ರೌಡಿಗಳಿಗೆ ಸನ್ನಡತೆ ಪಾಠ

ನೆಲಮಂಗಲ: ಉಪ ವಿಭಾಗವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ರೌಡಿ ಶೀಟರ್​ಗಳನ್ನು ಕಾರ್ಯಾಚರಣೆ ನಡೆಸಿ ಕರೆ ತಂದಿದ್ದ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ ಕೇಂದ್ರವಲಯ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್​ಚಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತಂದಿದ್ದ ಸುಮಾರು 150 ಮಂದಿ ರೌಡಿಶೀಟರ್​ಗಳ ಪರೇಡ್ ನಡೆಸಲಾಯಿತು. ಮುಂಜಾಗ್ರತ ಕ್ರಮವಾಗಿ ವಿಚಾರಣೆ ನಡೆಸಿ, ಸನ್ನಡತೆಯಿಂದ ಇರುವಂತೆ ತಿಳಿವಳಿಕೆ ನೀಡಿ ಬಿಡುಗಡೆಗೊಳಿಸಲಾಯಿತು.

ರೌಡಿಶೀಟರ್​ಗಳ ನಿತ್ಯ ಜೀವನ ಹಾಗೂ ಚಲನವಲನಗಳ ಬಗ್ಗೆ ನಿಗಾವಹಿಸಲಾಗುತ್ತಿದೆ. ರೌಡಿಶೀಟರ್ ಎಂಬ ನಾಮಫಲಕ ಹಾಕಿಕೊಂಡು ಚುನಾವಣಾ ಸಂದರ್ಭದಲ್ಲಿ ಸಭ್ಯರನ್ನು ಹೆದರಿಸುವುದು, ರೌಡಿಸಂ ಮಾಡಿದರೆ ಕಾನೂನು ಕ್ರಮಜರುಗಿಸಲಾಗುತ್ತದೆ ಎಂದು ಶರತ್​ಚಂದ್ರ ಎಚ್ಚರಿಸಿದರು.

ಕಾನೂನು ಸುವ್ಯಸ್ಥೆ ಜಾರಿ ಮತ್ತು ಸುಗಮ ಚುನಾವಣೆ ಉದ್ದೇಶದಿಂದ ಈ ರೀತಿಯ ಕಾರ್ಯಾಚರಣೆ ನಡೆಸಿ ರೌಡಿಶೀಟರ್​ಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಇದನ್ನು

ಮೀರಿ ಅಹಿತರಕರ ಘಟನೆಗಳಿಗೆ ಕಾರಣವಾದರೆ ಅಂತಹವರ ವಿರುದ್ಧ ಹೊಸ ಪ್ರಕರಣ ದಾಖಲಿಸಿ ಹಳೆಯ ಪ್ರಕರಣದ ಜಾಮೀನು ರದ್ದುಪಡಿಸಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಪಟ್ಟಣ ಪೊಲೀಸ್ ಠಾಣೆ, ಗ್ರಾಮಾಂತರ, ಮಾದನಾಯಕನಹಳ್ಳಿ, ದಾಬಸ್​ಪೇಟೆ, ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯ ರೌಡಿಶೀಟರ್​ಗಳನ್ನು ಕರೆತರಲಾಗಿತ್ತು.

ಕೆಲತಿಂಗಳಿನಿಂದಲೂ ನೂರಾರು ಸಂಖ್ಯೆಯ ರೌಡಿಶೀಟರ್​ಗಳನ್ನು ಕರೆತಂದು ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದ ಪೊಲೀಸ್ ಅಧಿಕಾರಿಗಳು 5 ಲಕ್ಷ ರೂ. ಮೌಲ್ಯದ ಶ್ಯೂರಿಟ್ ಬಾಂಡ್ ಪಡೆದು ಜಾಮೀನು ನೀಡಲಾಗಿತ್ತು. ಈಗ ಪರೇಡ್ ನಡೆಸಿ ಎಚ್ಚರಿಕೆ ನೀಡುವ ಮೂಲಕ ಸುಗಮ ಚುನಾವಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ.

ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಜ್ಜಿತ್, ಡಿವೈಎಸ್​ಪಿ ಪಾಂಡುರಂಗ, ಪೊಲೀಸ್ ವೃತ್ತನಿರೀಕ್ಷಕ ಅನಿಲ್​ಕುಮಾರ್, ಸತ್ಯನಾರಾಯಣ ಇತರರು ಇದ್ದರು.

ಬಂಧಿತರಿಗೆ ಜೀವನ ಪಾಠ: ಪೊಲೀಸರು ವಶಕ್ಕೆ ಪಡೆದ ರೌಡಿಶೀಟರುಗಳಿಗೆ ಕಾನೂನು ಬಾಹಿರ ಚಟುವಟಿಕೆಗಳು, ಸಮಾಜಘಾತುಕ ಶಕ್ತಿಗಳೊಡನೆ ಸಂಪರ್ಕ ಸೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಾರ್ಯಗಳಲ್ಲಿ ಪಾಲ್ಗೊಳ್ಳದೆ, ಹೊಸ ಜೀವನ ಆರಂಭಿಸುವಂತೆ 2 ಗಂಟೆಗಳಿಗೂ ಮೀರಿ ತಿಳಿವಳಿಕೆ ಪಾಠ ಮಾಡಲಾಯಿತು.