ರೊಟ್ಟಿ, ಚಟ್ನಿ ಹಂಚಿ ಪ್ರತಿಭಟನೆ

ಲಕ್ಷ್ಮೇಶ್ವರ: ಪ್ರತ್ಯೇಕ ರಾಜ್ಯ ಬೇಡಿಕೆಗೆ ಒತ್ತಾಯಿಸಿ ಉತ್ತರ ಕರ್ನಾಟಕದ 13 ಜಿಲ್ಲೆಗಳ ಬಂದ್ ಕರೆ ನೀಡಿದ್ದ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಬೆಂಬಲಾರ್ಥ ಗುರುವಾರ ಪಟ್ಟಣದಲ್ಲಿ ತಾಲೂಕು ಹೋರಾಟ ಸಮಿತಿಯಿಂದ ರೊಟ್ಟಿ, ಚಟ್ನಿ ಹಂಚಿ ಪ್ರತಿಭಟಿಸಲಾಯಿತು.

ಪಟ್ಟಣದ ಪೇಟೆ ಹನುಮಂತ ದೇವರ ದೇವಸ್ಥಾನದಿಂದ ತಮಟೆ ಬಡಿಯುತ್ತ ಘೊಷಣೆ ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ಹೊಸ ಬಸ್​ನಿಲ್ದಾಣದ ಹತ್ತಿರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಉತ್ತರ ಕರ್ನಾಟಕದ ವಿಶೇಷ ಆಹಾರ ಖಡಕ್​ರೊಟ್ಟಿ, ಚಟ್ನಿ, ಮೊಸರು, ಈರುಳ್ಳಿ, ಮೆಣಸಿನಕಾಯಿ, ಟೊಮ್ಯಾಟೋ ಹಂಚುವ ಮೂಲಕ ಗಮನ ಸೆಳೆದರು.

ಶಿರಹಟ್ಟಿ ತಾಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಉತ್ತರ ಕರ್ನಾಟಕದ ಅಭಿವೃದ್ಧಿ, ಬೇಕು-ಬೇಡಿಕೆಗಳಿಗೆ ಈ ಹಿಂದಿನ ಯಾವುದೇ ಸರ್ಕಾರಗಳೂ ಸ್ಪಂದಿಸಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಕೇವಲ ತಮ್ಮ ರಾಜಕೀಯ ಪ್ರಭಾವದ ನಾಲ್ಕಾರು ಕ್ಷೇತ್ರಗಳಿಗೆ ಮಾತ್ರ ಸರ್ಕಾರದ ಅನುದಾನ ನೀಡಿದ್ದನ್ನು ಪ್ರಶ್ನಿಸಿದರೆ ಉದ್ಧಟತನ ಮಾತನಾಡಿದ್ದಾರೆ. ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ರೈತರ ಎಲ್ಲ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ ಸಿಎಂ ಮಾತಿಗೆ ತಪ್ಪಿದ್ದಾರೆ. ಸಾಲ ಮನ್ನಾದಲ್ಲಿಯೂ ಉತ್ತರ ಕರ್ನಾಟಕದ ರೈತರಿಗೆ ಶೇ.35 ರಷ್ಟು ಮಾತ್ರ ಲಾಭವಾದರೆ ದಕ್ಷಿಣ ಕರ್ನಾಟಕಕ್ಕೆ ಶೇ.65 ರಷ್ಟು ಲಾಭ ದೊರೆತಿದೆ. ಬಜೆಟ್​ನಲ್ಲೂ ಉತ್ತರ ಕರ್ನಾಟಕಕ್ಕೆ ಯಾವುದೇ ಬೃಹತ್ ಯೋಜನೆಗಳು ದೊರೆತಿಲ್ಲ. ಈಗ ಪ್ರತ್ಯೇಕ ರಾಜ್ಯ ಹೋರಾಟದ ಕೂಗು ಜೋರಾದ ಕೂಡಲೇ ಎಚ್ಚೆತ್ತ ಸಿಎಂ ಮೂಗಿಗೆ ಬೆಣ್ಣೆ ಸವರುವ ಮಾತುಗಳನ್ನಾಡಿ ಹೋರಾಟ ಹತ್ತಿಕ್ಕುವ ಕಾರ್ಯ ಮಾಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗೆಗೆ ನೀಡಿರುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಮುಂದಾಗದಿದ್ದರೆ ಇವತ್ತಿನ ಸಣ್ಣ ಕೂಗು ತೆಲಂಗಾಣ ಹೋರಾಟಕ್ಕಿಂತಲೂ ದೊಡ್ಡಮಟ್ಟದ್ದಾಗಲಿದೆ ಎಂದು ಎಚ್ಚರಿಸಿದರು.

ಹಿರಿಯ ಮುಖಂಡರಾದ ನೀಲಪ್ಪ ಕರ್ಜೆಕಣ್ಣವರ, ಯಲ್ಲಪ್ಪ ಹಾದಿಮನಿ, ಚಂದ್ರಗೌಡ ಪಾಟೀಲ, ಬಸವರಾಜ ಕುಂಬಾರ, ಅಶೋಕ ತೋಟದ ಸರಕಾರ ಧೋರಣೆ ಖಂಡಿಸಿ ಮಾತನಾಡಿದರು. ಈಶ್ವರ ಕುಂಬಾರ, ಬಸವರಾಜ ಕುಂಬಾರ, ಮಹಾಂತೇಶ ಗೋಂದಿ, ಲಕ್ಷ್ಮಣ ಹಳ್ಳಿಕೇರಿ, ನವೀನ ಕುಂಬಾರ, ಫಕೀರೇಶ ಅಣ್ಣಿಗೇರಿ, ಪ್ರವೀಣ ಆಚಾರಿ, ಗಂಗಪ್ಪ ಗೊಜನೂರ, ಮಲ್ಲೇಶ ಕುಂಬಾರ, ನೂರಸಾಹೇಬ ಪಟವೇಗಾರ, ಬಸವರಾಜ ಕರೆಯತ್ತಿನ, ಪ್ರಕಾಶ ರ್ಬಾ, ಬಸವರಾಜ ಕಲ್ಲೂರ,ಇತರರು ಪ್ರತಿಭಟನೆಯಲ್ಲಿ ಹಾಜರಿದ್ದರು. ರಸ್ತೆಯಲ್ಲಿ ಕುಳಿತು ಖಟಕ್ ರೊಟ್ಟಿ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಮೊಸರು, ಈರುಳ್ಳಿ ಮೆಣಸಿನಕಾಯಿ ಇತ್ಯಾದಿಗಳನ್ನು ತಿಂದು ಪ್ರತಿಭಟನೆ ನಡೆಸಿದರು. ತಹಸೀಲ್ದಾರರ ಪರವಾಗಿ ಕಂದಾಯ ನಿರೀಕ್ಷಕ ಎಸ್.ಎಸ್.ಪಾಟೀಲ ಮನವಿ ಸ್ವೀಕರಿಸಿದರು. ಪಿಎಸ್​ಐ ವಿಶ್ವನಾಥ ಚೌಗಲೆ ಸೂಕ್ತ ಬಂದೂಬಸ್ತ್ ಏರ್ಪಡಿಸಿದ್ದರು.