ರೋಗ ಮತ್ತು ಮದ್ದು

|ಬೇಲೂರು ರಾಮಮೂರ್ತಿ

ಒಂದು ಗುರುಕುಲದಲ್ಲಿ ಗುರುಗಳು ಮನುಷ್ಯನಿಗೆ ಬರಬಹುದಾದ ರೋಗಗಳ ಕುರಿತು ಉಪದೇಶಿಸುತ್ತಿದ್ದರು. ಎಲ್ಲ ರೋಗಗಳ ಮೂಲ ಮೋಹ. ಈ ಮೋಹದಿಂದ ಅನೇಕಾನೇಕ ಶೂಲಗಳು ಹುಟ್ಟುತ್ತವೆ- ಕಾಮದಿಂದ ವಾತರೋಗ, ಲೋಭದಿಂದ ಕಫರೋಗ. ಕ್ರೋಧದಿಂದ ಸದಾಕಾಲ ಎದೆಯನ್ನು ಉರಿಸುವ ಪಿತ್ತರೋಗ. ಈ ಮೂರೂ ಒಟ್ಟಿಗೆ ಸೇರಿಬಿಟ್ಟರೆ ಅದರಿಂದ ಸನ್ನಿಪಾತ ರೋಗ ಬರುತ್ತದೆ. ಮಮತೆಯೇ ತುರಿ, ಈರ್ಷ್ಯೆಯೇ ಕಜ್ಜಿ, ವಿಷಾದವೇ ಗಂಡಮಾಲೆ ಮೊದಲಾದ ಗಂಟಲುರೋಗ. ಪರರ ಸುಖವನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುವುದೇ ಕ್ಷಯ. ದುಷ್ಟತನ ಮತ್ತು ಮನಸ್ಸಿನ ಕುಟಿಲಭಾವಗಳೇ ಕುಷ್ಠ ರೋಗ. ಅಹಂಕಾರವೇ ಅತ್ಯಂತ ದುಃಖ ಕೊಡುವ ಗಂಟುರೋಗ. ಡಂಭ, ಕಪಟ, ಮದ, ದುರಭಿಮಾನಗಳೇ ನರಜಾಡ್ಯಗಳು. ಅಜ್ಞಾನ ಮತ್ತು ಅವಿವೇಕ ಎರಡು ರೀತಿಯ ಜ್ವರಗಳು. ಮನುಷ್ಯನಿಗೆ ಒಂದು ರೋಗ ತಗುಲಿದರೆ ಸಾಕು ಮಿಕ್ಕೆಲ್ಲ ರೋಗಗಳೂ ಅಂಟುಜಾಡ್ಯಗಳಂತೆ ಒಂದರ ಹಿಂದೊಂದು ಬಂದು ಅಪ್ಪಿಕೊಳ್ಳುತ್ತವೆ ಎಂದು ವಿವರಿಸಿದರು.

ಇದನ್ನು ಕೇಳುತ್ತಿದ್ದ ಶಿಷ್ಯರಲ್ಲಿ ಒಬ್ಬಾತನಿಗೆ ಅತೀವ ಭಯವಾಗಿ, ‘ಹಾಗಾದರೆ ಈ ರೋಗಗಳಿಂದ ನಿವಾರಣೆ ಹೇಗೆ?’ ಎಂದು ಕೇಳಿದ. ಗುರುಗಳು ನಕ್ಕು, ‘ಮೊದಲಿಗೆ ಅವನ್ನು ರೋಗಗಳು ಎಂದು ಗುರುತಿಸಿಬಿಟ್ಟರೆ, ಅವು ನಮ್ಮ ಮೈ-ಮನಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಿದರೆ ರೋಗದ ಕೆಲಭಾಗ ನಿವಾರಣೆ ಆದಂತೆಯೇ. ಆದರೂ ಒಂದು ವೇಳೆ ರೋಗ ಗಟ್ಟಿಯಾಗಿ ಅಂಟಿಕೊಂಡುಬಿಟ್ಟರೆ ನಿಯಮ, ಧರ್ಮ, ವಿವೇಕ, ಆಚಾರ-ವಿಚಾರ, ಜಪ-ತಪ, ಜ್ಞಾನ, ಯಜ್ಞ, ದಾನ ಎಂಬಿತ್ಯಾದಿ ಔಷಧಗಳಿವೆ. ಆದ್ದರಿಂದಲೇ ನಾವು ಸದ್ಗುರುವೆಂಬ ವೈದ್ಯನ ಮಾತಿನಲ್ಲಿ ನಂಬಿಕೆ ಇಡಬೇಕು. ವಿಷಯ ಭೋಗಗಳನ್ನು ಬಯಸಬಾರದು. ಎಲ್ಲ ನಡವಳಿಕೆಗಳಲ್ಲೂ ಸಂಯಮ ಕಾಪಾಡಿಕೊಳ್ಳಬೇಕು. ವಿಷಯಾಸಕ್ತಿ ಎಂಬ ದೌರ್ಬಲ್ಯ ದೂರವಾಗಿ ಹೃದಯದಲ್ಲಿ ವೈರಾಗ್ಯ ಮೂಡಿದಾಗ, ಒಳ್ಳೆಯ ಬುದ್ಧಿಯ ಹಸಿವು ಹೆಚ್ಚಿದಾಗ, ನಿರ್ಮಲ ಜ್ಞಾನದ ಕೊಳದಲ್ಲಿ ಸ್ನಾನ ಮಾಡಿದಾಗ ರೋಗಗಳಿಂದ ಚೇತರಿಸಿಕೊಳ್ಳುವುದು ಸಾಧ್ಯ. ಜಗತ್ತಿನಲ್ಲಿ ದಾರಿದ್ರ್ಯಕ್ಕೆ ಸಮನಾದ ದುಃಖವಿಲ್ಲ, ಸಂತರ ಸಾಂಗತ್ಯಕ್ಕಿಂತ ಮಿಗಿಲಾದ ಸುಖವಿಲ್ಲ. ಕಾಯಾ-ವಾಚಾ-ಮನಸಾ ಪರೋಪಕಾರ ಮಾಡುವುದು ಸಹಜ ಸ್ವಭಾವವಾಗಬೇಕು. ದುಷ್ಟರೆನಿಸಿಕೊಂಡವರು ಹಾವು ಮತ್ತು ಇಲಿಗಳಂತೆ ಅಕಾರಣವಾಗಿ ಬೇರೆಯವರಿಗೆ ತೊಂದರೆ ಮಾಡುತ್ತಾರೆ. ಮನುಷ್ಯರನ್ನು ಕಚ್ಚಿದರೆ ಹಾವಿಗೆ, ಬಟ್ಟೆಗಳನ್ನು ಕಡಿದರೆ ಇಲಿಗೆ ಹೊಟ್ಟೆ ತುಂಬುವುದಿಲ್ಲ. ಆದರೂ ಕಚ್ಚುವುದು-ಕಡಿಯುವುದು ಅವುಗಳ ಸ್ವಭಾವವಾಗಿ ಬೆಳೆದಿದೆ. ದುಷ್ಟರು ಹಿಮಪಾತದಂತೆ; ಹಿಮವು ಹೇರಳವಾಗಿ ಸುರಿದು ಬೆಳೆಗಳನ್ನು ನಾಶಮಾಡಿ ಕಡೆಗೆ ಸೂರ್ಯಕಿರಣವೂ ಅವಕ್ಕೆ ತಲುಪದಂತೆ ಹೇಗೆ ಮಾಡುವುದೋ, ಹಾಗೆಯೇ ದುಷ್ಟರೂ ಪರರನ್ನು ತೊಂದರೆಗೆ ಸಿಲುಕಿಸಿ ಕಡೆಗೆ ತಾವೂ ಹಾಳಾಗುತ್ತಾರೆ. ಆದ್ದರಿಂದ ಎಲ್ಲ ರೀತಿಯ ದುಷ್ಟತನ, ರೋಗ-ರುಜಿನಗಳಿಂದಲೂ ದೂರವಿರುವುದಕ್ಕೆ ಸಂಕಲ್ಪಿಸಿದರೆ ದೈಹಿಕ-ಮಾನಸಿಕ ಆರೋಗ್ಯಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ, ಸಮಾಜವೂ ಸ್ವಸ್ಥವಾಗಿರುತ್ತದೆ’ ಎಂದರು. ವಿದ್ಯಾರ್ಥಿಗಳ ಕಂಗಳಲ್ಲಿ ಭರವಸೆಯ ಕಾಂತಿ ಮಿನುಗಿತು.