ತೆಗೆದುಕೊಂಡು ಥಳಿಸಿದ್ದಾಳೆ.

ಈ ವೇಳೆ ಅಲ್ಲಾವುದ್ದೀನ್ ಕೂಡ ಮೊದಲ ಪತ್ನಿಯನ್ನು ಹೊಡೆದಿದ್ದಾನೆ. ತನಗೆ ಜೀವ ಭಯವಿದೆ ಎಂದು ಹೇಳಿಕೊಂಡಿರುವ ಅಲ್ಲಾವುದ್ದೀನ್, ಎರಡನೇ ಪತ್ನಿಯೊಂದಿಗೆ ಅಜ್ಞಾತ ಸ್ಥಳಕ್ಕೆ ಹೋಗಿದ್ದಾನೆ ಎನ್ನಲಾಗಿದೆ.

ಇಸ್ಪೀಟ್ ಅಡ್ಡೆ ಮೇಲೆ ದಾಳಿ

ಹುಬ್ಬಳ್ಳಿ: ತಾಲೂಕಿನ ಕೋಳಿವಾಡ ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಸೋಮವಾರ ಮಧ್ಯರಾತ್ರಿ ಇಸ್ಪೀಟ್ ಆಡುತ್ತಿದ್ದ ಬೃಹತ್ ಅಡ್ಡೆ ಮೇಲೆ ದಾಳಿ ನಡೆಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು 17 ಜನರನ್ನು ಬಂಧಿಸಿ, 22 ದ್ವಿಚಕ್ರ ವಾಹನ ಹಾಗೂ 68000 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಅಣ್ಣಿಗೇರಿ ಗ್ರಾಮದ ಮಂಜುನಾಥ ಗಾಣಿಗೇರ, ಹನಮಂತು ಆಡಕಾವು, ಪರಸಪ್ಪ ಭಜಂತ್ರಿ, ಪ್ರಕಾಶ ಗುದ್ದಿನ, ಪರಸಪ್ಪ ಬೆಳ್ಳಿಕೊಪ್ಪ, ಜಗದೀಶ ಸೂಡಿ, ಮಂಜುನಾಥ ಮಾಯಣ್ಣವರ, ರಾಜು ಉಳ್ಳಾಗಡ್ಡಿ, ಮಲ್ಲಪ್ಪ ಮುಂಡಾಸದ, ಪರಶುರಾಮ ಕಾಳಿ, ಫಕ್ಕೀರಪ್ಪ ದೊಡಮನಿ, ವಿರುಪಾಕ್ಷಯ್ಯ, ಈಶ್ವರಪ್ಪ ಪಲ್ಲೇದ, ಮಲ್ಲೇಶಪ್ಪ ಅಸುಂಡಿ, ನಾಗಪ್ಪ ಬೆಳ್ಳಿಕೊಪ್ಪ, ಗುರುಸ್ವಾಮಿ ಹಿರೇಮಠ, ಹಜರೇಸಾಬ ಹುಸೇನಸಾಬ ಕಾಗದಗಾರ ಬಂಧಿತರು.

ಗ್ರಾಮದ ಕುರಬೆಟ್ಟ ಹಳ್ಳದ ಬಯಲು ಜಾಗದಲ್ಲಿ ಮಧ್ಯರಾತ್ರಿ ಚಾರ್ಜರ್ ಬ್ಯಾಟರಿ ಬೆಳಕಿನಲ್ಲಿ ಜೂಜು ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆ ಇನ್ಸ್​ಪೆಕ್ಟರ್ ಎಸ್.ಬಿ. ಮಾಳಗೊಂಡ ನೇತೃತ್ವದ ತಂಡ ಏಕಾಏಕಿ ದಾಳಿ ನಡೆಸಿ ಯಶಸ್ವಿ ಕಾರ್ಯಾಚರಣೆ ನಡೆಸಿತು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು ಅಡ್ಡೆಗಳ ಮೇಲೆ ದಾಳಿ

ಧಾರವಾಡ: ಇಲ್ಲಿನ ಉಪನಗರ ಠಾಣೆಯ ಪೊಲೀಸರು ಸೋಮವಾರ ಪ್ರತ್ಯೇಕ ಎರಡು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಮದ್ಯಾಹ್ನ 12.15ರ ಸುಮಾರಿಗೆ ಕಮಲಾಪುರ ಪತ್ರೇಶ್ವರನಗರದ ಬಯಲು ಜಾಗದಲ್ಲಿ ಜೂಜಾಟ ನಡೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಸಂತೋಷ ಚಂಬಣ್ಣ ಮುಂಡರಗಿ ಹಾಗೂ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ 1,200 ನಗದು ಹಾಗೂ ಜೂಜು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಎತ್ತಿನಗುಡ್ಡ ಗ್ರಾಮದ ಬಳಿಯ ಬಯಲು ಜಾಗದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ರಾತ್ರಿ 8.30ರ ಸುಮಾರಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಮಹಾದೇವ ಚಂದ್ರಪ್ಪ ಪಾಟೀಲ ಹಾಗೂ ಇತರ ನಾಲ್ವರನ್ನು ವಶಕ್ಕೆ ಪಡೆದು 1,240 ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಕದ್ದವನಿಗೆ ಗೂಸಾ

ಧಾರವಾಡ: ಕಾರ್ವಿುಕನೊಬ್ಬ ಅಂಗಡಿಯ ಗಲ್ಲಾಪೆಟ್ಟಿಗೆಗೆ ಕನ್ನ ಹಾಕಿ ಗೂಸಾ ತಿಂದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿಯ ಸಿಟಿ ಅಡ್ಡಾ ಟೀ ಸ್ಟಾಲ್​ನಲ್ಲಿ ಕೆಲಸ ಮಾಡುತ್ತಿದ್ದ ಶಂಕರ ಹಳ್ಳಿ ಎಂಬಾತನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ನಿವಾಸಿ ಶಂಕರ ಕಳೆದ ಕೆಲ ದಿನಗಳಿಂದ ಸಿಟಿ ಅಡ್ಡಾದಲ್ಲಿ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಮಾಲೀಕ ಇಲ್ಲದ ವೇಳೆ ಗಲ್ಲಾಪೆಟ್ಟಿಗೆಯಲ್ಲಿದ್ದ 30 ಸಾವಿರ ರೂ. ಎಗರಿಸಿದ್ದ. ಹಣ ಕದಿಯುತ್ತಿದ್ದ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ದೃಶ್ಯ ಆಧರಿಸಿ ಕಳ್ಳತನ ಪತ್ತೆ ಮಾಡಿದ ಮಾಲೀಕರು, ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಈ ಮಧ್ಯೆ ಮಂಗಳವಾರ ಬೆಳಗ್ಗೆ ಸಿಟಿ ಅಡ್ಡಾ ಬಳಿ ಜಮಾಯಿಸಿದ್ದ ಸಾರ್ವಜನಿಕರು, ವಿಷಯ ತಿಳಿದು ಹಣ ಕದ್ದ ಆರೋಪದಡಿ ಶಂಕರ ಹಳ್ಳಿಗೆ ಗೂಸಾ ನೀಡಿದರು.

90 ಗ್ರಾಂ. ಗಾಂಜಾ ವಶ; ಓರ್ವನ ಬಂಧನ

ಧಾರವಾಡ: ವಿದ್ಯಾನಗರಿಯಲ್ಲಿ ಗೂಂಡಾಗಿರಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳ ಮನೆ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು, 90 ಗ್ರಾಂ. ಗಾಂಜಾ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಶಹರ ಠಾಣೆ ವ್ಯಾಪ್ತಿಯಲ್ಲಿ ಮದಾರಮಡ್ಡಿಯ ವಿಷ್ಣು ಕೊಂಡಪಲ್ಲಿ, ಸನ್ನಿ ಸಾಕೇನವರ ಹಾಗೂ ಎಂ.ಆರ್. ನಗರದ ರಾಘವೇಂದ್ರ ವೇರ್ಣೆಕರ ಎಂಬುವರ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ರಸ್ತೆ ಮೇಲೆ ನಿಂತಿದ್ದ ವಿಷ್ಣು ಕೊಂಡಪಲ್ಲಿ ಎಂಬಾತನನ್ನು ತಪಾಸಣೆ ನಡೆಸಿದ ಪೊಲೀಸರು ಆತನಿಂದ 90 ಗ್ರಾಂ. ಗಾಂಜಾ ವಶಪಡಿಸಿಕೊಂಡು ಬಂಧಿಸಿದ್ದಾರೆ.

ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಾವೇರಿಪೇಟ್​ನ ನಾಸೀರ ಶೇಖ್, ಕಂಠಿ ಗಲ್ಲಿಯ ಅಬ್ಬಾಬಾಷಾ ಜಾಫರ್ ಕಮಲಶಾ, ಹಳೇ ಎಪಿಎಂಸಿ ಬಳಿಯ ಪ್ರಕಾಶ ಶೆಟ್ಟಿ, ಗಬ್ಬಾ ರಫೀಕ್, ವಿದ್ಯಾಗಿರಿ ಠಾಣೆ ವ್ಯಾಪ್ತಿಯ ಶಿವಾನಂದನಗರದ ಮಕ್ತುಂ ಸೊಗಲದ, ಪರಶುರಾಮ ಚವ್ಹಾಣ, ಹನುಮಂತನಗರದ ಮಂಜುನಾಥ ಹಿರೇಮನಿ, ಜಾಂಬವಂತ ನಗರದ ನರಸಿಂಹ ಮಾದರ, ಶಿವಕುಮಾರ ಮಾದರ ಎಂಬುವರ ಮನೆಗಳ ಮೇಲೆ ಸಹ ದಾಳಿ ನಡೆಸಿದ್ದರು.

ವಿಷ್ಣು ಕೊಂಡಪಲ್ಲಿ ಮನೆಯಲ್ಲಿ ದೊರೆತ 90 ಗ್ರಾಂ. ಗಾಂಜಾ ಸಿಕ್ಕಿದ್ದನ್ನು ಬಿಟ್ಟು ಉಳಿದವರ ಮನೆಗಳಲ್ಲಿ ಯಾವುದೇ ವಸ್ತುಗಳು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಪಿ ಎಂ.ಎನ್. ರುದ್ರಪ್ಪ ನೇತೃತ್ವದಲ್ಲಿ ಶಹರ ಠಾಣೆ ಸಿಪಿಐ ಲಕ್ಷ್ಮೀಕಾಂತ ತಳವಾರ, ವಿದ್ಯಾಗಿರಿ ಠಾಣೆ ಸಿಪಿಐ ವೈ.ಎಚ್. ರಮಾಕಾಂತ, ಎಎಸ್​ಐ ಆರ್.ಎಚ್. ನದಾಫ್ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿದ್ದರು.