Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಸರ್ಪಸುತ್ತು

Tuesday, 26.06.2018, 3:03 AM       No Comments

ನನ್ನ ವಯಸ್ಸು 70. ಹನ್ನೆರಡು ವರ್ಷಗಳ ಹಿಂದೆ ಅಪಘಾತವಾದಾಗ ಹಣೆಯ ಮುಂಭಾಗದ ಬುರುಡೆಯಲ್ಲಿ ಕೂದಲೆಳೆಯ ಸೀಳು ಉಂಟಾಗಿತ್ತು. ಎದೆ ಮತ್ತು ಮಗ್ಗಲು ಎಲುಬುಗಳಿಗೆ ಪೆಟ್ಟಾಗಿತ್ತು. ಅಂದಿನಿಂದ ಇಂದಿನವರೆಗೂ ಆಗಾಗ ವಿಚಿತ್ರ ಮತ್ತು ವಿಪರೀತ ತಲೆನೋವು ಕಾಡುತ್ತಿದೆ. ಈಗ ನಾಲ್ಕು ವರ್ಷಗಳ ಹಿಂದೆ ಸರ್ಪಸುತ್ತು ಬಂದಿತ್ತು. ಚಿಕಿತ್ಸೆ ಪಡೆದರೂ ಪರಿಹಾರ ಸಿಕ್ಕಿಲ್ಲ. ನಾನು ಧೂಮಪಾನಿಯಾಗಿದ್ದು, ಕಫ ಮತ್ತು ಪಿತ್ತ ಬಾಧಿಸುತ್ತಿದೆ. ದಮ್ಮು ಬರುತ್ತದೆ. ಇತ್ತೀಚೆಗೆ ನಿದ್ರಾಹೀನತೆಯಿಂದ ಬಳಲುತ್ತಿದ್ದೇನೆ. ದಿನಕ್ಕೆ 1-2 ಗಂಟೆ ಕೂಡ ನಿದ್ರೆ ಬರುತ್ತಿಲ್ಲ. ಯಾಕೋ ಏನೋ ಭಯ, ಎದೆ ಢವಢವ, ಮಾನಸಿಕ ಅಸ್ಥಿರತೆ. ಹಸಿವಾಗುತ್ತದೆ, ಜೀರ್ಣಕ್ರಿಯೆ ಸೂಕ್ತವಾಗಿದೆ, ಮಲವಿಸರ್ಜನೆ ಸರಿಯಾಗಿ ಆಗುತ್ತಿಲ್ಲ. ಏನು ಮಾಡಲಿ?

| ಮಲ್ಲಿಕಾರ್ಜುನ ಜನವಾಡ, ಕಲಬುರಗಿ

ನೀವೇ ತಿಳಿಸಿದಂತೆ ಅಪಘಾತವಾದಂದಿನಿಂದ ತಲೆನೋವು ನಿಮ್ಮನ್ನು ಬಾಧಿಸುತ್ತಿದೆ. ನಿದ್ರೆ ಬಾರದಿರುವುದು ಸಹ ತಲೆನೋವಿಗೆ ಕಾರಣವಿರಬಹುದು. ಸರ್ಪಸುತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಬರುತ್ತದೆ. ಕೆಲವರಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ದಮ್ಮು, ಕಫದ ಸಮಸ್ಯೆಗೆ ನೀವೇ ತಿಳಿಸಿದಂತೆ ಧೂಮಪಾನ ಬಹುಮುಖ್ಯ ಕಾರಣ. ನೀವು ದಶಮೂಲಾರಿಷ್ಟ ಮತ್ತು ಪಥ್ಯಾದಿ ಕಾಡಾವನ್ನು ಮೂರು ಚಮಚೆಗೆ ನೀರು ಬೆರೆಸಿ ಊಟದ ನಂತರ ದಿನಕ್ಕೆರಡು ಬಾರಿ ಸೇವಿಸಿ. ಕುಡಿಯುವ ನೀರಿಗೆ ತುಳಸಿ ಹಾಕಿ ಕಾಯಿಸಿ ಕುಡಿಯಿರಿ. ರಾತ್ರಿ ಎಂಟು ಗಂಟೆಯೊಳಗೇ ಊಟ ಮಾಡಿ. ರಾತ್ರಿ ಊಟದ ನಂತರ 20 ನಿಮಿಷ ನಡಿಗೆ ಒಳ್ಳೆಯದು. ಮಲಗುವ ಮುಂಚೆ ಬಿಸಿ ನೀರು ಕುಡಿಯಿರಿ. ಕಾಫಿ, ಟೀ ಸೇವನೆ, ಕರಿದ ಪದಾರ್ಥ, ಖಾರ ಹೆಚ್ಚು ಸೇವಿಸಬೇಡಿ. ರಸ್ನಾದಿ ಚೂರ್ಣವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ನೆತ್ತಿಯ ಮೇಲೆ ವೀಳ್ಯೆದೆಲೆಯ ಮೇಲಿಟ್ಟು ತಲೆಗೆ ಕರವಸ್ತ್ರ ಕಟ್ಟಿಕೊಂಡು ಮೂರು ಗಂಟೆಗಳ ಕಾಲ ಇಟ್ಟಲ್ಲಿ ತಲೆನೋವು ಕಡಿಮೆಯಾಗುತ್ತದೆ.

ನಾನು 61 ವರ್ಷದ ಗೃಹಿಣಿ. 5-6 ತಿಂಗಳ ಹಿಂದೆ ನನಗೆ ಎಡಗಡೆ ಕಂಕುಳಿನಲ್ಲಿ ಒಂದು ಪೈಸೆಯಷ್ಟು ಅಗಲದ ಫಂಗಸ್ ಆಯಿತು. ಅದಕ್ಕೆ ಟ್ರೀಟ್​ವೆುಂಟ್ ತಗೊಂಡ ಮೇಲೆ ಮುಕ್ಕಾಲು ಭಾಗ ಕಡಿಮೆಯಾಗಿದ್ದಾಗ ಇದ್ದಕ್ಕಿದ್ದಂತೆ ಮುಖ, ಮೈಕೈ ಭಾಗ ಎಲ್ಲ ಚಟ್​ಚಟ್ ಅಂತ ಕಡಿಯಲಿಕ್ಕೆ ಶುರುವಾಯ್ತು. ಫಂಗಸ್ ಕಡಿಮೆಯಾಯ್ತು. ಆದರೆ, ಕಡಿಯೋದು ಮಾತ್ರ ಕಡಿಮೆಯಾಗಿಲ್ಲ. ಅದಕ್ಕೂ ಚಿಕಿತ್ಸೆ ತಗೊಂಡಿದ್ದೇನೆ, ಆದರೂ ನಿಲ್ತಾ ಇಲ್ಲ. ಇತ್ತೀಚೆಗೆ ನನಗೆ ತಲೆ ತಿರುಗುತ್ತಿದೆ. ಬಿಪಿ ಎಲ್ಲ ನಾರ್ಮಲ್ ಇದೆ. ಅಂಗಾತ ಮಲಗಿರುವಾಗ, ತಲೆ ದಿಂಬಿಗೆ ಯಾಕಿದಾಗ, ಆಕಡೆ ಈಕಡೆ ಹೊರಳಿದಾಗ, ಕುತ್ತಿಗೆ ಎತ್ತಿ ಮೇಲೆ ನೋಡಿದಾಗ, ಕೆಳಗೆ ನೋಡಿದಾಗ 2 ಸೆಕೆಂಡ್ ತಲೆ ತಿರುಗಿ ಆಮೇಲೆ ಸರಿಯಾಗುತ್ತದೆ. ಇವೆರಡಕ್ಕೂ ಪರಿಹಾರ ಹೇಳಿ.

| ಹೆಸರು, ಊರು ಬೇಡ

ನೀವು ಖದಿರಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಊಟದ ನಂತರ ಸೇವಿಸಿ. ಬೇವಿನೆಣ್ಣೆಯಲ್ಲಿ ಅರಿಶಿಣ ಹಾಕಿ ಕಾಯಿಸಿಟ್ಟುಕೊಂಡು ಈ ಎಣ್ಣೆಯನ್ನು ನವೆಯಾಗುವ ಜಾಗಕ್ಕೆ ಪ್ರತಿದಿನ ಸ್ನಾನಕ್ಕೆ ಮುಂಚೆ ಲೇಪಿಸಿಕೊಂಡು ಒಂದು ಗಂಟೆ ನಂತರ ಸ್ನಾನ ಮಾಡಿ. ಇನ್ನು ನಿಮ್ಮ ತಲೆತಿರುಗುವ ಸಮಸ್ಯೆ. ಕಿವಿಯ ಒಳಗಿನ ಸಮಸ್ಯೆಯಿಂದಲೂ ಹೀಗಾಗುತ್ತದೆ. ವರ್ಟಿಗೋ ಸಮಸ್ಯೆಯು ಕೆಲವು ಬಾರಿ ನಿದ್ರೆಗೆಡುವುದರಿಂದಲೂ ಮಾನಸಿಕ ಒತ್ತಡದಿಂದಲೂ ಉಂಟಾಗುತ್ತದೆ. ಮಲಗುವಾಗ ದಿಂಬು ಎತ್ತರವಾಗಿ ಇಟ್ಟುಕೊಳ್ಳಿ. ಒಮ್ಮೆ ಕಿವಿ ಮೂಗು ಗಂಟಲು ತಜ್ಞರಲ್ಲಿ ತಪಾಸಣೆ ಮಾಡಿಸಿಕೊಂಡು ಒಳಗಿವಿಯ ತೊಂದರೆ ಬಗ್ಗೆ ಅರಿತುಕೊಳ್ಳಿ. ಮಲಗಿದಾಗ, ಮಗ್ಗಲು ಬದಲಾಯಿಸುವಾಗ, ಏಳುವಾಗ ನಿಧಾನವಾಗಿ ಏಳಿ. ಅಮೃತಬಳ್ಳಿ ಚೂರ್ಣವನ್ನು ದಿನಕ್ಕೆರಡು ಬಾರಿ ಒಂದು ಚಮಚೆಯಷ್ಟು ಜೇನುತುಪ್ಪ ಬೆರೆಸಿ ಸೇವಿಸಿ. ಮಾನಸಿಕ ಒತ್ತಡ ತಗ್ಗಿಸಿಕೊಳ್ಳಲು ಯೋಗ, ಧ್ಯಾನ, ಸಂಗೀತ ಆಲಿಸುವುದು ಸಹಕಾರಿ.

Leave a Reply

Your email address will not be published. Required fields are marked *

Back To Top