ರೈಲ್ವೆ, ವಿಮಾನ, ಶಿಕ್ಷಣ ವ್ಯವಸ್ಥೆ ಮಾಡಿದ್ದು ಯಾರು?

ಧಾರವಾಡ:ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ವಿನಯ ಕುಲಕರ್ಣಿ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರಚಾರ ನಡೆಸಿದರು.

ತಡಸ ಗ್ರಾಮದ ಬಹಿರಂಗ ಸಭೆಯಲ್ಲಿ ಮಾತನಾಡಿದ ವಿನಯ, 3 ಬಾರಿ ಗೆದ್ದರೂ ಕ್ಷೇತ್ರಕ್ಕೆ ಪ್ರಲ್ಹಾದ ಜೋಶಿ ಕೊಡುಗೆ ಏನೂ ಇಲ್ಲ. 60 ವರ್ಷಗಳಿಂದ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತ್ತಾರೆ. ಹಾಗಾದರೆ ರೈಲ್ವೆ, ವಿಮಾನ, ವಿದ್ಯುತ್, ಶಿಕ್ಷಣ ವ್ಯವಸ್ಥೆ ಮಾಡಿದ್ದು ಕಾಂಗ್ರೆಸ್ ಎನ್ನುವುದನ್ನು ಅರಿತುಕೊಳ್ಳಬೇಕು. ಬಿಜೆಪಿ ಹುತಾತ್ಮ ಸೈನಿಕರ ಹೆಸರಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. 15 ವರ್ಷ ಸಂಸದರಾದ ಜೋಶಿ ಸಂಸತ್ತಿನಲ್ಲಿ ಒಮ್ಮೆಯೂ ರೈತರ ಬಗ್ಗೆ ಚಕಾರ ಎತ್ತಲಿಲ್ಲ. ರೈತರ ಆತ್ಮಹತ್ಯೆಯಾದಾಗ ತುಟಿ ಪಿಟಕ್ಕೆನ್ನಲಿಲ್ಲ. ಅನ್ನದಾತರ ಬವಣೆ ಬಗ್ಗೆ ಸೊಲ್ಲೆತ್ತದ ಇಂಥವರನ್ನು ಶಾಶ್ವತವಾಗಿ ಮನೆಗೆ ಕಳಿಸುವುದು ಉತ್ತಮ. ರೈತನ ಮಗನಾಗಿ ನಿಮ್ಮೆಲ್ಲರ ಮನೆ ಮಗನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಮಾತನಾಡಿ, ಕಳೆದ ಬಾರಿ ಅಚ್ಛೇ ದಿನ್ ಎಂದು ನಂಬಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಅಚ್ಛೆ ದಿನ್ ಬಂದಿದ್ದು ಜೋಶಿ ಅವರಿಗೆ ಮಾತ್ರ. ಈ ಬಾರಿ ಪ್ರಲ್ಹಾದ ಜೋಶಿ ಅವರನ್ನು ಮನೆಗೆ, ವಿನಯ ಕುಲಕರ್ಣಿ ಅವರನ್ನು ದಿಲ್ಲಿಗೆ ಕಳುಹಿಸಲು ಜನ ನಿರ್ಧರಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಿಗ್ಗಾಂವಿಯೂ ಇದೆ ಎಂಬುದು ಜೋಶಿ ಅವರಿಗೆ ಗೊತ್ತಿಲ್ಲ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ದೇಶದ ಜನತೆಗೆ ಐದೇ ವರ್ಷಗಳಲ್ಲಿ ಮೋದಿ ಸರ್ಕಾರ ಬೇಡವಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ದೇವಕಿ ಯೋಗಾನಂದ, ಹನುಮರೆಡ್ಡಿ, ಪ್ರೇಮಾ ಪಾಟೀಲ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇದೇ ವೇಳೆ ತಡಸ ಗ್ರಾಮದ ಭಗವಾನ್ ಶ್ರೀ ಆದಿನಾಥ ಜಿನಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಅಡವಿ ಸೋಮಾಪುರ, ಧುಂಡಸಿ, ಕುಂದೂರ, ಬಾಡ, ಬಂಕಾಪುರ, ಶಿಗ್ಗಾಂವಿ, ಕಾರಡಗಿ ಗ್ರಾಮಗಳಲ್ಲಿ ರೋಡ್ ಶೋ, ಪಾದಯಾತ್ರೆ ಹಾಗೂ ಬಹಿರಂಗ ಸಭೆ ನಡೆಸಿ ಮತ ಯಾಚಿಸಿದರು.

Leave a Reply

Your email address will not be published. Required fields are marked *