ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಳೆರಾಯ ಸೋಮವಾರ ತಡರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿದ್ದು, ತಡವಾಗಿಯಾದರೂ ವರಣಾಬ್ಬರ ಶುಭಾರಂಭಗೊAಡಿದೆ. ಎರಡು ತಿಂಗಳಿAದ ಮಳೆಯಿಲ್ಲದೆ ಕಂಗಾಲಾಗಿದ್ದ ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ರೈತರ ಮೊಗದಲ್ಲಿ ಕಳೆ ಬಂದಿದೆ.
ಕಾಲ ಮಿಂಚುವುದರೊಳಗೆ ವರುಣ ಧರೆಗಿಳಿದಿದ್ದರಿಂದ ಬರದ ಕರಿನೆರಳು ದೂರ ಸರಿದಿದೆ. ಮಂಗಳವಾರ ದಿನವಿಡೀ ಉತ್ತಮ ಮಳೆಯಾಗಿದ್ದು, ಬುಧವಾರವೂ ಮುಂದುವರಿಯಲಿದೆ. ಅರ್ಧಂಬರ್ಧ ಆಗಿದ್ದ ಬಿತ್ತನೆ ಚಟುವಟಿಕೆ ಚುರುಕುಗೊಳ್ಳಲಿದೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗೆ ತುಂಬ ಅನುವು ಆಗಲಿದೆ. ಕುಡಿವ ನೀರಿನ ಬವಣೆ ಸಹ ನೀಗಲಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೃಗಶಿರ ನಂತರ ಕಳೆದ ೫ರಂದು ಒಂದಿಷ್ಟು ಮಳೆಯಾಗಿ ಮರೆಯಾಗಿತ್ತು. ಈಗ ೨೪ ಗಂಟೆಗಳಿAದ ಕೊಂಚ ಬಿರುಸಿನ ಮಳೆಯಾಗುತ್ತಿದೆ.
ಕಲಬುರಗಿ ನಗರ ಸೇರಿ ಜಿಲ್ಲಾದ್ಯಂತ ೨೪ ಗಂಟೆಗಳಿAದ ನಿರಂತರ ತುಂತುರು ಮಳೆಯಾಗುತ್ತಿದೆ. ಕೆಲ ಹೊತ್ತು ಜೋರು, ಮತ್ತೆ ಸಣ್ಣ, ಒಮ್ಮೆ ತುಂತುರುವಿನAತೆ ಬರುತ್ತಲೇ ಇದೆ. ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಮೂಲಗಳ ಪ್ರಕಾರ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನ ೮ರವರೆಗೆ ಜಿಲ್ಲೆಯಲ್ಲಿ ಸರಾಸರಿ ೧೦.೫ ಮಿಮೀ ಮಳೆಯಾಗಿದೆ. ಮಳೆ ಶುರುವಾದಾಗಿನಿಂದ ಹಿಡಿದರೆ ೨೪-೨೫ ಎಂಎA ಮಳೆಯಾಗಿರುವ ಅಂದಾಜಿದೆ. ಹವಾಮಾನ ತಜ್ಞರ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಎರಡ್ಮೂರು ದಿನಗಳಲ್ಲಿ ೩೫-೪೨ ಮಿಮೀ ಮಳೆಯಾಗುವ ಸಾಧ್ಯತೆ ಇದೆ.
ಸೋಮವಾರ ರಾತ್ರಿ ಸ್ವಲ್ಪ ಮಳೆ ಬಂದು ತಣ್ಣಗಾಯಿತು. ತಡರಾತ್ರಿ ಶುರುವಾದ ಮಳೆ ಮಂಗಳವಾರ ದಿನವಿಡೀ ಸುರಿದಿದೆ. ಇದರಿಂದಾಗಿ ಬಿತ್ತನೆ ಮಾಡಿರುವ ಬೆಳೆಗಳಿಗೆ ಅನುವು ಜತೆಗೆ ಬಿತ್ತನೆ ಮಾಡಲೂ ಅನುಕೂಲ ಮಾಡಿಕೊಟ್ಟಿದೆ.
ಇಷ್ಟು ದಿನ ಮಳೆಯಾಗದ್ದರಿಂದ ಮಣ್ಣಿನ ಮಕ್ಕಳು ಕಂಗಾಲಾಗಿದ್ದರು. ಕೆಲವರು ಬಿತ್ತನೆ ಮಾಡಿದ್ದರೆ, ಕೆಲವರು ಎಲ್ಲ ತಯಾರಿ ಮಾಡಿಕೊಂಡು ಆಕಾಶದತ್ತ ಮುಖ ಮಾಡಿದ್ದರು. ಈಗ ಮಳೆ ಆಗುತ್ತಿರುವುದು ಕೃಷಿಕರಲ್ಲಿ ಖುಷಿಯ ಸಿಂಚನ ಮೂಡಿಸಿದೆ.
ಸದ್ಯದ ಮಳೆ ಪ್ರಮಾಣ ನೋಡಿದರೆ ಸರಾಸರಿಗಿಂತಲೂ ಕೊಂಚ ಕೊರತೆ ಇದೆ. ಆದರೆ ಬಿತ್ತನೆಗೆ ಪರಿಪೂರ್ಣವಾಗಿದೆ. ಲಭ್ಯ ಮಾಹಿತಿಯಂತೆ ಯಡ್ರಾಮಿ, ಆಳಂದ ತಾಲೂಕಿನ ಕೆಲವೆಡೆ ಸ್ವಲ್ಪ ಕಡಿಮೆಯಾಗಿದೆ. ಅದನ್ನು ಬಿಟ್ಟರೆ ಕಲಬುರಗಿ, ಅಫಜಲಪುರ, ಆಳಂದ, ಕಮಲಾಪುರ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ, ಸೇಡಂ, ಕಾಳಗಿ, ಶಹಾಬಾದ್ ಮೊದಲಾದ ಕಡೆ ೨೪ ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ.
ಜಿಲ್ಲೆಯ ೭.೬೮ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಮಳೆ ಕೊರತೆಯಿಂದಾಗಿ ಮುಂಗಾರಿನಲ್ಲಿ ಶೇ.೫೩ ಅಂದರೆ ೪.೪೫ ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಈಗ ಉಳಿದೆಡೆಯೂ ಬಿತ್ತನೆ ಆಗಿದೆ.