ರೋಣ ಸರ್ಕಾರಿ ಆಸ್ಪತ್ರೆಗೆ ಸಚಿವರ ಭೇಟಿ

ರೋಣ: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಸ್ಪತ್ರೆ ಸಭಾಂಗಣ, ವೈದ್ಯಾಧಿಕಾರಿಗಳ ಕೋಣೆ, ವಾರ್ಡ್​ಗಳು, ಲ್ಯಾಬ್, ಹೀಗೆ ಎಲ್ಲವುಗಳನ್ನು ವೀಕ್ಷಿಸಿ ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಂ. ಹೊನ್ನಕೇರಿ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯ ಶವಾಗಾರದಲ್ಲಿ ವಿದ್ಯುತ್ ಇಲ್ಲದಿರುವುದು, ಬಹುತೇಕ ಇಲ್ಲಿನ ವೈದ್ಯಾಧಿಕಾರಿಗಳು ಗೈರಿರುವ ಬಗ್ಗೆ ಇಲ್ಲಿನ ಸಾರ್ವಜನಿಕರು ದೂರಿರುವ ಕುರಿತು ಆಕ್ರೋಶಗೊಂಡ ಸಚಿವರು, ಈ ರೀತಿಯ ಬೇಜವಾಬ್ದಾರಿತನ ಹಾಗೂ ಅವ್ಯವಸ್ಥೆಯನ್ನು ನಾನು ಸಹಿಸುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.  ಇಲ್ಲಿನ ಹೊರಗುತ್ತಿಗೆ ನೌಕರರು ಸೇವೆಗೆ ಬರುತ್ತಿಲ್ಲ ಎಂದು ಹೊಳೆಆಲೂರ ಜಿಪಂ ಸದಸ್ಯ ಪಡಿಯಪ್ಪ ಪೂಜಾರ ಸಚಿವ ಶಿವಾನಂದ ಪಾಟೀಲ ಅವರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಸಚಿವರು ಪ್ರಶ್ನಿಸಿದಾಗ, ತಡಬಡಿಸಿದ ಡಿಎಚ್​ಒ ‘ಮೊದಲು 23 ಜನ ಹೊರಗುತ್ತಿಗೆ ನೌಕರರು ಖಾಸಗಿ ಏಜೆನ್ಸಿಯೊಂದರ ಮೂಲಕ ಆಯ್ಕೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಆದರೆ, ಈ ಏಜೆನ್ಸಿ ಬದಲಾವಣೆಯಾಗಿದ್ದು, ಹೊಸ ಏಜೆನ್ಸಿಯಿಂದ ಹಳೇ ನೌಕರರನ್ನು ತೆಗೆದುಕೊಳ್ಳಬೇಕೋ ಅಥವಾ ಹೊಸಬರನ್ನು ತೆಗೆದುಕೊಳ್ಳಬೇಕೆಂಬ ಗೊಂದವಿರುವುದರಿಂದ ತೊಂದರೆಯಾಗಿದೆ’ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಳೇ ನೌಕರರನ್ನು ಏಕೆ ತೆಗೆಯುತ್ತೀರಿ? ಅವರನ್ನೇ ಮುಂದುವರಿಸಿ ಎಂದು ತಿಳಿಸಿದರು. ಹೊಸ ಏಜೆನ್ಸಿಯವರು ಇದಕ್ಕೆ ಒಪ್ಪುತ್ತಿಲ್ಲ ಎಂದಾಗ, ಹೊಸ ಏಜೆನ್ಸಿಯನ್ನೇ ರದ್ದುಗೊಳಿಸಿ, ಮತ್ತೊಂದು ಏಜೆನ್ಸಿ ಮೂಲಕ ಹಳೇ ನೌಕರರನ್ನೇ ಮುಂದುವರಿಸಿ ಎಂದು ಡಿಎಚ್​ಒಗೆ ಸೂಚಿಸಿದರು. ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಗುಂಡಪ್ಪ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.