ರೈತ ನಾಯಕನ ಮೇಲೆ ಹಲ್ಲೆ, ಬಂಧನಕ್ಕೆ ಆಕ್ರೋಶ

ಮಂಡ್ಯ/ಪಾಂಡವಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕರಾಜೇ ಅರಸ್ ಮೇಲೆ ಹಲ್ಲೆ ಮಾಡಿ ಬಂಧಿಸಿರುವ ಸಬ್ ಇನ್ಸ್‌ಪೆಕ್ಟರ್ ಬಾಲು ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕಾವೇರಿ ವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಹೆದ್ದಾರಿ ಸಂಚಾರ ತಡೆದು ಇನ್ಸ್‌ಪೆಕ್ಟರ್ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅನ್ಯಾಯಕ್ಕೆ ಒಳಗಾದವರ ಪರವಾಗಿ ನ್ಯಾಯ ಕೇಳಲು ಬೆಟ್ಟದಪುರ ಪೊಲೀಸ್ ಠಾಣೆಗೆ ಹೋದ ರಾಜ್ಯ ನಾಯಕ ಲೋಕರಾಜೇ ಅರಸ್ ಮೇಲೆ ಅಲ್ಲಿನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಗೂಂಡಾಗಿರಿ ವರ್ತನೆ ಪ್ರದರ್ಶಿಸಿದ್ದಾರೆ. ಇದನ್ನು ಖಂಡಿಸಿದ ಲೋಕರಾಜೇಅರಸ್ ಅವರ ಮೇಲೆ ಹಲ್ಲೆ ಮಾಡಿ, ಸುಳ್ಳು ಮೊಕದ್ದಮೆ ದಾಖಲಿಸಿ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಇದೊಂದು ಅಮಾನವೀಯ ಕೃತ್ಯವಾಗಿದ್ದು, ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾಗಿದೆ. ಆದ್ದರಿಂದ ತಕ್ಷಣ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ರಾಜ್ಯ ಉಪಾಧ್ಯಕ್ಷ ಯರಗನಹಳ್ಳಿ ರಾಮಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಜಿ.ಎಸ್.ಲಿಂಗಪ್ಪಾಜಿ, ಜಿ.ಎ.ಶಂಕರ, ಸಿದ್ದೇಗೌಡ, ಲತಾಶಂಕರ್, ದೇವರಾಜು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪಾಂಡವಪುರ ವರದಿ: ರೈತ ಸಂಘದ ನಾಯಕಿ ಸುನೀತಾ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಐದು ದೀಪ ವೃತ್ತದಲ್ಲಿ ಕೆಲಕಾಲ ರಸ್ತೆ ಸಂಚಾರ ತಡೆ ನಡೆಸಿ ಬೆಟ್ಟದಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಾಲು ಹಾಗೂ ಮಹಿಳಾ ಪೇದೆ ಶ್ರೀಮತಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ನಾಯಕ ಲೋಕರಾಜೇ ಅರಸ್ ಮೇಲೆ ಹಲ್ಲೆ ನಡೆಸಿ ಉದ್ದೇಶ ಪೂರ್ವಕವಾಗಿ ಕೇಸು ದಾಖಲಿಸಿರುವ ಬೆಟ್ಟದಪುರ ಎಸ್‌ಐ ಬಾಲು ಹಾಗೂ ಮಹಿಳಾ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ರಸ್ತೆ ಸಂಚಾರ ತಡೆಯಿಂದಾಗಿ ಮೈಸೂರು, ಮಂಡ್ಯ ಮಾರ್ಗದ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಎಣ್ಣೆಹೊಳೆಕೊಪ್ಪಲು ಮಂಜು, ರಘು, ಕ್ಯಾತನಹಳ್ಳಿ ದಯಾನಂದ್, ಕೆ.ಕೆ.ಗೌಡೇಗೌಡ, ರಾಣಿ, ಯೋಗೇಶ್, ಕೆನ್ನಾಳು ನಾಗರಾಜು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *