ರೈತರ ಪ್ರಗತಿಗೆ ಹೈನುಗಾರಿಕೆ ಸಹಕಾರಿ

ಕನಕಪುರ: ಹೈನುಗಾರಿಕೆಯಿಂದ ಹಾಲು ಉತ್ಪಾದಕರ ಜೀವನಮಟ್ಟ ಸುಧಾರಿಸಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ತುಂಗಣಿ ಗ್ರಾಮದಲ್ಲಿ ಭಾನುವಾರ ಪಶು ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಲೀಟರ್ ಹಾಲಿಗೆ ನೀಡುತ್ತಿದ್ದ 5 ರೂ. ಪ್ರೋತ್ಸಾಹಧನವನ್ನು ಈ ಬಾರಿ ಬಜೆಟ್​ನಲ್ಲಿ 1ರೂ. ಹೆಚ್ಚಿಸಲಾಗಿದೆ. ಇದರಿಂದ 22 ಲಕ್ಷ ಹಾಲು ಉತ್ಪಾದಕರಿಗೆ ಪ್ರಯೋಜನವಾಗಲಿದೆ ಎಂದರು.

ಶಿವನಹಳ್ಳಿ ಬಳಿ 500ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೇರಿ ನಿರ್ವಣವಾಗುತ್ತಿದ್ದು, ಇದರಿಂದ ಹೈನುಗಾರರಿಗೆ ಅನುಕೂಲವಾಗಲಿದೆ. ಅಲ್ಲದೆ, ನೂರಾರು ಉದ್ಯೋಗಾವಕಾಶ ಲಭ್ಯವಾಗುತ್ತವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಸ್ತ್ರೀ ಶಕ್ತಿ ಸಂಘಗಳು, ರೈತರು ಖಾಸಗಿ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಪಡೆಯುತ್ತಿರುವುದನ್ನು ಮನಗಂಡು ಬಿಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ದರಲ್ಲಿ 5ರಿಂದ 10 ಲಕ್ಷ ರೂ.ವರೆಗೆ ಸಾಲ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಪಂ ಅಧ್ಯಕ್ಷ ಎಂ.ಎನ್. ನಾಗರಾಜು, ಸದಸ್ಯೆ ಉಷಾರವಿ, ತಾಪಂ ಅಧ್ಯಕ್ಷ ಧನಂಜಯ್ಯ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಸುಕನ್ಯಾ ರಂಗಸ್ವಾಮಿ , ವಿಎಸ್​ಎಸ್​ಎನ್ ಅಧ್ಯಕ್ಷ ಮುದ್ದೇಗೌಡ, ಕಾಂಗ್ರೆಸ್ ಮುಖಂಡ ರಾಯಸಂದ್ರರವಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಕೆ. ಶಿವರಾಮು, ಬನ್ನಿಕುಪ್ಪೆ ಗ್ರಾಪಂ ಸದಸ್ಯ ಶಿವನಂಜಯ್ಯ, ಪಿಡಿಒ ಮುನಿರಾಜು, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಸಿ.ಕುಮಾರ್, ಜಿಲ್ಲಾ ಪ್ರಭಾರಿ ಉಪ ನಿರ್ದೇಶಕ ಡಾ. ವರದರಾಜು, ಪಶುವೈದ್ಯಾಧಿಕಾರಿ ಡಾ.ರೆಹಮಾನ್, ಪಶು ಪರೀಕ್ಷಕ ಎಚ್.ಜೆ. ರವಿ, ಗೋವಿಂದರಾಜು ಮತ್ತಿತರರು ಇದ್ದರು.